Gautam Gambhir: ನಾವು ಜನಪ್ರಿಯ ನಿರ್ಧಾರಗಳ ಪರ ಅಲ್ಲ: ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಹಿಂಗ್ ಹೇಳಿದ್ಯಾಕೆ?
Gautam Gambhir: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಹೆಚ್ಚಿನ ಅವಕಾಶ ನೀಡದಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇದಕ್ಕೆ ಟೀಮ್ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಪ್ರತಿಕ್ರಿಯಿಸಿ ಖಾರವಾಗಿಯೇ ತಿರುಗೇಟು ನೀಡಿದ್ದಾರೆ. 'ಎಲ್ಲರನ್ನೂ ಸಂತೋಷಪಡಿಸುವುದು ನನ್ನ ಕೆಲಸವಲ್ಲ, ಜನಪ್ರಿಯ ನಿರ್ಧಾರಗಳಿಗಿಂತ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನನ್ನ ಕರ್ತವ್ಯ,' ಎಂದು ತಂಡದ ಆಯ್ಕೆ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಆರಂಭಿಕರಾಗಿ ಸುದೀರ್ಘ ಅವಕಾಶ ನೀಡಲಾಗಿತ್ತು. ವೈಭವ್ ಸೂರ್ಯವಂಶಿ ಅವರನ್ನು ಬೆಂಚ್‌ಗೆ ಸೀಮಿತಗೊಳಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದೇನು?
'ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭ. ಆದರೆ ನಮಗೆ ಪ್ರಮುಖವಾಗಿರುವುದು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರಿಗೆ ಸುರಕ್ಷಿತ ಭಾವನೆ ಮೂಡಿಸುವುದು. ತಂಡದಲ್ಲಿ ಅಪಾರ ತತ್ವ ಮತ್ತು ಪ್ರತಿಭೆಯನ್ನು ಕಾಣಬಹುದು. ಆದರೆ ದೀರ್ಘಕಾಲದಿಂದ ತಂಡಕ್ಕಾಗಿ ಉತ್ತಮವಾಗಿ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವುದು ಅಗತ್ಯ. ನಾವು ಸರಣಿಯನ್ನು ಇದೇ ದೃಷ್ಟಿಕೋನದಲ್ಲಿ ತಲುಪಿದ್ದೇವೆ,' ಎಂದು ಹೇಳಿದರು.
ಯುವ ಆಟಗಾರರಿಗೆ ಅವಕಾಶ ನೀಡದಿರುವ ಬಗ್ಗೆ ಮಹತ್ವದ ಮಾಹಿತಿ
ಭಾರತ ತಂಡವು ಸರಣಿಯಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದು 3-0 ಅಂತರದ ಮುನ್ನಡೆ ಸಾಧಿಸಿದ ಮೇಲೆಯೂ ಯುವ ಆಟಗಾರರಿಗೆ ಅವಕಾಶ ನೀಡದಿರುವ ಬಗ್ಗೆ ಎದ್ದಿದ್ದ ಪ್ರಶ್ನೆಗೆ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಕ್ರಿಕೆಟ್ ತತ್ವದಲ್ಲಿ ಫಲಿತಾಂಶ ರಹಿತ ಪಂದ್ಯ ಎಂಬ ಕಲ್ಪನೆಯೇ ಇಲ್ಲ ಎಂದು ಹೇಳಿದ ಅವರು, 'ದೇಶವನ್ನು ಪ್ರತಿನಿಧಿಸುವಾಗ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ,' ಎಂದು ಹೇಳಿದ್ದಾರೆ.
'ಭಾರತೀಯ ತಂಡದಲ್ಲಿ ಆಡುವ ಅವಕಾಶ ಎಷ್ಟು ಕಷ್ಟದಿಂದ ಸಿಗುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ನನ್ನ ಪ್ರಕಾರ ಪ್ರತಿಯೊಂದು ಪಂದ್ಯವೂ ಹೊಸದನ್ನು ಕಲಿಯಲು, ಹೊಸ ಸವಾಲನ್ನು ಎದುರಿಸಲು ಮತ್ತು ಆಟವನ್ನು ಸುಧಾರಿಸಿಕೊಳ್ಳಲು ಸಿಗುವ ಉತ್ತಮ ಅವಕಾಶವಾಗಿದೆ,' ಎಂದು ಗೌತಮ್ ಗಂಭೀರ್ ಅವರು ಹೇಳಿದರು.
