ನಿಜ್ವಾಗ್ಲೂ ಟೆಸ್ಟ್ ಕ್ರಿಕೆಟ್ ಆಡ್ತಾರಾ ವೈಭವ್? ಸಾಧ್ಯವಿಲ್ಲ ಎಂಬ ಎಬಿ ಡಿವಿಲಿಯರ್ಸ್ ಆತಂಕದ ಹಿಂದಿದೆ ಮಹತ್ವದ ಕಾಳಜಿ
AB de Villiers: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಕ್ರಮಣಕಾರಿ ಆಟ ಆಡಿ ಮಿಂಚಿದ ವೈಭವ್ ಸೂರ್ಯವಂಶಿ ಅವರು ಟೀಂ ಇಂಡಿಯಾ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಈ ಬಾಲಕನಿಗೆ ಕ್ರಿಕೆಟ್ ದಿಗ್ಗಜರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ. ಇದೀಗ ಮಿಸ್ಟರ್ 360 ಅಂತಲೇ ಹೆಸರುವಾಸಿಯಾಗಿರುವ ಆರ್‌ಸಿಬಿ ಮಾಜಿ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಅವರು ವೈಭವ್ ಭವಿಷ್ಯದ ಯೋಜನೆ ಕುರಿತು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬಿಹಾರದ ವೈಭವ್ ಸೂರ್ಯವಂಶಿ ಅವರು ಕೇವಲ 15ನೇ ವಯಸ್ಸಿಯಲ್ಲಿ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಇದೀಗ ಇವರ ಭವಿಷ್ಯದ ಯೋಜನೆಗಳ ಕುರಿತು ದಕ್ಷಿಣ ಆಫ್ರಿಕಾದ ಮಾಜಿ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ದೊಡ್ಡದೊಂದು ಪ್ರಶ್ನೆಯನ್ನು ಎತ್ತಿದ್ದಾರೆ. ವೈಭವ್ ಅವರ ತಂದೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, 'ನನ್ನ ಮಗನಿಗೆ ಟೆಸ್ಟ್ ಕ್ರಿಕೆಟ್ ಆಡುವುದು ಎಂದರೆ ಅಷ್ಟೇ ಇಷ್ಟ,' ಎಂದು ಹೇಳಿದ್ದರು. ಆದರೆ ಈಗಿನ ಕ್ರಿಕೆಟ್ ಯುಗದಲ್ಲಿ 15 ವರ್ಷದ ಹುಡುಗನಿಗೆ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ದೀರ್ಘಕಾಲ ಮುಂದುವರಿಯುವುದು ಎಷ್ಟು ಸಾಧ್ಯ ಎಂಬ ಬಗ್ಗೆ ಡಿವಿಲಿಯರ್ಸ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಎಬಿ ಡಿವಿಲಿಯರ್ಸ್ ವ್ಯಕ್ತಪಡಿಸಿದ ಆತಂಕಗಳೇನು?
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ಭಾರತ ತಂಡದ ಆಯ್ಕೆಯ ಕುರಿತು ಡಿವಿಲಿಯರ್ಸ್ ಮಾತನಾಡಿದ್ದಾರೆ. 'ವೈಭವ್ ಸದ್ಯ ಮೂರೂ ಮಾದರಿಯ ಕ್ರಿಕೆಟ್ ಆಡಲು ಬಯಸುತ್ತಿದ್ದಾರೆ ಮತ್ತು ಅವರ ತಂದೆ ಹೇಳುವಂತೆ ಅವರಿಗೆ ಟೆಸ್ಟ್ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಆದರೆ ನಿಜವಾಗಿಯೂ ಅವರು ರೆಡ್ ಬಾಲ್‌ನಲ್ಲಿ ಆಡಲು ಬಯಸುತ್ತಾರೆಯೇ? ಎಂಬುದು ನನ್ನ ಪ್ರಶ್ನೆ. ಏಕೆಂದರೆ ಇಂದಿನ ದಿನಗಳಲ್ಲಿ ಟಿ20 ಮತ್ತು ಟಿ10 ಲೀಗ್‌ಗಳ ಹಾವಳಿ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯುವ ಆಟಗಾರರು ಸುದೀರ್ಘ ಮಾದರಿಯ ಕ್ರಿಕೆಟ್ ಕಡೆಗೆ ಗಮನ ಹರಿಸುವುದು ಅಷ್ಟು ಸುಲಭವಲ್ಲ,' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಅತಿಯಾದ ಕ್ರಿಕೆಟ್ ಆಟಗಾರನನ್ನು ದಣಿಸುತ್ತದೆ'
