ಬೈಕ್-ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಪರೀಕ್ಷೆಗೆ ತೆರಳುವ ಧಾವಂತದಲ್ಲಿ ಮಸಣ ಸೇರಿದ ವಿದ್ಯಾರ್ಥಿ
ರಾಮನಗರ, ಜುಲೈ 13: ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳ ಬೈಕ್ ಹಾಗೂ ಸರ್ಕಾರಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳದಲೇ ಮೃತಪಟ್ಟು, ಮತ್ತೋರ್ವ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಹಾಗೂ ಮಾಗಡಿ ಹೆದ್ದಾರಿಯಲ್ಲಿ ನಡೆದಿದೆ.
ಸರ್ಕಾರಿ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಲ್ಲಿ ಹಾರೋಹಳ್ಳಿಯ ಬೆಳ್ಳನ ಕುಪ್ಪೆ ನಿವಾಸಿ ದರ್ಶನ್ (19) ಮೃತಪಟ್ಟಿದ್ದಾನೆ. ಆತನ ಜೊತೆಗಿದ್ದ ಹಾರೋಹಳ್ಳಿಯ ಮೆಗಳ ಬೀದಿಯ ಭರತ್‌ಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುವನ್ನು ವಿದ್ಯಾರ್ಥಿಯನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಐಟಿಐ ವಿದ್ಯಾರ್ಥಿಗಳಾದ ದರ್ಶನ್ ಹಾಗೂ ಭರತ್ ಪರೀಕ್ಷೆ ಬರೆಯಲು ಹಾರೋಹಳ್ಳಿಯಿಂದ ಬೈಕ್‌ನಲ್ಲಿ ಮಾಗಡಿಗೆ ತೆರಳುವ ಸಮಯದಲ್ಲಿ ಮಾಗಡಿ ಸಮೀಪದ ಜೋಡುಗಟ್ಟೆ ಕ್ರಾಸ್ ಬಳಿ ಮಾಗಡಿಯಿಂದ ರಾಮನಗರ ಕಡೆಗೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ಗೆ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿಯಾಗಿದೆ.
ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಮೃತ ದರ್ಶನ್ ಬೈಕ್ ಸಮೇತ ಬಸ್ ಮುಂಭಾಗಕ್ಕೆ ಸಿಲುಕಿರುವುದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿತ್ತು. ಇನ್ನು ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಅಪಘಾತದ ನಡೆದ ಜೋಡುಗಟ್ಟೆ ಕ್ರಾಸ್ ಬಳಿ ತೀವ್ರ ತಿರುವಿರುವ ಕಾರಣ ಇದೇ ಸ್ಥಳದಲ್ಲೇ ಪದೇಪದೇ ಅಪಘಾತಗಳು ನಡೆಯುತ್ತಿರುತ್ತವೆ. ಅಪಘಾತಗಳನ್ನು ತಡೆಯಲು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೇ ಇರುವುದೇ ಇಂತಹ ದುರ್ಘಟನೆಗಳಿಗೆ ಕಾರಣ ಎಂದು ಸ್ಥಳೀಯರು ಹಾಗೂ ಅಪಘಾತದ ಪ್ರತ್ಯಕ್ಷ ದರ್ಶಿಗಳು ಆರೋಪಿಸಿದ್ದಾರೆ. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಜೋಡುಗಟ್ಟೆ ಕ್ರಾಸ್ ಬಳಿ ನಡೆಯುತ್ತಿರುವ ಅಪಘಾತಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.












Click it and Unblock the Notifications