ದುಬಾರಿ ದೀಪಾವಳಿ: ಶಿವಮೊಗ್ಗದಲ್ಲಿ ಗ್ರಾಹಕರ ಜೇಬು ಸುಡುತ್ತಿದೆ ಹೂವು, ಹಣ್ಣು, ಪಟಾಕಿ
ಶಿವಮೊಗ್ಗ, ಅಕ್ಟೋಬರ್ 23: ದೀಪಾವಳಿ ಹಬ್ಬದ ಅಂಗವಾಗಿ ಶಿವಮೊಗ್ಗದಲ್ಲಿ ಹಬ್ಬದ ಖರೀದಿ ಬಿರುಸಾಗಿದೆ. ಹೂವು, ಹಣ್ಣು, ತರಕಾರಿ, ಪೂಜಾ ಸಾಮಗ್ರಿಗಳ ಖರೀದಿಗೆ ಜನರು ದೊಡ್ಡ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಆಗಮಿಸಿದ್ದಾರೆ. ಗಾಂಧಿ ಬಜಾರ್, ಶಿವಪ್ಪನಾಯಕ ಹೂವಿನ ಮಾರುಕಟ್ಟೆ, ವಿನೋಬನಗರ ಎಪಿಎಂಸಿ ಮತ್ತು ನಗರದ ವಿವಿಧೆಡೆ ಹೂವು, ಹಣ್ಣು ಮಾರಾಟ ಮಾಡಲಾಗುತ್ತಿದೆ.
ಮಂಗಳವಾರ ಗ್ರಹಣ ಇದೆ. ಹಾಗಾಗಿ ಸೋಮವಾರದ ಲಕ್ಷ್ಮಿ ಪೂಜೆಗೆ ಶ್ರೇಷ್ಠ ಸಮಯ ಎಂದು ಇವತ್ತೆ ಪೂಜಾ ಸಾಮಗ್ರಿ ಖರೀದಿ ಮಾಡಲಾಗುತ್ತಿದೆ. ಹೂವು, ಹಣ್ಣು, ಬಾಳೆ ಕಂದು, ಕುಂಬಳಕಾಯಿ ಮಾರಾಟ ಜೋರಾಗಿದೆ. ಇನ್ನು, ದೀಪಾವಳಿ ಅಂಗವಾಗಿ ಹಣತೆ, ವಿಭಿನ್ನ ಬಗೆಯ ಲೈಟಿಂಗ್ ಸೇರಿದಂತೆ ಹಲವು ಅಲಂಕಾರಿಕ ವಸ್ತುಗಳ ಖರೀದಿಯು ಬಿರುಸಾಗಿದೆ.
ಹಬ್ಬದ ಖರೀದಿಗೆ ಬಂದ ಗ್ರಾಹಕರ ಜೇಬಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಚಂಡು ಹೂವು ಪ್ರತಿ ಕೆ.ಜಿಗೆ 100 ರೂ., ಒಂದು ಮಾರು ಖರೀದಿಸಿದರೆ 80 ರೂ. ಗಿಂತಲು ಹೆಚ್ಚು, ಸೇವಂತಿಗೆ ಕೆ.ಜಿ 200 ರೂ., ಮಾರು 50 ರಿಂದ 100 ರೂ. ಗುಲಾಬಿ ಕೆ.ಜಿ 400 ರೂ. ಇದೆ. ಸೇಬು, ಕಿತ್ತಳೆ, ಸಪೋಟ ಕೆ.ಜಿ 100 ರೂ. ನಿಂದ ಆರಂಭವಾಗಲಿದೆ. ದಾಳಿಂಬೆ ಕೆ.ಜಿಗೆ 150 ರೂ., ದ್ರಾಕ್ಷಿ ಮತ್ತು ಪೇರಲೆ ಕೆ.ಜಿ. 120 ರೂ. ನಿಂದ ಆರಂಭವಾಗಲಿದೆ.

ಗ್ರಾಹಕರಿಲ್ಲದೆ ಮಾರಾಟಗಾರರ ಅಳಲು
ಹೂವಿನ ಬೆಲೆ ದುಬಾರಿಯಾಗಿದ್ದು ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಿಗಳು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. 'ದೀಪಾವಳಿ ನಮ್ಮನ್ನ ದಿವಾಳಿ ಮಾಡುತ್ತಿದೆ. ಹೂವುಗಳ ಬೆಲೆ ಏರಿಕೆಯಾಗಿದೆ. ಇದೆ ಕಾರಣಕ್ಕೆ ಗ್ರಾಹಕರು ಬರುತ್ತಿಲ್ಲ. ರಾತ್ರಿ ವೇಳೆಗೆ ವ್ಯಾಪಾರವಾದರೆ ನಾವು ನೆಮ್ಮದಿಯಿಂದ ಮೆನೆಗೆ ಹೊರಡಬಹುದು' ಎಂದು ಹೂವು ಮಾರಾಟಗಾರರು ಹೇಳುತ್ತಾರೆ.
ಇತ್ತ ಗ್ರಾಹಕರು ಕೂಡ ಹೂವು, ಹಣ್ಣು ದುಬಾರಿಯಾಗಿದೆ ಎಂದು ಅಳಲು ತೊಡಿಕೊಳ್ಳುತ್ತಿದ್ದಾರೆ. 'ಪೂಜೆ ಮಾಡಲು ಹೂವು ಬೇಕು, ಹಣ್ಣು ಬೇಕು. ಎಲ್ಲದರ ರೇಟು ಜಾಸ್ತಿಯಾಗಿದೆ. ದಸರಾದಲ್ಲಿದ್ದ ಹಾಗೆ ರೇಟ್ ಇದೆ. ಕೈಲಾದಷ್ಟು ಕೊಂಡು ಹೋಗಿ ಪೂಜೆ ಮಾಡುತ್ತಿದ್ದೇವೆ' ಎಂದು ಹೇಳುತ್ತಿದ್ದಾರೆ.

