Anil Kumble: ಏಕದಿನ ಕ್ರಿಕೆಟ್ ನೋಡಲು ಆಸಕ್ತಿಯೇ ಇಲ್ಲ: ಟೀಮ್ ಇಂಡಿಯಾ ದಿಗ್ಗಜ, ಕನ್ನಡಿಗ ಅನಿಲ್ ಕುಂಬ್ಳೆ ಶಾಕಿಂಗ್ ಹೇಳಿಕೆ
Anil Kumble: ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಹಾಗೂ ತಮ್ಮ ವೃತ್ತಿಜೀವನದಲ್ಲಿ 200ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿರುವ ಮಾಜಿ ಕ್ರಿಕೆಟರ್ ಕನ್ನಡಿಗ ಅನಿಲ್ ಕುಂಬ್ಳೆ ಅವರು ಶಾಕಿಂಗ್ ಹೇಳಿಕೆಯನ್ನ ನೀಡಿದ್ದಾರೆ. ಇದು ಸದ್ಯ ಇದೀಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪ್ರಸ್ತುತ ದಿನಮಾನಗಳಲ್ಲಿ ಏಕದಿನ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ತಮಗೆ ಯಾವುದೇ ಆಸಕ್ತಿಯಿಲ್ಲ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಓವರ್‌ಗಳ ಪಂದ್ಯ(ODI)ದ ಕುರಿತು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಕುಂಬ್ಳೆ ಅವರು ನೀಡಿರುವ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಅನಿಲ್ ಕುಂಬ್ಳೆ ಅಚ್ಚರಿ ಹೇಳಿಕೆ
ಖಾಸಗಿ ಕಾರ್ಯಕ್ರಮವೊಂದರಲ್ಲಿ ಏಕದಿನ ಕ್ರಿಕೆಟ್‌ನ ಪ್ರಸ್ತುತ ಸ್ಥಿತಿಗತಿಯ ಕುರಿತು ಅನಿಲ್ ಕುಂಬ್ಳೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. 'ನನಗೆ ನಿಜವಾಗಿಯೂ ಏಕದಿನ ಪಂದ್ಯಗಳನ್ನು ನೋಡಲು ಆಸಕ್ತಿ ಇಲ್ಲ. ಇಡೀ ಪಂದ್ಯವನ್ನು ಕುಳಿತು ವೀಕ್ಷಿಸುವಷ್ಟು ತಾಳ್ಮೆ ಅಥವಾ ಆಸಕ್ತಿ ಈಗ ಇಲ್ಲ,' ಎಂದು ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, 'ಇಂದಿನ ದಿನಗಳಲ್ಲಿ ಒಂದು ಏಕದಿನ ಪಂದ್ಯದಲ್ಲಿ ಕೊನೆಯ 10 ಓವರ್‌ಗಳ ಆಟ ಮಾತ್ರ ರೋಚಕತೆಯಿಂದ ಕೂಡಿರುತ್ತದೆ. ಪಂದ್ಯದ ಆರಂಭಿಕ ಓವರ್‌ಗಳು ಹಾಗೂ ಮಧ್ಯದ ಓವರ್‌ಗಳು ಹಲವು ಬಾರಿ ಕುತೂಹಲಕಾರಿ ಆಗಿರುತ್ತವೆ. ಆದ್ದರಿಂದ ಸಂಪೂರ್ಣ ಪಂದ್ಯವನ್ನು ವೀಕ್ಷಿಸುವುದಕ್ಕಿಂತ ಕೊನೆಯ ಕೆಲವು ಓವರ್‌ಗಳನ್ನು ನೋಡಿದರೆ ಸಾಕು ಎನಿಸುತ್ತದೆ,' ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಏಕದಿನ ಕ್ರಿಕೆಟ್‌ನ ಭವಿಷ್ಯ
ಪ್ರಪಂಚದಾದ್ಯಂತ ಟಿ20 ಲೀಗ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಹಾಗೂ ಕ್ರಿಕೆಟ್ ಪ್ರೇಮಿಗಳ ಆದ್ಯತೆಗಳು ಬದಲಾಗುತ್ತಿರುವುದು ಏಕದಿನ ಕ್ರಿಕೆಟ್‌ನ ಆಕರ್ಷಣೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಕೇವಲ 3-4 ಗಂಟೆಗಳಲ್ಲಿ ಮುಗಿಯುವ ಟಿ20 ಪಂದ್ಯಗಳು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತವೆ. ಇನ್ನು ಟೆಸ್ಟ್ ಕ್ರಿಕೆಟ್ ತನ್ನದೇ ಆದ ಆಟಗಾರರ ಕೌಶಲ್ಯ ಹಾಗೂ ನೈಜ ಸವಾಲಿನಿಂದಾಗಿ ಇಂದಿಗೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ.
ಆದರೆ 8 ಗಂಟೆಗೂ ಹೆಚ್ಚು ಕಾಲ ನಡೆಯುವ ಏಕದಿನ ಕ್ರಿಕೆಟ್ ಟಿ20ಯಷ್ಟು ವೇಗವೂ ಇಲ್ಲದೆ ಹಾಗೂ ಟೆಸ್ಟ್‌ನಷ್ಟು ತಾಂತ್ರಿಕ ಸವಾಲೂ ಇಲ್ಲದೆ ನಡುವೆ ಸಿಲುಕಿಕೊಂಡಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಅಲ್ಲದೆ ಅನಿಲ್ ಕುಂಬ್ಳೆ ಅವರು ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದು, ಅವರು ಸಹ ಇದೇ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಅನಿಲ್ ಕುಂಬ್ಳೆ ಸಾಧನೆಗಳು
ಅನಿಲ್ ಕುಂಬ್ಳೆ ಅವರು ಭಾರತದ ಪರ 271 ಏಕದಿನ ಪಂದ್ಯಗಳನ್ನು ಆಡಿದ್ದು, ಒಟ್ಟು 337 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಇಂದಿಗೂ ಅವರ ಹೆಸರಿನಲ್ಲೇ ಇದೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್‌ಗಳನ್ನು ಪಡೆದು ಜಗತ್ತಿನ ಮೂರನೇ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಅಂತಹ ಮಹಾನ್ ಆಟಗಾರನೇ 50 ಓವರ್‌ಗಳ ಕ್ರಿಕೆಟ್ ಬಗ್ಗೆ ಈ ರೀತಿ ಹೇಳಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಯೋಚಿಸಬೇಕಾದ ವಿಷಯವಾಗಿದೆ.
ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕ್ಷೀಣಿಸುತ್ತಿರುವುದು ಈಗಾಗಲೇ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ವಿಶ್ವಕಪ್ ಪಂದ್ಯಾವಳಿಗಳನ್ನು ಹೊರತುಪಡಿಸಿ ಸಾಮಾನ್ಯ ಏಕದಿನ ಪಂದ್ಯಗಳಿಗೆ ಜನಪ್ರಿಯತೆ ಕಡಿಮೆ ಆಗುತ್ತಿದ್ದು, ಕುಂಬ್ಳೆ ಅವರ ಹೇಳಿಕೆಯು ಈ ಕಹಿ ಸತ್ಯವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ. ಒಟ್ಟನಲ್ಲಿ ಹೇಳುವುದಾದರೆ ಕುಂಬ್ಳೆ ಅವರು ಈ ಹೇಳಿಕೆ ನೀಡಿರುವುದು ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.


Click it and Unblock the Notifications
