ಕಾಮನ್‌ವೆಲ್ತ್ ಗೆಮ್ಸ್ 2026: ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಭಾರತದ ಜ್ಞಾನೇಶ್ವರಿ ಯಾದವ್
Commonwealth Games 2026: ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್‌ಗಳು ಪದಕದ ಬೇಟೆಯನ್ನ ಮುಂದುವರೆಸಿದ್ದಾರೆ. ಇದೀಗ ಮಹಿಳೆಯರ 53 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ವೇಟ್‌ಲಿಫ್ಟರ್ ಜ್ಞಾನೇಶ್ವರಿ ಯಾದವ್ ಅವರು ಅತ್ಯುತ್ತಮ ಸಾಧನೆ ಮಾಡಿ ಗಮನ ಸಳೆದಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್ ಸ್ಪರ್ಧೆಯ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಭಾರತದ ಜ್ಞಾನೇಶ್ವರಿ ಯಾದವ್ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಜ್ಞಾನೇಶ್ವರಿ ಅವರು ಒಟ್ಟು 199 ಕೆಜಿ ತೂಕ ಎತ್ತುವ ಮೂಲಕ ತಮ್ಮ ಕ್ರೀಡಾ ಜೀವನದ ಅತ್ಯುತ್ತಮ ವೈಯಕ್ತಿಕ ಶ್ರೇಷ್ಟ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಜ್ಞಾನೇಶ್ವರಿ ಯಾದವ್ ಸಾಧನೆ ವಿವರ
ಜ್ಞಾನೇಶ್ವರಿ ಯಾದವ್ ಒಟ್ಟು 199 ಕೆಜಿ ಭಾರ ಎತ್ತುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಸ್ನ್ಯಾಚ್ ವಿಭಾಗದಲ್ಲಿ 88 ಕೆ.ಜಿ. ಎತ್ತಿದ ಅವರು, ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ ಕ್ರಮವಾಗಿ 103, 107 ಕೆಜಿ ಹಾಗೂ 111 ಕೆ.ಜಿ. ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಉತ್ತಮ ಪ್ರದರ್ಶನ ತೋರಿದರು. ಅವರ ಈ ಅದ್ಭುತ ಪ್ರದರ್ಶನವು ಭಾರತದ ವೇಟ್‌ಲಿಫ್ಟಿಂಗ್ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ ಎಂದರೆ ತಪ್ಪಾಗಲಾದು.
ಚಿನ್ನ, ಕಂಚಿನ ಪದಕ ಯಾರ ಪಾಲು?
ಇನ್ನೂ ನೈಜೀರಿಯಾದ ದಿಡಿಹ್ ಒನೊಮೆ ಒಮೊಲೊಲಾ ಅವರು ಒಟ್ಟು 206 ಕೆ.ಜಿ. (93 ಕೆಜಿ ಸ್ನ್ಯಾಚ್ + 113 ಕೆಜಿ ಕ್ಲೀನ್ ಅಂಡ್ ಜೆರ್ಕ್) ಎತ್ತುವ ಮೂಲಕ ಮೊದಲ ಸ್ಥಾನ ಪಡೆದು ಸ್ವರ್ಣ (ಚಿನ್ನ) ಪದಕ ತಮ್ಮದಾಗಿಸಿಕೊಂಡರು. ಮತ್ತೊಂದೆಡೆ ಕೆನಡಾದ ರೆಬೆಕಾ ಗ್ರೌಲ್ಕ್ಸ್ ಅವರು ಒಟ್ಟು 178 ಕೆ.ಜಿ. ಭಾರ ಎತ್ತಿ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಐತಿಹಾಸಿಕ ಸಾಧನೆ ಮಾಡಿದ ಮೀರಾಬಾಯಿ ಚಾನು
ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 48 ಕೆಜಿ ತೂಕದ ವಿಭಾಗದಲ್ಲಿ ಸ್ನ್ಯಾಚ್ ಹಾಗೂ ಕ್ಲೀನ್ ಅಂಡ್ ಜರ್ಕ್ ಎರಡರಲ್ಲೂ ನೂತನ ಗೇಮ್ಸ್ ದಾಖಲೆಗಳನ್ನು ಬರೆಯುವ ಮೂಲಕ ಭಾರತಕ್ಕೆ ಈ ಬಾರಿಯ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಮಣಿಪುರದ 31 ವರ್ಷದ ಮೀರಾಬಾಯಿ ಚಾನು ಅವರು ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾನುವಾರ (ಜುಲೈ 26) ಮತ್ತೊಮ್ಮೆ ಸ್ವರ್ಣ ಪದಕ ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದರು. ಈ ಗೆಲುವಿನೊಂದಿಗೆ ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರನೇ ಚಿನ್ನದ ಪದಕ ಗೆದ್ದು 'ಹ್ಯಾಟ್ರಿಕ್ ಚಿನ್ನ'ದ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದರು.