ಮುಂದುವರಿದು ಮಾತನಾಡಿದ ಎಬಿ ಡಿವಿಲಿಯರ್ಸ್, 'ವೈಭವ್ ಅತ್ಯಂತ ಅದ್ಭುತ ಪ್ರತಿಭೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. 15ನೇ ವಯಸ್ಸಿಗೆ ಭಾರತ ತಂಡವನ್ನು ಪ್ರತಿನಿಧಿಸುವುದು ಸಾಮಾನ್ಯದ ಮಾತಲ್ಲ. ಆದರೆ ಈ ವಯಸ್ಸಿನಲ್ಲೇ ಅವರ ಮೇಲೆ ಅತಿಯಾದ ನಿರೀಕ್ಷೆ ಮತ್ತು ಒತ್ತಡ ಹೇರಬಾರದು. ಟಿ20 ಕ್ರಿಕೆಟ್‌ನ ಆಕ್ರಮಣಕಾರಿ ಶೈಲಿ ಹಾಗೂ ಟೆಸ್ಟ್ ಕ್ರಿಕೆಟ್‌ನ ತಾಳ್ಮೆಯ ಆಟ ಇವೆರಡನ್ನೂ ಒಂದೇ ಸಮಯದಲ್ಲಿ ನಿಭಾಯಿಸುವುದು ಅತ್ಯಂತ ಕಷ್ಟಕರ,' ಎಂದು ಹೇಳಿದ್ದಾರೆ.
'ಜಗತ್ತಿನ ಎಷ್ಟೋ ಶ್ರೇಷ್ಠ ಆಟಗಾರರೇ ಮೂರೂ (ಟಿ20, ODI, ಟೆಸ್ಟ್) ಮಾದರಿಯ ಕ್ರಿಕೆಟ್ ಆಡಲಾಗದೆ ದಣಿದು ಹೋಗಿದ್ದಾರೆ. ಆದ್ದಾರಿಂದ ವೈಭವ್ ಸೂರ್ಯವಂಶಿ ಅವರ ಮ್ಯಾನೇಜ್‌ಮೆಂಟ್ ಮತ್ತು ಬಿಸಿಸಿಐ ಅವರ ವೃತ್ತಿಜೀವನವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ,' ಎಂದು ಮಹತ್ವದ ಸಲಹೆ ನೀಡಿದ್ದಾರೆ.
ಟಿ20ಯಲ್ಲಿ ವೈಭವ್ ಅಬ್ಬರದ ಬ್ಯಾಟಿಂಗ್
ವೈಭವ್ ಈಗಾಗಲೇ ಐಪಿಎಲ್ ಹಾಗೂ ದೇಶಿಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ ಅವರಂತಹ ವಿಶ್ವಶ್ರೇಷ್ಠ ವೇಗಿಗಳ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸುವ ಅವರ ಬ್ಯಾಟಿಂಗ್ ಶೈಲಿಗೆ ಇಡೀ ಕ್ರಿಕೆಟ್ ಜಗತ್ತೇ ಫಿದಾ ಆಗಿದೆ. ಅವರು ಇತ್ತೀಚೆಗಷ್ಟೇ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇಡೀ ವಿಶ್ವದ ಕಣ್ಣು ವೈಭವ್ ಮೇಲೆ
ಆದರೆ ಟಿ20 ಮಾದರಿಯಲ್ಲಿ ಯಶಸ್ವಿಯಾದ ತಕ್ಷಣವೇ ಅವರನ್ನು ಟೆಸ್ಟ್ ಕ್ರಿಕೆಟ್‌ಗೂ ಪರಿಗಣಿಸುವುದು ಅಥವಾ ಅವರ ಮೇಲೆ ರೆಡ್ ಬಾಲ್ ಕ್ರಿಕೆಟ್‌ನ ಒತ್ತಡ ಹೇರುವುದು ಅವರ ಆಟಕ್ಕೆ ಧಕ್ಕೆ ತರಬಹುದು ಎನ್ನುವುದು ಡಿವಿಲಿಯರ್ಸ್ ಅವರ ಆತಂಕವಾಗಿದೆ. ಮುಂಬರುವ ದಿನಗಳಲ್ಲಿ ಈ ಯುವ ಆಟಗಾರ ಕೇವಲ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಸೀಮಿತವಾಗುತ್ತಾರಾ ಅಥವಾ ಟೆಸ್ಟ್ ಕ್ರಿಕೆಟ್‌ನಲ್ಲೂ ಭಾರತದ ಹೆಮ್ಮೆಯ ತಾರೆಯಾಗಿ ಹೊರಹೊಮ್ಮುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications