Hardik Pandya: ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್‌ಗೆ ಸೇರ್ಪಡೆ.. ಮುಂಬೈ ಇಂಡಿಯನ್ಸ್ ತೊರೆದ್ರಾ?
Hardik Pandya: ಐಪಿಎಲ್ 2027 ಹರಾಜಿಗೂ ಮುನ್ನ ತೆರೆಮರೆಯಲ್ಲಿ ಆಟಗಾರರ ವಿನಿಯಮ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆಯೇ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತೊರೆದು ಪಂಜಾಬ್ ಕಿಂಗ್ಸ್‌ಗೆ ಹೋಗಲಿದ್ದಾರೆ ಎನ್ನುವ ಬಿಗ್ ಅಪ್ಡೇಟ್ ಲಭ್ಯವಾಗಿದೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.
ಮುಂಬೈ ಇಂಡಿಯನ್ಸ್‌ನ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್‌ಗೆ ನೀಡಿ, ಬದಲಿಗೆ ಪಂಜಾಬ್‌ನಿಂದ ಭಾರತದ ಪ್ರಮುಖ ಎಡಗೈ ವೇಗಿ ಅರ್ಷದೀಪ್ ಸಿಂಗ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ವಿಷ್ಣು ವಿನೋದ್ ಅವರನ್ನು ಎಂಐ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿವೆ.

ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಫಲ
ಈ ಎರಡೂ ಫ್ರಾಂಚೈಸಿಗಳು ಈ ವಿನಿಮಯ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದು, ಇದಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳು ಮತ್ತು ಪ್ರಕ್ರಿಯೆಗಳು ಐಪಿಎಲ್ ಅಧಿಕಾರಿಗಳಿಗೆ ಶೀಘ್ರದಲ್ಲೇ ಸಲ್ಲಿಕೆಯಾಗಲಿವೆ. 2024ರ ಹರಾಜಿಗೂ ಮುನ್ನ ಗುಜರಾತ್ ಟೈಟನ್ಸ್ ತೊರೆದು ಮುಂಬೈ ಇಂಡಿಯನ್ಸ್‌ಗೆ ಮರಳಿದ್ದ ಹಾರ್ದಿಕ್, ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಹಿಂಪಡೆದಿದ್ದರು. ಆದರೆ, ಅವರ ಸಾರಥ್ಯದಲ್ಲಿ ಮುಂಬೈ ಕಳೆದ ಎರಡು-ಮೂರು ಆವೃತ್ತಿಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.
ಮುಂಬೈ ಇಂಡಿಯನ್ಸ್ ಹಾರ್ದಿಕ್ ಅವರನ್ನು ಟ್ರೇಡ್ ಮಾಡಲು ಕೊಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಸೇರಿದಂತೆ ಕೆಲವು ತಂಡಗಳ ಜೊತೆಗೂ ಮಾತುಕತೆ ನಡೆಸಿತ್ತು ಎನ್ನಲಾಗಿದೆ. ಆದರೆ ಅಂತಿಮವಾಗಿ ಪಂಜಾಬ್ ನೀಡಿದ ಅರ್ಷದೀಪ್ ಸಿಂಗ್ ಮತ್ತು ವಿಷ್ಣು ವಿನೋದ್ ಅವರ ಆಫರ್ ಮುಂಬೈಗೆ ಸೂಕ್ತವೆನಿಸಿದೆ ಎನ್ನಲಾಗುತ್ತಿದೆ.
ರಿಕಿ ಪಾಂಟಿಂಗ್ ಅವರ ತರಬೇತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಜಾಬ್ ಕಿಂಗ್ಸ್, ಹಾರ್ದಿಕ್ ಅವರ ಆಗಮನದಿಂದ ಮಧ್ಯಮ ಕ್ರಮಾಂಕ ಮತ್ತು ಆಲ್ ರೌಂಡರ್ ಕೊರತೆಯನ್ನು ನೀಗಿಸಲು ಯೋಜಿಸಿದೆ. ಅಲ್ಲದೆ, ಅರ್ಷದೀಪ್ ಅವರ ನಿರ್ಗಮನದಿಂದ ಉಂಟಾಗುವ ವೇಗದ ಬೌಲಿಂಗ್ ಕೊರತೆಯನ್ನು ಸರಿದೂಗಿಸಲು ಲಕ್ನೋ ಸೂಪರ್ ಜೈಂಟ್ಸ್‌ನಿಂದ ಮೊಹ್ಸಿನ್ ಖಾನ್ ಪಡೆದುಕೊಳ್ಳಲು ಮಾರ್ಕಸ್ ಸ್ಟೋಯ್ನಿಸ್ ಅವರನ್ನು ನೀಡುವ ಇನ್ನೊಂದು ಟ್ರೇಡ್ ಒಪ್ಪಂದಕ್ಕೂ ಸಿದ್ಧತೆ ನಡೆಸುತ್ತಿದೆ.
