HD Kumaraswamy Health: ಹೆಚ್.ಡಿ ಕುಮಾರಸ್ವಾಮಿ ಸರಿಯಾಗಿ ನೀರು ಕುಡಿಯಲ್ಲ, ಊಟ ಮಾಡಲ್ಲ, ಮಕ್ಕಳಂತೆ ಹಠ ಮಾಡ್ತಾರೆ
ಎಚ್ ಡಿ ಕುಮಾರಸ್ವಾಮಿ ಆರೋಗ್ಯ ಸ್ಥಿತಿ: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಪತ್ನಿ ಅನಿತಾ ಕುಮಾರಸ್ವಾಮಿ ಮಕ್ಕಳಿಗೆ ಹೋಲಿಸಿದ್ದಾರೆ. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಮಕ್ಕಳಂತೆ, ಊಟ ಮಾಡಲು ಹಠ ಮಾಡ್ತಾರೆ ಎಂದು ಪತ್ನಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಜನಪ್ರತಿನಿಧಿಗಳು ಪ್ರಚಾರದಲ್ಲಿ ಬ್ಯೂಸಿ ಆಗಿದ್ದಾರೆ. ಬಿಡುವಿಲ್ಲದ ಸಭೆ ಹಾಗೂ ಪ್ರಚಾರದಿಂದಾಗಿ ಸರಿಯಾಗಿ ಊಟ, ನಿದ್ದೆ, ಆರೋಗ್ಯ ಕಾಪಾಡಿಕೊಳ್ಳುವುದು ಈ ಸಮಯದಲ್ಲಿ ಸಾಧ್ಯವಾಗುತ್ತಿಲ್ಲ.

ಈ ನಡುವೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸೋಮವಾರವಷ್ಟೇ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡುವಾಗಲೂ ಅವರು, 'ನನಗೆ ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಆದರೆ ನನಗೆ ವಿಶ್ರಾಂತಿ ಪಡೆಯಲು ಸಮಯವಿಲ್ಲ. ನಾನು ಪ್ರಚಾರ, ಸಭೆಗಳನ್ನು ನಡೆಸಬೇಕಿದೆ' ಎಂದಿದ್ದರು. ಈ ಮೂಲಕ ಕುಮಾರಸ್ವಾಮಿ ಚುನಾವಣೆ ಮೇಲಿನ ಗಂಭೀರತೆಯನ್ನು ವ್ಯಕ್ತಪಡಿಸಿದ್ದರು.
ಕುಮಾರಸ್ವಾಮಿ ಅವರ ವಿಶ್ರಾಂತಿ ರಹಿತ ಕೆಲಸದ ಬಗ್ಗೆ ಚನ್ನಪಟ್ಟಣದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಸುದ್ದಿಗಾರರು ಪ್ರಶ್ನೆಸಿದಾಗ, 'ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮಕ್ಕಳಂತೆ ಹಠ ಮಾಡ್ತಾರೆ, ಸರಿಯಾಗಿ ಊಟಾನೆ ಮಾಡಲ್ಲ' ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅವರು ಊಟದ ವಿಚಾರದಲ್ಲಿ ಮಕ್ಕಳಂತೆ ಹಠ ಮಾಡುತ್ತಾರೆ. ಬರೀ ಮೊಸರನ್ನ ತಿನ್ನುತ್ತಾರೆ. ಹೆಚ್ಚು ನೀರು ಕುಡಿಯಲ್ಲ, ಸರಿಯಾಗಿ ಊಟ ಮಾಡಲ್ಲ. ಹೀಗಾಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಿ ಒಂದು ದಿನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದ್ಯ ಸ್ವಲ್ಪ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅನಿತಾ ಕುಮಾರಸ್ವಾಮಿ ಇಂದು ಚನ್ನಪಟ್ಟಣದಲ್ಲಿ ಹೆಚ್‌ಡಿಕೆ ಪರ ಪ್ರಚಾರ ಮಾಡಿದರು. ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿದರು. ಈ ಬಗ್ಗೆ ಮಾತನಾಡಿದ ಅವರು, 'ನಾನು ಚನ್ನಪಟ್ಟಣದಾದ್ಯಂತ ಪ್ರಚಾರ ಮಾಡುತ್ತಿದ್ದು, ಕ್ಷೇತ್ರದ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇಲ್ಲಿನ ಜನ ಬುದ್ಧಿವಂತರಾಗಿದ್ದು, ಕುಮಾರಸ್ವಾಮಿ ಅವರನ್ನ ಅರ್ಥ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಸಿಎಂ ಕ್ಯಾಂಡಿಡೇಟ್, ಅವರನ್ನ ಗೆಲ್ಲಿಸಿದ್ರೆ ಕ್ಷೇತ್ರಕ್ಕೆ ಅನ್‌ಲಿಮಿಟೆಡ್ ಅನುದಾನ ಸಿಗಲಿದೆ. ಮತ್ತಷ್ಟು ಅಭಿವೃದ್ಧಿಗೆ ಸಹಕಾರಿ ಆಗಲಿದೆ' ಎಂದು ಭರವಸೆ ನೀಡಿದ್ದಾರೆ.












Click it and Unblock the Notifications