ಡಿಸಿಎಂ, ಸಚಿವ ಸ್ಥಾನ ಯಾವುದು ಕೊಟ್ಟರೂ ಬೇಡ ಅನ್ನಲ್ಲ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ, ಜುಲೈ 29: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದು, ಸದ್ಯದಲ್ಲಿಯೇ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಈ ನಡುವೆ ಉಪ ಮುಖ್ಯಮಂತ್ರಿ ಹುದ್ದೆ, ಸಚಿವ ಸ್ಥಾನಕ್ಕಾಗಿ ಬಿಜೆಪಿ ಶಾಸಕರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ.
ಈ ಮಧ್ಯೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಾವು ಡಿಸಿಎಂ ಹಾಗೂ ಸಚಿವ ಸ್ಥಾನದ ರೇಸ್‌ನಲ್ಲಿರುವುದಾಗಿ ಸೂಚ್ಯವಾಗಿ ತಿಳಿಸಿದ್ದು, ಸಂಘಟನೆ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧವಿರುವುದಾಗಿಯೂ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, "ಉಪ ಮುಖ್ಯಮಂತ್ರಿ ಹುದ್ದೆ, ಸಚಿವ ಸ್ಥಾನ ಯಾವುದೂ ಬೇಡ ಎಂದು ಹೇಳುವುದಿಲ್ಲ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ. ಒಂದು ವೇಳೆ ಸಂಘಟನೆ ಮಾಡುವಂತೆ ಜವಾಬ್ದಾರಿ ನೀಡಿದರೆ ಅದನ್ನು ಮಾಡುತ್ತೇನೆ,'' ಎಂದು ತಿಳಿಸಿದರು.
ಆಡಿಯೋಗೆ ಹೆದರಲ್ಲ, ಶೆಟ್ಟರ್ ರೀತಿ ನಿರ್ಧಾರವಿಲ್ಲ
"ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎಂದು ಹೇಳಲಾಗುತ್ತಿರುವ ಆಡಿಯೋ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ""ಯಾವುದೇ ಆಡಿಯೋ, ವಿಡಿಯೋಗೆ ಹೆದರುವುದಿಲ್ಲ. ಇನ್ನು ಜಗದೀಶ್ ಶೆಟ್ಟರ್ ಸಚಿವ ಸಂಪುಟ ಸೇರುವುದಿಲ್ಲ ಎಂದು ಹೇಳಿದ್ದಾರೆ. ಅವರು ತೆಗೆದುಕೊಂಡ ನಿರ್ಧಾರದಂತೆ ನಾನು ತೆಗದುಕೊಳ್ಳುವುದಿಲ್ಲ. ಪಕ್ಷದ ನಾಯಕರು, ಹೈಕಮಾಂಡ್ ತೀರ್ಮಾನಕ್ಕೆ ನಾನು ತಯಾರಾಗಿದ್ದೇನೆ,'' ಎಂದರು.
ಸಿಎಂ ಆಗುವ ಅರ್ಹತೆ ಇತ್ತು
"ತಮಗೂ ಮುಖ್ಯಮಂತ್ರಿ ಆಗುವ ಅರ್ಹತೆ ಇತ್ತು. ತಮಗಿಂತಲೂ ಹಿರಿಯರು, ಅನುಭವಿಗಳು ಪಕ್ಷದಲ್ಲಿದ್ದಾರೆ. ಆದರೆ ವರಿಷ್ಠರು ಬಸವರಾಜ ಬೊಮ್ಮಾಯಿಗೆ ಆ ಜವಾಬ್ದಾರಿ ನೀಡಿದ್ದಾರೆ. ಎರಡು ವರ್ಷ ಅವರಿಗೆ ನಾವೆಲ್ಲ ಬೆಂಬಲ ನೀಡುತ್ತೇವೆ. ಎರಡು ವರ್ಷದಲ್ಲಿ ಜನ ಮೆಚ್ಚುವಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ,'' ಎಂದು ಈಶ್ವರಪ್ಪ ತಿಳಿಸಿದರು.
ಕೃಷ್ಣನ ತಂತ್ರ, ರಾಮನ ಆಡಳಿತ
"ಬಸವರಾಜ ಬೊಮ್ಮಾಯಿಯನ್ನು ವರಿಷ್ಠರು ಸಿಎಂ ಮಾಡಿದ್ದು ಕೃಷ್ಣನ ತಂತ್ರವಾಗಿದೆ. ಎರಡು ವರ್ಷ ಉತ್ತಮವಾಗಿ ಅಧಿಕಾರ ನಡೆಸುತ್ತೇವೆ. ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ರಾಮರಾಜ್ಯ ನಿರ್ಮಿಸುತ್ತೇವೆ," ಎಂದು ಹೇಳಿದರು. ಈ ವೇಳೆ ಶಿವಮೊಗ್ಗ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.