ಪಟಾಕಿ ಕೊಳ್ಳುವಲ್ಲಿ ನಿರತರಾದ ಗ್ರಾಹಕರು
ದೀಪಾವಳಿ ಅಂಗವಾಗಿ ಶಿವಮೊಗ್ಗ ನಗರದಲ್ಲಿ ಪಟಾಕಿ ಖರೀದಿ ಬಿರುಸುಗೊಂಡಿದೆ. ವಿವಿಧ ಮಳಿಗೆಗಳಲ್ಲಿ ಬೆಳಗ್ಗೆಯಿಂದ ಪಟಾಕಿ ಮಾರಾಟವಾಗುತ್ತಿದೆ. ನೆಹರೂ ಕ್ರೀಡಾಂಗಣದಲ್ಲಿ ಸುಮಾರು ಸುಮಾರು 15 ಮಳಿಗೆಗಳಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿದೆ. ವಿವಿಧ ಬಗೆಯ ಪಟಾಕಿಗಳು ಇಲ್ಲಿ ಮಾರಾಟಕ್ಕಿವೆ. ನೂರಾರು ರುಪಾಯಿಯಿಂದ ಸಾವಿರಾರು ರುಪಾಯಿವರೆಗೆ ವಿವಿಧ ಬಗೆಯ ಪಟಾಕಿಗಳು ಖರೀದಿಸಲಾಗುತ್ತಿದೆ.
ಇವತ್ತು ಬೆಳಗ್ಗೆಯಿಂದ ಜನರು ಪಟಾಕಿ ಕೊಳ್ಳುವಲ್ಲಿ ನಿರತವಾಗಿದ್ದಾರೆ. ಮಕ್ಕಳನ್ನು ಕರೆತಂದು ಅವರಿಷ್ಟದ ಪಟಾಕಿಗಳನ್ನು ಪೋಷಕರು ಕೊಡಿಸುತ್ತಿದ್ದಾರೆ. ಹಣತೆಗಳು, ಉದ್ದದ ಊದು ಬತ್ತಿಯ ಖರೀದಿಯು ಬಿರುಸಾಗಿ ನಡೆಯುತ್ತಿದೆ.

ಪಟಾಕಿಯ ಬೆಲೆಯೂ ಹೆಚ್ಚು
ಜನ ಪಟಾಕಿ ಖರೀದಿಗೆ ಬರುತ್ತಿದ್ದಾರೆ. ಭಾನುವಾರ ಮತ್ತು ಸೋಮವಾರ ಬೆಳಗ್ಗೆ ಹೆಚ್ಚಿನ ವ್ಯಾಪಾರವಾಗಲಿದೆ. ಗ್ರೀನ್ ಪಟಾಕಿಗಳನ್ನೆ ಮಾರಟಕ್ಕಿಟ್ಟಿದ್ದೇವೆ. ಈ ಭಾರಿ ಬೆಲೆ ಸ್ವಲ್ಪ ಹೆಚ್ಚಾಗಿದೆ. ಆದರೂ ಜನರು ಖುಷಿಯಿಂದ ಬಂದು ಖರೀದಿಸುತ್ತಿದ್ದಾರೆ. ಹಸಿರು ಪಟಾಕಿಯಿಂದ ನಮಗೆ ಸ್ವಲ್ಪ ಹೊರೆಯಾಗುತ್ತಿದೆ ಅನ್ನುತ್ತಾರೆ ಪಟಾಕಿ ಅಂಗಡಿ ಮಾಲೀಕ ವಿಜಯ್.

ಜೇಬು ಸುಡುತ್ತಿದೆ ಪಟಾಕಿ
ಪ್ರತಿ ವರ್ಷ ಪಟಾಕಿ ಸಿಡಿಸುತ್ತೇವೆ. ಮಕ್ಕಳು, ಸಂಬಂಧಿಗಳು ಮನೆಗೆ ಬರುವುದರಿಂದ ಎಲ್ಲರೂ ಜೊತೆಗೆ ಹಬ್ಬ ಮಾಡಬೇಕಿದೆ. ಹಾಗಾಗಿ ಎಲ್ಲರಿಗೂ ಇಷ್ಟವಾಗುವ ರೀತಿಯ ಪಟಾಕಿ ಖರೀದಿಸುತ್ತಿದ್ದೇವೆ. ಕಳೆದ ಬಾರಿಗಿಂತ ಈ ಭಾರಿ ಪಟಾಕಿ ಬೆಲೆ ಹೆಚ್ಚಾಗಿದೆ. ಆದರೂ ಹಬ್ಬದ ಖರೀದಿ ಬಿಡೋಕಾಗಲ್ಲ ಎಂದು ಖರೀದಿಗೆ ಬಂದವರ ಅಭಿಪ್ರಾಯವಾಗಿದೆ.












Click it and Unblock the Notifications