ಫುಟ್ಬಾಲ್ ಅಂದ್ರೆ ರೊನಾಲ್ಡೋ, ಈವರೆಗೂ 'ಫಿಫಾ ವಿಶ್ವಕಪ್' ಗೆದ್ದೇ ಇಲ್ಲ, ಈ ಸಲ ಆದ್ರೂ ಪೋರ್ಚುಗಲ್ಗೆ ಸಿಗುತ್ತಾ ಕಪ್?
FIFA World Cup 2026: ಫುಟ್ಬಾಲ್ ಪ್ರೇಮಿಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆ ಬೀಳುತ್ತಿದೆ. ಜೂನ್ 11ರಿಂದ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋದ 16 ಪ್ರಮುಖ ನಗರಗಳಲ್ಲಿ ಜಗತ್ತಿನ ಅತಿ ದೊಡ್ಡ ಕ್ರೀಡಾ ಹಬ್ಬ 'ಫಿಫಾ ವಿಶ್ವಕಪ್ 2026' ಆರಂಭವಾಗಲಿದೆ. ಮುಂದಿನ ಒಂದು ತಿಂಗಳ ಕಾಲ ನ್ಯೂಯಾರ್ಕ್, ಲಾಸ್ ಎಂಜಲೀಸ್, ಟೊರೊಂಟೊ ಮತ್ತು ಮೆಕ್ಸಿಕೋ ಸಿಟಿಯ ಐತಿಹಾಸಿಕ ಕ್ರೀಡಾಂಗಣಗಳು ವಿಶ್ವದ ಶ್ರೇಷ್ಠ ಆಟಗಾರರ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿವೆ. ಹಾಗಾದ್ರೆ ಈ ಕಾಲ್ಚೆಂಡಿನ ಸಮರದಲ್ಲಿ ಸದ್ದು ಮಾಡಲಿರುವ ಟಾಪ್ 10 ಆಟಗಾರರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಹೊರಟಿರುವ ದಂತಕಥೆಗಳು ಈ ಪಟ್ಟಿಯಲ್ಲಿದ್ದಾರೆ. ಅಲ್ಲದೆ ಜಾಗತಿಕ ವೇದಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿರುವ ಯುವ ಆಟಗಾರರ ಪ್ರದರ್ಶನ ಯಾವ ರೀತಿ ಇರಲಿದೆ ಎಂಬ ಕುತೂಹಲವೂ ಇದೆ.

1. ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ)
2022ರ ಕತಾರ್ ವಿಶ್ವಕಪ್ನಲ್ಲಿ ಅರ್ಜೆಂಟೀನಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದ ಲಿಯೋನೆಲ್ ಮೆಸ್ಸಿ ಈಗ ಮತ್ತೊಮ್ಮೆ ಅಖಾಡಕ್ಕಿಳಿಯುತ್ತಿದ್ದಾರೆ. ಸದ್ಯ 38ನೇ ವಯಸ್ಸಿನ ಇವರು ದಾಖಲೆಯ 6ನೇ ಬಾರಿಗೆ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ಅರ್ಜೆಂಟೀನಾ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಮೆಸ್ಸಿ ಅವರ ನಾಯಕತ್ವ ಮತ್ತು ಪ್ರದರ್ಶನ ಅತ್ಯಂತ ನಿರ್ಣಾಯಕವಾಗಲಿದೆ.
2. ಲ್ಯಾಮಿನ್ ಯಮಲ್ (ಸ್ಪೇನ್)
ಪ್ರಸ್ತುತ ಫುಟ್ಬಾಲ್ ಜಗತ್ತಿನ ಅತ್ಯಂತ ಭರವಸೆಯ ಯುವ ಆಟಗಾರ ಎಂದರೆ ಅದು ಸ್ಪೇನ್ನ ಲಾಮಿನ್ ಯಮಲ್. ಯೂರೋ 2024ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ 18 ವರ್ಷದ ಅದ್ಭುತ ಆಟಗಾರ. ಇದೀಗ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯೊಂದಿಗೆ ತಮ್ಮ ಚೊಚ್ಚಲ ವಿಶ್ವಕಪ್ ಆಡುತ್ತಿದ್ದಾರೆ. ವಯಸ್ಸನ್ನು ಮೀರಿದ ಪ್ರಬುದ್ಧತೆ ಹೊಂದಿರುವ ಯಮಲ್ ಈ ಟೂರ್ನಿಯ ಸಾರಥಿಯಾಗಬಲ್ಲ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ.