ಆಟಗಾರರ ಶ್ರಮವನ್ನು ಶ್ಲಾಘಿಸಿದ ಗೌತಮ್ ಗಂಭೀರ್
ವೆಸ್ಟ್ ಇಂಡೀಸ್ ಸರಣಿ ಮುಗಿದ ಕೇವಲ 24 ಗಂಟೆಗಳಲ್ಲಿ ಭಾರತ ತಂಡವು ನ್ಯೂಜಿಲೆಂಡ್‌ಗೆ ತಲುಪಿತ್ತು. ಸೂಕ್ತ ವಿಶ್ರಾಂತಿ ಮತ್ತು ತರಬೇತಿ ಇಲ್ಲದಿದ್ದರೂ ಭಾರತೀಯ ಆಟಗಾರರು ವಿದೇಶಿ ಪರಿಸ್ಥಿತಿಗೆ ತಕ್ಷಣ ಹೊಂದಿಕೊಂಡಿದ್ದನ್ನು ಗಂಭೀರ್ ಶ್ಲಾಘಿಸಿದ್ದಾರೆ. 'ಅನೇಕ ಯುವ ಆಟಗಾರರಿಗೆ ಇದು ಮೊದಲ ನ್ಯೂಜಿಲೆಂಡ್ ಪ್ರವಾಸವಾಗಿತ್ತು. ಅವರ ತವರಲ್ಲಿ ಕಿವೀಸ್ ಎಷ್ಟು ಅಪಾಯಕಾರಿ ತಂಡ ಎಂಬುದು ಎಲ್ಲರಿಗೂ ಗೊತ್ತು. ಕಠಿಣ ವೇಳಾಪಟ್ಟಿಯ ನಡುವೆಯೂ ನಮ್ಮ ಆಟಗಾರರು ತೋರಿಸಿದ ಬದ್ಧತೆ ನಿಜಕ್ಕೂ ಶ್ಲಾಘನೀಯ,' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಠಿಣ ನಿರ್ಧಾರಗಳ ನಿಲುವಿಗೆ ಬದ್ಧವಾಗಿರುವುದಾಗಿ ಹೇಳಿಕೆ
ಅಂತಿಮವಾಗಿ ಐದನೇ ಟಿ20ಯಲ್ಲಿ ನ್ಯೂಜಿಲೆಂಡ್ ಗೆಲುವಿನೊಂದಿಗೆ ಸರಣಿ 3-2 ಅಂತರದಲ್ಲಿ ಮುಕ್ತಾಯಗೊಂಡರೂ, ತರಬೇತುದಾರರಾಗಿ ತಮ್ಮ ಕಠಿಣ ನಿರ್ಧಾರಗಳ ನಿಲುವಿಗೆ ಗಂಭೀರ್ ಬದ್ಧರಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಯಾಕೆ ಆಡಿಸಲಿಲ್ಲ ಎಂಬ ಬಗ್ಗೆ ಬಹುತೇಕ ಮಂದಿಗೆ ಸ್ಪಷ್ಟನೆ ಸಿಕ್ಕಂತಾಗಿದೆ. ಅದರಲ್ಲೂ ಯಾವ ಪಂದ್ಯವನ್ನು ನಿರ್ಲಕ್ಷ್ಯದಿಂದ ಕಾಣಲು ನಾವು ಇಷ್ಟಪಡುವುದಿಲ್ಲ ಎಂದು ಹೇಳಿರುವುದು ಗಮನ ಸೆಳೆಯುವ ವಿಚಾರವಾಗಿದೆ.


Click it and Unblock the Notifications