ಅಧಿಕೃತ ಘೋಷಣೆಯೊಂದೇ ಬಾಕಿ
ಈ ಅದಲು-ಬದಲು ಒಪ್ಪಂದಕ್ಕೆ ಉಭಯ ತಂಡಗಳ ಆಡಳಿತ ಮಂಡಳಿಗಳು ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಐಪಿಎಲ್ ಅಧಿಕಾರಿಗಳೊಂದಿಗೆ ನಡೆಯಬೇಕಿರುವ ಅಧಿಕೃತ ದಾಖಲಾತಿ ಪ್ರಕ್ರಿಯೆಗಳು ಮಾತ್ರ ಬಾಕಿಯಿವೆ. ನವೆಂಬರ್ 17ರ ರಿಟೆನ್ಷನ್ ಗಡುವಿನ ಒಳಗಾಗಿ, ಅಂದರೆ ಬಹುಶಃ ಈ ವಾರದ ಕೊನೆಯಲ್ಲಿ ಈ ಒಪ್ಪಂದದ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ. ಆದರೆ ಈ ವದಂತಿಗಳ ಕುರಿತು ಎರಡೂ ಫ್ರಾಂಚೈಸಿಗಳು ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ನಾಯಕ?
ಫ್ರಾಂಚೈಸಿ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಹಾರ್ದಿಕ್ ಪಾಂಡ್ಯ ತಂಡ ತೊರೆಯಲಿದ್ದಾರೆ ಎಂಬ ವದಂತಿಗಳು ಈ ಹಿಂದೆ ಕೇಳಿಬಂದಿದ್ದವು. 2027ರ ಸೀಸನ್‌ಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮತ್ತೆ ರೋಹಿತ್ ಶರ್ಮಾ ಅವರಿಗೆ ನೀಡಲು ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ. ತಿಲಕ್ ವರ್ಮಾ ಅವರ ಹೆಸರು ಪರಿಶೀಲನೆಯಲ್ಲಿದ್ದರೂ, ಮುಂಬರುವ ಸೀಸನ್‌ಗೆ ರೋಹಿತ್ ಅವರೇ ಸೂಕ್ತ ನಾಯಕ ಎಂದು ಫ್ರಾಂಚೈಸಿ ಭಾವಿಸಿದೆ.
ಪಂಜಾಬ್‌ನಲ್ಲಿ ಹಾರ್ದಿಕ್ ಪಾಂಡ್ಯ ಪಾತ್ರ ಏನು?
ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ಸೇರಿದರೂ ಅವರಿಗೆ ನಾಯಕತ್ವ ಸಿಗುವ ಸಾಧ್ಯತೆಯಿಲ್ಲ. ಏಕೆಂದರೆ ಶ್ರೇಯಸ್ ಅಯ್ಯರ್ ಈಗಾಗಲೇ ಪಂಜಾಬ್ ತಂಡವನ್ನು ನಾಯಕರಾಗಿ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಹಾರ್ದಿಕ್ ಕೇವಲ ಆಲ್ ರೌಂಡರ್ ಆಟಗಾರನಾಗಿ ಮಾತ್ರ ತಂಡದಲ್ಲಿದ್ದಾರೆ. 2026ರ ಐಪಿಎಲ್ ಆವೃತ್ತಿಯ ಬಳಿಕ ಗಾಯದ ಸಮಸ್ಯೆಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ, ಸದ್ಯ ಬಿಸಿಸಿಐನ 'ಸೆಂಟರ್ ಆಫ್ ಎಕ್ಸಲೆನ್ಸ್'ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.


Click it and Unblock the Notifications