3. ಕಿಲಿಯನ್ ಎಂಬಾಪೆ (ಫ್ರಾನ್ಸ್)
ಕಳೆದ ಬಾರಿ ಫೈನಲ್ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿ 'ಗೋಲ್ಡನ್ ಬೂಟ್' ಗೆದ್ದಿದ್ದರೂ, ಪ್ರಶಸ್ತಿ ಕೈತಪ್ಪಿದ ನೋವಿನಲ್ಲಿದ್ದ ಕಿಲಿಯನ್ ಎಂಬಾಪೆ ಈ ಬಾರಿ ಹೊಸ ಹಠದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. 27ನೇ ವಯಸ್ಸಿನ ಈ ಸ್ಫೋಟಕ ಆಟಗಾರ ಇಂದಿಗೂ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಫ್ರಾನ್ಸ್ಗೆ ಮೂರನೇ ವಿಶ್ವಕಪ್ ತಂದುಕೊಡುವ ಜವಾಬ್ದಾರಿ ಇವರ ಮೇಲಿದೆ.
4. ಎರ್ಲಿಂಗ್ ಹಾಲೆಂಡ್ (ನಾರ್ವೆ)
ಬರೋಬ್ಬರಿ 28 ವರ್ಷಗಳ ನಂತರ ನಾರ್ವೆ ದೇಶವನ್ನು ವಿಶ್ವಕಪ್ಗೆ ಅರ್ಹತೆ ಪಡೆಯುವಂತೆ ಮಾಡಿದ ಗೋಲುಗಳ ಮಷೀನ್ ಎರ್ಲಿಂಗ್ ಕೊನೆಗೂ ವಿಶ್ವಕಪ್ ವೇದಿಕೆಯಲ್ಲಿ ಪದಾರ್ಪಣೆ ಮಾಡುತ್ತಿದ್ದಾರೆ. ಯುರೋಪಿಯನ್ ಕ್ವಾಲಿಫೈಯರ್ಸ್ನಲ್ಲಿ ಅತಿ ಹೆಚ್ಚು ಗೋಲು ಗಳಿಸಿ ಅಬ್ಬರಿಸಿದ್ದ ಇವರು ಪ್ರಸ್ತುತ ವಿಶ್ವದ ಅತ್ಯಂತ ಅಪಾಯಕಾರಿ ಫಿನಿಶರ್ ಆಗಿದ್ದು, ಇಡೀ ನಾರ್ವೆಯ ಭರವಸೆಯ ಆಟಗಾರನಾಗಿದ್ದಾರೆ.
5. ಕ್ರಿಸ್ಟಿಯಾನೊ ರೊನಾಲ್ಡೊ (ಪೋರ್ಚುಗಲ್)
ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿರುವ 41 ವರ್ಷದ ಕ್ರಿಸ್ಟಿಯಾನೋ ರೊನಾಲ್ಡೊ ಪೋರ್ಚುಗಲ್ ಪರ ಆರನೇ ಬಾರಿಗೆ ವಿಶ್ವಕಪ್ ಆಡಲು ಸಿದ್ಧರಾಗಿದ್ದಾರೆ. ಕ್ಲಬ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸಂಖ್ಯಾತ ದಾಖಲೆ ಬರೆದಿರುವ ರೊನಾಲ್ಡೊ ಅವರಿಗೆ ತಮ್ಮ ವೃತ್ತಿಜೀವನದಲ್ಲಿ ಇನ್ನು ಕೈಗೆಟುಕದ ಏಕೈಕ ಕನಸಿನ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲು ಇದು ಕೊನೆಯ ಅವಕಾಶ ಎನ್ನಬಹುದು.
6. ಹ್ಯಾರಿ ಎಡ್ವರ್ಡ್ ಕೇನ್ (ಇಂಗ್ಲೆಂಡ್)
ಬೇಯರ್ನ್ ಮ್ಯೂನಿಚ್ ಪರ ಅದ್ಭುತ ಪ್ರದರ್ಶನ ನೀಡಿ ಅತ್ಯುತ್ತಮ ಫಾರ್ಮ್ನಲ್ಲಿರುವ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 2018ರ ವಿಶ್ವಕಪ್ನಲ್ಲಿ ಗೋಲ್ಡನ್ ಬೂಟ್ ಗೆದ್ದಿದ್ದ ಇವರು ಇಂಗ್ಲೆಂಡ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಆಗಿದ್ದಾರೆ. ಇಂಗ್ಲೆಂಡ್ನ ವಿಶ್ವಕಪ್ ಕನಸು ಕೇನ್ ಅವರ ನಾಯಕತ್ವದ ಮೇಲೆಯೇ ನಿಂತಿದೆ.
7. ವಿನಿಶಿಯಸ್ ಜೂನಿಯರ್ (ಬ್ರೆಜಿಲ್)
ಕಳೆದ ನಾಲ್ಕು ವರ್ಷಗಳಲ್ಲಿ ಬ್ರೆಜಿಲ್ ತಂಡದ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿರುವ ವಿನಿಶಿಯಸ್ ಜೂನಿಯರ್ ಪ್ರಸ್ತುತ ಜಾಗತಿಕ ಫುಟ್ಬಾಲ್ನ ಸೂಪರ್ಸ್ಟಾರ್. ತಮ್ಮ ಅಪ್ರತಿಮ ವೇಗ, ಡ್ರಿಬ್ಲಿಂಗ್ ಕೌಶಲ್ಯ ಮತ್ತು ಆಕ್ರಮಣಕಾರಿ ಆಟದ ಮೂಲಕ ಬ್ರೆಜಿಲ್ಗೆ 6ನೇ ವಿಶ್ವ ಪ್ರಶಸ್ತಿಯನ್ನು ತಂದುಕೊಡಲು ಇವರು ಸಂಪೂರ್ಣ ಸಜ್ಜಾಗಿದ್ದಾರೆ.
