IPL 2027: ಹಾರ್ದಿಕ್ ಪಾಂಡ್ಯ ಬೇರೆ ತಂಡಕ್ಕೆ ಶಿಫ್ಟ್ ಆಗ್ತಾರಾ? ಮುಂಬೈ ಇಂಡಿಯನ್ಸ್ ನ್ಯೂ ಪೋಸ್ಟ್ ಭಾರಿ ವೈರಲ್
Hardik Pandya: ಈಗಾಗಲೇ ಐಪಿಎಲ್ 2026ರಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಎಲ್ಲರ ಚಿತ್ತ ಮುಂದಿನ ಸೀಸನ್‌ನತ್ತ ನೆಟ್ಟಿದ್ದು, ಹಾರ್ದಿಕ್ ಪಾಂಡ್ಯ ಅವರು ಎಂಐ ಬಿಟ್ಟು ಬೇರೆ ತಂಡಕ್ಕೆ ಹೋಗುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಈ ನಡುವೆಯೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್‌ನ ಮುಂಬರುವ ಆವೃತ್ತಿಗೂ ಮುನ್ನವೇ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಕುರಿತು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದೆ. ಹಾರ್ದಿಕ್ ಅವರನ್ನು ಬೇರೆ ತಂಡಕ್ಕೆ 'ಟ್ರೇಡ್' ಮಾಡಲು ಯೋಜಿಸಲಾಗುತ್ತಿದೆ ಎಂಬ ವರದಿಗಳು ಹರಿದಾಡುತ್ತಿರುವ ನಡುವೆಯೇ ಎಂಐ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದೆ. ಇದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ.

ಮುಂಬೈ ಇಂಡಿಯನ್ಸ್ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ
ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಾರ್ದಿಕ್ ಪಾಂಡ್ಯ ಅವರು ಅಭ್ಯಾಸ ನಡೆಸುತ್ತಿರುವ ಹಲವು ಫೋಟೋಗಳನ್ನು ಹಂಚಿಕೊಂಡಿದೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಎರಡು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ಅಭಿಮಾನಿಗಳು ಮುಂಬೈ ಇಂಡಿಯನ್ಸ್ ಹಾರ್ದಿಕ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಿದೆ ಎಂಬುದಕ್ಕೆ ಇದು ಸ್ಪಷ್ಟ ಸುಳಿವು ಎಂದು ಭಾವಿಸಿದ್ದಾರೆ. ಮತ್ತೆ ಕೆಲವರು ಇದು ಕೇವಲ ಸಾಮಾನ್ಯ ಪೋಸ್ಟ್ ಆಗಿದ್ದು, ಅವರು ತಂಡ ತೊರೆಯುವುದು ಬಹುತೇಕ ಖಚಿತ ಎಂದು ಹೇಳುತ್ತಿದ್ದಾರೆ. ಸದ್ಯ ಇದೀಗ ಈ ಪೋಸ್ಟ್ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಹಾರ್ದಿಕ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದು ಯಾವಾಗ?
2015ರಲ್ಲಿ ಮುಂಬೈ ಇಂಡಿಯನ್ಸ್ ಮೂಲಕವೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಹಾರ್ದಿಕ್ ಪಾಂಡ್ಯ ಅವರು 2022ರ ಆವೃತ್ತಿಗೆ ಮುನ್ನ ತಂಡದಿಂದ ಬೇರ್ಪಟ್ಟು ಗುಜರಾತ್ ಟೈಟಾನ್ಸ್ ಸೇರಿದ್ದರು. ಗುಜರಾತ್ ತಂಡವನ್ನು ಚೊಚ್ಚಲ ಋತುವಿನಲ್ಲೇ ಚಾಂಪಿಯನ್ ಮಾಡಿದ್ದಲ್ಲದೆ, ಮುಂದಿನ ಆವೃತ್ತಿಯಲ್ಲೂ ಫೈನಲ್‌ವರೆಗೆ ತೆಗೆದುಕೊಂಡು ಹೋಗಿದ್ದರು.