ಆರಂಭಿಕ ಹಿನ್ನಡೆಯ ನಡುವೆಯೂ ಕುಗ್ಗದ ಮೀರಾಬಾಯಿ ಚಾನು ಅವರು ಒಟ್ಟು 190 ಕೆಜಿ (ಸ್ನ್ಯಾಚ್‌ನಲ್ಲಿ 85 ಕೆಜಿ, ಕ್ಲೀನ್ ಅಂಡ್ ಜರ್ಕ್‌ನಲ್ಲಿ 105 ಕೆಜಿ) ತೂಕ ಎತ್ತುವ ಮೂಲಕ ಸಂಪೂರ್ಣ ಪ್ರಾಬಲ್ಯ ಮೆರೆದರು. ಸ್ನ್ಯಾಚ್‌ನ ಮೊದಲ ಯತ್ನದಲ್ಲಿ 82 ಕೆ.ಜಿ. ಎತ್ತುವಲ್ಲಿ ವಿಫಲರಾದರು. ಆದರೂ ಧೃತಿಗೆಡದೆ ತದನಂತರದ ಪ್ರಯತ್ನಗಳಲ್ಲಿ 85 ಕೆಜಿ ಎತ್ತಿ ದಾಖಲೆ ಬರೆದರು.
ಅಗ್ರಸ್ಥಾನ ಸಾಬೀತುಪಡಿಸಿಕೊಂಡದ ಮೀರಾಬಾಯಿ ಕ್ಲೀನ್ ಅಂಡ್ ಜರ್ಕ್‌ನಲ್ಲೂ ಮೊದಲ ಪ್ರಯತ್ನ ವಿಫಲವಾದರು. ಆದರೂ ನಂತರ 105 ಕೆಜಿ ಎತ್ತಿ ಇತಿಹಾಸ ಬರೆದರು. ಬೆಳ್ಳಿ ಪದಕ ಗೆದ್ದ ನೈಜೀರಿಯಾದ ರೂತ್ ಅಸುಕ್ವೊ ನ್ಯಾಂಗ್ (168 ಕೆಜಿ) ಅವರಿಗಿಂತ ಬರೋಬ್ಬರಿ 22 ಕೆ.ಜಿ. ಹೆಚ್ಚು ತೂಕ ಎತ್ತುವ ಮೂಲಕ ಚಾನು ತಮ್ಮ ಅಗ್ರಸ್ಥಾನವನ್ನು ಸಾಬೀತುಪಡಿಸಿದರು. ಈ ಐತಿಹಾಸಿಕ ಗೆಲುವಿನೊಂದಿಗೆ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 4 ಪದಕಗಳನ್ನು (3 ಚಿನ್ನ, 1 ಬೆಳ್ಳಿ) ಗೆದ್ದುಕೊಂಡಂತಾಗಿದೆ.


Click it and Unblock the Notifications
