ODI World Cup: ಭಾರತ vs ಪಾಕಿಸ್ತಾನ ಪಂದ್ಯದ ಬಗ್ಗೆ ಬಾಬರ್ ಅಜಮ್ ಹೇಳಿದ್ದೇನು?
ಏಕದಿನ ವಿಶ್ವಕಪ್ 2023ರ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.
ಪಂದ್ಯಾವಳಿ ಆರಂಭಕ್ಕೆ ಮುನ್ನ ವಿಶ್ವಕಪ್‌ನಲ್ಲಿ ಆಡಲಿರುವ ಎಲ್ಲಾ 10 ತಂಡಗಳ ನಾಯಕರು ಅಹಮದಾಬಾದ್‌ನಲ್ಲಿ ಸೇರಿದ್ದರು. "ಕ್ಯಾಪ್ಟನ್ಸ್ ಡೇ" ನಲ್ಲಿ ಭಾಗವಹಿಸಿ ಎಲ್ಲಾ ನಾಯಕರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಜೊತೆಗೆ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಅಕ್ಟೋಬರ್ 14ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ, ಭಾರತ ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು.
ಭಾರತದ ವಿರುದ್ಧದ ಪಂದ್ಯಕ್ಕೆ ಕಾಯುತ್ತಿದ್ದೇವೆ
ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, "ಹೌದು, ಭಾರತದ ವಿರುದ್ಧದ ಪಂದ್ಯಕ್ಕೆ ನಾವು ಉತ್ಸುಕರಾಗಿದ್ದೇವೆ. ಅಕ್ಟೋಬರ್ 14ರ ಮೊದಲು ನಾವು 2 ಪಂದ್ಯಗಳನ್ನು ಆಡಲಿದ್ದು, ಇಲ್ಲಿನ ಪರಿಸ್ಥಿತಿಗಳ ಮತ್ತಷ್ಟು ತಿಳಿದುಕೊಳ್ಳಲಿದ್ದೇವೆ. ಭಾರತ - ಪಾಕಿಸ್ತಾನ ಯಾವಾಗಲೂ ದೊಡ್ಡ ಪಂದ್ಯವಾಗಿದೆ. ಎಲ್ಲರೂ ಈ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ" ಎಂದು ಹೇಳಿದರು.
ಭಾರತದಲ್ಲಿ ಭಾರತದ ವಿರುದ್ಧ ಆಡುವ ಒತ್ತಡ ಮತ್ತು ಪಿಚ್ ಮತ್ತು ಪರಿಸ್ಥಿತಿಗಳಲ್ಲಿನ ವ್ಯತ್ಯಾಸದ ಬಗ್ಗೆ ಕೇಳಿದಾಗ, ಬಾಬರ್ ಅವರು ಪರಿಸ್ಥಿತಿಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ ಮತ್ತು ತಂಡವು ಉತ್ತಮವಾಗಿ ಸಿದ್ಧವಾಗಿದೆ ಎಂದು ಹೇಳಿದರು.
"ಯಾವುದೇ ಒತ್ತಡವಿಲ್ಲ, ಇದು ಏಷ್ಯಾ ಮತ್ತು ಪಾಕಿಸ್ತಾನದ ಪರಿಸ್ಥಿತಿಗಳಿಗೆ ಹೋಲುತ್ತದೆ. ಒಂದು ವಾರದಿಂದ ನಾವು ಇಲ್ಲಿದ್ದೇವೆ, ಅಭ್ಯಾಸ ಆಟಗಳನ್ನು ಆಡಿದ್ದೇವೆ. ಇಲ್ಲಿ ಬೌಲರ್‌ಗಳಿಗೆ ಬೌಂಡರಿಗಳು ಚಿಕ್ಕದಾಗಿದೆ ಬೌಲರ್ ಗಳು ಸಣ್ಣ ತಪ್ಪಿಗೂ ಅವಕಾಶ ಇಲ್ಲ. ಕೆಟ್ಟ ಬೌಲಿಂಗ್ ಮಾಡಿದರೆ ಬ್ಯಾಟರ್ ಮೇಲುಗೈ ಸಾಧಿಸುತ್ತಾರೆ. ನಾವು ಉತ್ತಮ ಪ್ರದರ್ಶನ ನೀಡಲು ಪ್ರಯತ್ನ ಮಾಡುತ್ತೇವೆ" ಎಂದು ಬಾಬರ್ ಹೇಳಿದರು.
ಸಂವಾದದ ವೇಳೆ, ಭಾರತದ ಮಾಜಿ ಆಟಗಾರ ರವಿಶಾಸ್ತ್ರಿ ಅವರು ಬಾಬರ್ ಅಜಮ್ ಅವರನ್ನು ಹೈದರಾಬಾದಿ ಬಿರಿಯಾನಿಯ ಬಗ್ಗೆ ತಮಾಷೆಯಾಗಿ ಕೇಳಿದರು. ಅದಕ್ಕೆ ನಗುತ್ತಾ ಉತ್ತರಿಸಿದ ಬಾಬರ್ ಅಜಮ್, ಅದು ಚನ್ನಾಗಿದೆ ಎಂದರು.
ಅಕ್ಟೋಬರ್ 6 ರಂದು ಪಾಕಿಸ್ತಾನ ತಂಡ ಏಕದಿನ ವಿಶ್ವಕಪ್‌ನ ತಮ್ಮ ಮೊದಲ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 10ರಂದು ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದ್ದಾರೆ. ಅಕ್ಟೋಬರ್ 14ರಂದು ಭಾರತದ ವಿರುದ್ಧ ಸೆಣೆಸಲಿದ್ದು, ಈ ಪಂದ್ಯ ಹಲವು ದಾಖಲೆಗಳನ್ನು ಬರೆಯಲು ಸಜ್ಜಾಗಿದೆ.
2023 ರ ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್.












Click it and Unblock the Notifications