CSK Vs DC IPL: ಡೆಲ್ಲಿ ಪರ 77 ರನ್ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್: ಸಿಎಸ್‌ಕೆಗೆ ಹೀನಾಯ ಸೋಲು
CSK Vs DC IPL 2025: ಐಪಿಎಲ್ 2025ನೇ ಆವೃತ್ತಿಯ 17ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸಿಎಸ್‌ಕೆ ಹೋಂ ಗ್ರೌಂಡ್‌ನಲ್ಲೇ ಸತತ ಎರಡು ಬಾರಿ ಸೋಲು ಕಂಡಿದೆ. ಮೊದಲು ಆರ್‌ಸಿಬಿ, ಎರಡನೇಯದಾಗಿ ಇಂದು (ಏಪ್ರಿಲ್ 5) ಡೆಲ್ಲಿ ವಿರುದ್ಧ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಸಿಎಸ್‌ಕೆಗೆ 183 ಬೃಹತ್ ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೀ 158 ರನ್‌ಗಳನ್ನು ಮಾತ್ರ ಕಲೆಹಾಕುವ ಮೂಲಕ ಸೋಲೊಪ್ಪಿಕೊಂಡಿತು. ಈ ಮೂಲಕ ಡೆಲ್ಲಿ 15 ವರ್ಷಗಳ ನಂತರ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದು ಇತಿಹಾಸ ನಿರ್ಮಾಣ ಮಾಡಿದೆ.

ಆರ್ಭಟಿಸಿದ ಕನ್ನಡಿಗ ಕೆಎಲ್ ರಾಹುಲ್: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ರನ್‌ಗಳು 180 ಗಡಿ ದಾಟಿದರೆ ಚೇಸ್ ಮಾಡೋದು ಸಲಭದ ಮಾತಲ್ಲ. ಈಗಾಗಲೇ ಆರ್‌ಸಿಬಿ ಅದೇ ಪಿಚ್‌ನಲ್ಲಿ 190ರ ಗಡಿ ದಾಟಿಸಿ ಚೆನ್ನೈ ವಿರುದ್ಧ ಗೆದ್ದು ಬೀಗಿತ್ತು. ಇದೀಗ ಅದೇ ಹೋಂ ಗ್ರೌಂಡ್‌ನಲ್ಲಿ ಸಿಎಸ್‌ಕೆ ಸೋತು ಸುಣ್ಣವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಕನ್ನಡಿಗ ಕೆಎಲ್ ರಾಹುಲ್ ಕಲೆ ಹಾಕಿದ 77 ರನ್‌ಗಳೇ ಕಾರಣ ಅಂದ್ರೆ ತಪ್ಪಾಗಲಾರದು.
ಡೆಲ್ಲಿ ಪರ ಆರಂಭಿಕರಾಗಿ ಬ್ಯಾಟಿಂಗ್‌ಗಿಳಿದ ಕೆಎಲ್ ರಾಹುಲ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳನ್ನು ಚೆನ್ನಾಗಿಯೇ ಕಾಡಿದರು. ಈ ಮೂಲಕ ಅವರು 3 ಸಿಕ್ಸರ್, 6 ಬೌಂಡರಿಗಳನ್ನು ಬಾರಿಸುವ ಮೂಲಕ ಬರೋಬ್ಬರಿ 77 ರನ್‌ಗಳನ್ನು ಕಲೆಹಾಕಿದರು. ಇನ್ನು ಜೇಕ್ 0, ಅಭಿಷೇಕ್ ಪೋರೆಲ್ 33, ಅಕ್ಸರ್ ಪಟೇಲ್ 21, ಸಮೀರ್ 20, ಸ್ಟಬ್ಸ್ 24, ಅಶುತೋಷ್ ಶರ್ಮಾ 1, ವಿಪ್ರಜ್ ನಿಗಮ್ 1 ರನ್ ಕಲೆಹಾಕಿದರು. ಬೃಹತ್ ರನ್‌ಗಳನ್ನು ಕಲೆಹಾಕಿ ಡೆಲ್ಲಿ ಗೆಲುವಿಗೆ ಕೆಎಲ್ ರಾಹುಲ್ ಪ್ರಮುಖ ಪಾತ್ರವಹಿಸಿದರು.
ಸಿಎಸ್‌ಕೆ ಬೌಲರ್ಸ್ ಬೆಂಡೆತ್ತಿದ ಡೆಲ್ಲಿ ಬ್ಯಾಟರ್ಸ್: ಪರವಾಗಿ 51 ಎಸೆತಗಳಲ್ಲಿ 77 ರನ್ ಗಳಿಸಿದ ಕನ್ನಡಿಗ ಕೆಎಲ್ ರಾಹುಲ್, ಚೆನ್ನೈ ಬೌಲರ್‌ಗಳ ಮೇಲೆ ದಂಡಯಾತ್ರೆಯನ್ನೇ ನಡೆಸಿದರು. ಲಖನೌ ಫ್ರಾಂಚೈಸಿ ತೊರೆದ ಅವರಿಗೆ ಡೆಲ್ಲಿ ಫ್ರಾಂಚೈಸಿ ಬರೋಬ್ಬರಿ14 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತು. ಇಂದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಚೈನ್ನೈ ಬೌಲರ್‌ಗಳನ್ನು ಬೆಂಡೆತ್ತಿದ್ದರು.
ಇನ್ನು ಡೆಲ್ಲಿ ಪರ ಬೌಲಿಂಗ್ ಮಾಡಿದ ವಿಪ್ರಜ್ ನಿಗಮ್ ಸಿಎಸ್‌ಕೆ ತಂಡದ ಮೂರು ವಿಕೆಟ್‌ಗಳನ್ನು ಕಿತ್ತರು. ಇನ್ನು ಮಿಚೆಲ್ ಸ್ಟಾರ್ಕ್, ಮುಕೇಶ್ ಕುಮಾರ್, ಕುಲ್‌ದೀಪ್ ಯಾದವ್ ತಲಾ ಒಂದು ವಿಕೆಟ್ ಪಡದು ಸಿಎಸ್‌ಕೆ ತಂಡವನ್ನು 158 ರನ್‌ಗಳಿಗೆ ಕಟ್ಟಹಾಕಿದರು. ಈ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಕೆಎಲ್ ರಾಹುಲ್ ಸಾಧನೆ: ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಅತೀ ಹೆಚ್ಚು ಅರ್ಧಶತಕಗಳ ಸಿಡಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇದಕ್ಕೂ ಮೊದಲು ಗೌತಮ್ ಗಂಭೀರ್ ಸಹ ಚೆನ್ನೈ ವಿರುದ್ಧ 6 ಅರ್ಧಶತಕ ಗಳಿಸಿ ಸಾಧನೆ ಮಾಡಿದ್ದರು.
ಇದೀಗ ಸಿಎಸ್‌ಕೆ ವಿರುದ್ಧ ಕೆಎಲ್ ರಾಹುಲ್ ಅವರು ಇಂದು 77 ರನ್‌ಗಳನ್ನು ಕಲೆಹಾಕುವ ಮೂಲಕ 6ನೇ ಅರ್ಧಶತಕ ಸಡಿಸಿದ್ದಾರೆ. ಈ ಮೂಲಕ ಇದು ಅವರ 4ನೇ ಅತೀ ಹೆಚ್ಚು 50 ಪ್ಲಸ್ ಸ್ಕೋರ್ ಮಾಡಿದ ಸಾಧನೆಯಾಗಿದೆ. ಅಲ್ಲದೆ, ಅವರು ಗಂಭೀರ್ ಅವರ ದಾಖಲೆಯನ್ನು ಸರಿಗಟ್ಟಿದರು.
ಡೇವಿಡ್ ವಾರ್ನರ್ 9 ಅರ್ಧಶತಕ, ಹಾಗೂ 1 ಶತಕ, ಶಿಖರ್ ಧವನ್ 8 ಅರ್ಧಶತಕ ಹಾಗೂ 1 ಶತಕ, ವಿರಾಟ್ ಕೊಹ್ಲಿ 9 ಅರ್ಧಶತಕ, ಕೆಎಲ್ ರಾಹುಲ್ 6 ಅರ್ಧಶತಕ ಹಾಗೂ ಗೌತಮ್ ಗಂಭೀರ್ ಸಹ 6 ಅರ್ಧಶತಕ ಗಳಿಸಿ ಸಾಧನೆ ಮಾಡಿದ್ದಾರೆ.












Click it and Unblock the Notifications