8. ಆಂಟೊಯಿನ್ ಸೆಮೆನ್ (ಘಾನಾ)
ಕ್ಲಬ್ ಫುಟ್ಬಾಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿರುವ ಘಾನಾದ ಆಂಟೊಯಿನ್ ಸೆಮೆನ್ ಆಫ್ರಿಕಾ ಖಂಡದ ಅತ್ಯದ್ಭುತ ಪ್ರತಿಭೆಯಾಗಿದ್ದಾರೆ. ಸದ್ಯ ಹೊಸ ಬದಲಾವಣೆಗಳ ಹಾದಿಯಲ್ಲಿರುವ ಘಾನಾ ತಂಡಕ್ಕೆ ಈ ವರ್ಸಟೈಲ್ ಫಾರ್ವರ್ಡ್ ಆಟಗಾರನೇ ಪ್ರಮುಖ ಆಧಾರಸ್ತಂಭವಾಗಿದ್ದು, ತಂಡವನ್ನು ಮುನ್ನಡೆಸುವ ಜವಾಬ್ದಾರಿ ಇವರ ಮೇಲಿದೆ.
9. ಅರ್ಡಾ ಗುಲರ್ (ಟರ್ಕಿ)
ಎರಡು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ವಿಶ್ವಕಪ್ಗೆ ಮರಳಿರುವ ಟರ್ಕಿ ದೇಶದ ಕೋಟ್ಯಂತರ ಅಭಿಮಾನಿಗಳ ಆಶಾಕಿರಣ ಅರ್ಡಾ ಗುಲರ್. ರಿಯಲ್ ಮ್ಯಾಡ್ರಿಡ್ ಕ್ಲಬ್ನ ಈ 21 ವರ್ಷದ ಯುವ ಪ್ರತಿಭೆಯನ್ನು ಟರ್ಕಿಶ್ ಫುಟ್ಬಾಲ್ನ ಭವಿಷ್ಯ ಎಂದು ಕರೆಯಲಾಗುತ್ತಿದ್ದು, ಜಾಗತಿಕ ವೇದಿಕೆಯಲ್ಲಿ ಮ್ಯಾಜಿಕ್ ಮಾಡಲು ಅವರು ಕಾಯುತ್ತಿದ್ದಾರೆ.
10. ಮೊಹಮ್ಮದ್ ಸಲಾಹ್ (ಈಜಿಪ್ಟ್)
ಆಫ್ರಿಕಾದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಈಜಿಪ್ಟ್ನ ಮೊಹಮ್ಮದ್ ಸಲಾಹ್ ತಮ್ಮ ವೃತ್ತಿಜೀವನದ ಅಪೂರ್ಣ ಅಧ್ಯಾಯವನ್ನು ಪೂರ್ಣಗೊಳಿಸಲು ಮರಳುತ್ತಿದ್ದಾರೆ. ಕ್ಲಬ್ ಮಟ್ಟದಲ್ಲಿ ಎಲ್ಲಾ ಪ್ರಶಸ್ತಿಗಳನ್ನು ಗೆದ್ದಿರುವ 33 ವರ್ಷದ ಸಲಾಹ್ ಈ ಬಾರಿ ತಮ್ಮ ದೇಶಕ್ಕೆ ದೊಡ್ಡ ಯಶಸ್ಸನ್ನು ತಂದುಕೊಡುವ ದೃಢ ಸಂಕಲ್ಪದಲ್ಲಿದ್ದಾರೆ. ಬಹುಶಃ ಇದು ಅವರಿಗೆ ಕೊನೆಯ ವಿಶ್ವಕಪ್ ಆಗುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಹೇಳುವುದಾದರೆ, ವಿಶ್ವಪ್ರಸಿದ್ಧ ಫುಟ್ಬಾಲ್ ತಾರೆ 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದಲ್ಲಿ ಪೋರ್ಚುಗಲ್ ತಂಡವು ಒಂದೇ ಒಂದು ಫಿಫಾ ವಿಶ್ವಕಪ್ ಗೆದ್ದಿಲ್ಲ. ಒಂದು ವೇಳೆ ಈ ಬಾರಿ ಏನಾದರೂ ಗೆದ್ದರೆ ಹೊಸ ಇತಿಹಾಸವೇ ಸೃಷ್ಟಿಯಾಗಲಿದೆ.












Click it and Unblock the Notifications