ನಂತರ ಟ್ರೇಡಿಂಗ್ ವಿಂಡೋ ಮೂಲಕ ಮುಂಬೈ ಇಂಡಿಯನ್ಸ್ ಮತ್ತೆ ಹಾರ್ದಿಕ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡು ನಾಯಕತ್ವದ ಜವಾಬ್ದಾರಿಯನ್ನು ನೀಡಿತ್ತು. ಆದರೆ ಈ ಬದಲಾವಣೆ ಫ್ರಾಂಚೈಸಿಗೆ ನಿರೀಕ್ಷಿತ ಯಶಸ್ಸು ನೀಡಲಿಲ್ಲ. 2024ರ ಐಪಿಎಲ್ ಅಂಕಪಟ್ಟಿಯಲ್ಲಿ ಮುಂಬೈ ಕೊನೆಯ ಸ್ಥಾನಕ್ಕೆ ಕುಸಿದರೆ, ನಂತರದ ಆವೃತ್ತಿಯಲ್ಲಿ 9ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು.
ಸುನಿಲ್ ಗವಾಸ್ಕರ್ ಮಹತ್ವದ ಸಲಹೆ
ವರ್ಗಾವಣೆ ಮತ್ತು ಟ್ರೇಡಿಂಗ್ ಕುರಿತು ಕೇಳಿಬರುತ್ತಿರುವ ವದಂತಿಗಳ ಬಗ್ಗೆ ಟೀಮ್ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಟ್ರೇಡಿಂಗ್ ವಿಂಡೋ ಮುಚ್ಚಲು ಇನ್ನೂ ಸಮಯವಿದೆ. ಆದರೆ ಆಟಗಾರನೊಬ್ಬ ಒಂದು ಫ್ರಾಂಚೈಸಿಯಿಂದ ಮತ್ತೊಂದಕ್ಕೆ ವರ್ಗಾವಣೆಯಾಗುವಾಗ ಹಣಕಾಸಿನ ವ್ಯವಹಾರಗಳ ಸಂಖ್ಯೆಗಳು ಕೇವಲ ಎರಡು ಫ್ರಾಂಚೈಸಿಗಳು, ಆಟಗಾರ ಮತ್ತು ಬಿಸಿಲಿಐಗೆ ಮಾತ್ರ ತಿಳಿದಿರುತ್ತವೆ. ಇದರಿಂದಾಗಿ ವೇತನ ಮಿತಿ ನಿಯಮವನ್ನು ಸರಿಯಾಗಿ ಪಾಲಿಸಲಾಗಿದೆಯೇ ಅಥವಾ ಉಲ್ಲಂಘಿಸಲಾಗಿದೆಯೇ ಎಂಬುದು ಇತರ ತಂಡಗಳಿಗೆ ತಿಳಿಯುವುದಿಲ್ಲ ಎಂದು ಹೇಳಿದ್ದಾರೆ.
ಐಪಿಎಲ್ ಪ್ರಪಂಚದ ಅತ್ಯಂತ ದೊಡ್ಡ ಟಿ-20 ಲೀಗ್ ಆಗಿದೆ. ಆದ್ದರಿಂದ ಆಟಗಾರರ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಸುಧಾರಣೆ ಮತ್ತು ಪಾರದರ್ಶಕತೆ ಅಗತ್ಯವಾಗಿದೆ. ಹಣಕಾಸಿನ ವಿವರಗಳನ್ನು ಬಹಿರಂಗಪಡಿಸುವುದರಿಂದ ಯಾವುದೇ ರೀತಿಯ ಶಂಕೆ ಅಥವಾ ಬೆರಳು ತೋರಿಸುವಿಕೆಯನ್ನು ತಡೆಯಬಹುದು ಎಂದು ಅವರು ಮಹತ್ವದ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಇದೀಗ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರ ಕುರಿತ ಪೋಸ್ಟ್ ಹಂಚಿಕೊಂಡಿರುವುದು ಭಾರಿ ಕುತೂಹಲ ಮೂಡಿಸಿದೆ.


Click it and Unblock the Notifications
