ಏಷ್ಯನ್ ಗೇಮ್ಸ್: ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಡಿಕೆಶಿ ಸನ್ಮಾನ, ಆರ್‌ಸಿಬಿ ಟಗರುಪುಟ್ಟಿ ಶ್ರೇಯಾಂಕಾಗೆ ಸಿಕ್ಕ ಹಣ ಎಷ್ಟು?
Asian Games 2026: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಪದಕ ಗೆದ್ದವರಿಗೆ ಮಂಗಳವಾರ (ಅಕ್ಟೋಬರ್ 6) ಸಿಎಂ ಡಿಕೆ ಶಿವಕುಮಾರ್ ಅವರು ಸನ್ಮಾನ ಮಾಡಿ ನಗದು ಬಹುಮಾನ ನೀಡಿದರು. ಈ ವೇಳೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪರ ಆಡಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ಇದ್ದರು.
ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಭರ್ಜರಿ ಗೆಲುವು ಸಾಧಿಸಿ ಚಿನ್ನಕ್ಕೆ ಮುತ್ತಿಟ್ಟಿದೆ. ವಿಶೇಷತೆ ಅಂದ್ರೆ ಈ ಟೀಮ್‌ನಲ್ಲಿ ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಕೂಡ ಇದ್ದು, ಇವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸನ್ಮಾನ ಮಾಡಿದರು. ಹಾಗಾದ್ರೆ ಸಿಕ್ಕ ಹಣ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಏಷ್ಯನ್ ಗೇಮ್ಸ್ 2026ರಲ್ಲಿ ದೇಶ ಹಾಗೂ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ರಾಜ್ಯದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಮಂಗಳವಾರ (ಅಕ್ಟೋಬರ್ 06) ಸನ್ಮಾನಿಸಿದರು. 8 ಪದಕ ವಿಜೇತರಿಗೆ ಒಟ್ಟು 8 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದರು.
ಪದಕ ವಿಜೇತರು ಸೇರಿದಂತೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಹಲವು ಮಹತ್ವದ ಪ್ರೋತ್ಸಾಹಕ ಕ್ರಮಗಳನ್ನು ಇದೇ ವೇಳೆ ಸಿಎಂ ಘೋಷಿಸಿದರು. ಏಷ್ಯನ್ ಗೇಮ್ಸ್ 2026ರಲ್ಲಿ ಭಾಗವಹಿಸಲು ಅರ್ಹತೆ ಪಡೆದು ಸ್ಪರ್ಧಿಸಿದ ಕರ್ನಾಟಕದ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ತಲಾ 5 ಲಕ್ಷ ರೂಪಾಯಿ ನಗದು ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ. ಇದರಲ್ಲಿ ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ರಿಕೆಟ್, ಸೈಕ್ಲಿಂಗ್, ಎಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಶೂಟಿಂಗ್, ಈಜು, ಟೇಬಲ್ ಟೆನಿಸ್ ಹಾಗೂ ಸ್ಪೋರ್ಟ್ಸ್ ಕ್ಲೈಂಬಿಂಗ್ ವಿಭಾಗಗಳ ಕ್ರೀಡಾಪಟುಗಳಿದ್ದಾರೆ.
ಪದಕ ವಿಜೇತರ ಬಹುಮಾನದ ಮೊತ್ತ ಹೆಚ್ಚಳ
ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದ ನಗದು ಬಹುಮಾನವನ್ನೂ ಸಿಎಂ ಹೆಚ್ಚಳ ಮಾಡಿದ್ದಾರೆ. ಈ ಹಿಂದೆ ಚಿನ್ನದ ಪದಕ ವಿಜೇತರಿಗೆ 35 ಲಕ್ಷ ರೂಪಾಯಿ, ಬೆಳ್ಳಿ ಪದಕ ವಿಜೇತರಿಗೆ 25 ಲಕ್ಷ ರೂಪಾಯಿ ಹಾಗೂ ಕಂಚಿನ ಪದಕ ವಿಜೇತರಿಗೆ 15 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಸಿಎಂ ಡಿ ಕೆ ಶಿವಕುಮಾರ್ ಅವರು ಚಿನ್ನದ ಪದಕಕ್ಕೆ 1 ಕೋಟಿ ರೂಪಾಯಿ, ಬೆಳ್ಳಿ ಪದಕಕ್ಕೆ 75 ಲಕ್ಷ ಹಾಗೂ ಕಂಚಿನ ಪದಕಕ್ಕೆ 50 ಲಕ್ಷ ನಗದು ಬಹುಮಾನ ನೀಡಲು ನಿರ್ಧರಿಸಿದ್ದಾರೆ.
ಕ್ರೀಡಾಪಟುಗಳಿಗೆ ನೇರ ನೇಮಕಾತಿ ಅವಕಾಶ
ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಗುಂಪು-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿಯನ್ನು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಕೈಗೊಳ್ಳಲಾಗುವುದು.
ಒಲಿಂಪಿಕ್ಸ್ ತಯಾರಿಗೆ ತಲಾ 10 ಲಕ್ಷ ರೂ.
ಮುಂದಿನ ಹಂತದಲ್ಲಿ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಕ್ರೀಡಾಪಟುಗಳಿಗೂ ಸರ್ಕಾರ ನೆರವು ನೀಡಿದೆ. ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್.ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕಾ ಪಾಟೀಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು 'ಗುರಿ ಒಲಿಂಪಿಕ್ಸ್' ಯೋಜನೆಗೆ 2026-27ನೇ ಸಾಲಿಗೆ ಸೇರ್ಪಡೆ ಮಾಡಲಾಗಿದೆ. ಒಲಿಂಪಿಕ್ಸ್ ತಯಾರಿಗಾಗಿ ತಲಾ 10 ಲಕ್ಷ ರೂಪಾಯಿ ನಗದು ಪ್ರೋತ್ಸಾಹಧನವನ್ನು ಇವರಿಗೆ ನೀಡಲಾಗುತ್ತದೆ.
ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ
ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರಿ ನೇರ ನೇಮಕಾತಿಗಳಲ್ಲಿ 2% ಮೀಸಲಾತಿ ಜಾರಿಗೆ ತರಲಾಗಿದೆ. ಗುಂಪು-ಎ, ಗುಂಪು-ಬಿ, ಗುಂಪು-ಸಿ ಮತ್ತು ಗುಂಪು-ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ. ಈ ಕುರಿತು ಅಕ್ಟೋಬರ್ 3, 2026 ರಂದು ಅಧಿಸೂಚನೆ ಹೊರಡಿಸಲಾಗಿದೆ.
ಪದಕ ವಿಜೇತ 8 ಕ್ರೀಡಾಪಟುಗಳು, ಬಹುಮಾನ ಮೊತ್ತ
* ಶ್ರೇಯಾಂಕ ಆರ್. ಪಾಟೀಲ್ (ಕ್ರಿಕೆಟ್ ಮಹಿಳಾ ತಂಡ, ಚಿನ್ನ),
* ಎಂ.ಆರ್. ಪೂವಮ್ಮ (ಅಥ್ಲೆಟಿಕ್ಸ್ 4x400 ಮಿಶ್ರ ರಿಲೇ, 4x400 * ಮಹಿಳಾ ರಿಲೇ ಬೆಳ್ಳಿ ಮತ್ತು ಚಿನ್ನ)
* ತಿಲೋತ್ತಮ ಸೇನ್ (ಶೂಟಿಂಗ್, ಮಹಿಳೆಯರ 50 ಮೀ ರೈಫಲ್, ಬೆಳ್ಳಿ)
* ಆಯುಷ್ ಆರ್ ಶೆಟ್ಟಿ (ಪುರುಷರ ತಂಡ ಬ್ಯಾಡ್ಮಿಂಟನ್, ಬೆಳ್ಳಿ)
* ಸ್ನೇಹಾ ಎಸ್.ಎಸ್. ( ಅಥ್ಲೆಟಿಕ್ಸ್ 4x100 ಮಿಶ್ರ ರಿಲೇ ಕಂಚು)
* ಅಧಿತಿ ಅಶೋಕ್ (ಗಾಲ್ಫ್ ಮಹಿಳಾ ತಂಡ, ಬೆಳ್ಳಿ)
* ಪ್ರಣವಿ ಎಸ್. ಅರಸ್ (ಗಾಲ್ಫ್ ಮಹಿಳಾ ತಂಡ, ಬೆಳ್ಳಿ ಹಾಗೂ ವೈಯಕ್ತಿಕ ಚಿನ್ನ)
* ಮೋಹಿತ್ ಹೆಚ್.ಎಸ್. (ಹಾಕಿ ಪುರುಷರ ತಂಡ, ಚಿನ್ನ)
ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿವರಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ
* ಯಶಸ್ ಪಾಲಾಕ್ಷ - ಅಥ್ಲೆಟಿಕ್ಸ್
* ಸುಪ್ರಿಯಾ ಸಿಂಡಿಗೆರೆ ಬಸವರಾಜು - ಅಥ್ಲೆಟಿಕ್ಸ್
* ಉನ್ನತಿ ಅಯ್ಯಪ್ಪ - ಅಥ್ಲೆಟಿಕ್ಸ್
* ಎಂ.ಆರ್. ಪೂವಮ್ಮ - ಅಥ್ಲೆಟಿಕ್ಸ್
* ಸ್ನೇಹಾ ಎಸ್.ಎಸ್. - ಅಥ್ಲೆಟಿಕ್ಸ್
* ಆಯುಷ್ ಶೆಟ್ಟಿ - ಬ್ಯಾಡ್ಮಿಂಟನ್
* ಶ್ರೇಯಾಂಕ ಆರ್. ಪಾಟೀಲ್ - ಕ್ರಿಕೆಟ್ ಟಿ20
* ಕೀರ್ತಿ ರಂಗಸ್ವಾಮಿ - ಸೈಕ್ಲಿಂಗ್ ಟ್ರ್ಯಾಕ್
* ಫವಾದ್ ಮಿರ್ಜಾ- ಈಕ್ವೇಸ್ಟ್ರೀಯನ್
* ಅಧಿತಿ ಅಶೋಕ್ - ಗಾಲ್ಫ್
* ಪ್ರಣವಿ ಎಸ್. ಅರಸ್ - ಗಾಲ್ಫ್
* ಮೋಹಿತ್ ಹೆಚ್.ಎಸ್. - ಹಾಕಿ
* ತಿಲೋತ್ತಮಾ ಸೇನ್ - ಶೂಟಿಂಗ್
* ಆಕಾಶ್ ಮಣಿ - ಈಜು
* ಶ್ರೀ ಹರಿ ನಟರಾಜ್ - ಈಜು
* ದಕ್ಷಣ್ ಎಸ್. - ಈಜು
* ಅನೀಶ್ ಗೌಡ - ಈಜು
* ಯಶಸ್ವಿನಿ ಘೋರ್ಪಡೆ - ಟೇಬಲ್ ಟೆನ್ನಿಸ್
* ಸಿಂಧುಶ್ರೀ - ಅಥ್ಲೆಟಿಕ್ಸ್
* ದೀಪು ಮಲ್ಲೇಶ್ - ಸ್ಪೋರ್ಟ್ಸ್ ಕ್ಲೈಂಬಿಂಗ್


Click it and Unblock the Notifications
