Mysuru-Bengaluru Expressway: ವಾರದೊಳಗೆ ಟೋಲ್ ದರ ಇಳಿಕೆ ಮಾಡದಿದ್ರೆ ಉಗ್ರ ಹೋರಾಟ: NHAIಗೆ ಕನ್ನಡಪರ ಸಂಘಟನೆಗಳಿಂದ ವಾರ್ನ್
ರಾಮನಗರ, ಜೂನ್, 13: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಆದಾಗಿನಿಂದ ಟೋಲ್ ವಿಚಾರವಾಗಿ ವಾಹನ ಸವಾರರು ಮತ್ತು ಟೋಲ್ ಸಿಬ್ಬಂದಿ ನಡುವೆ ವಾಗ್ವಾದಗಳು ನಡೆಯುತ್ತಲೇ ಇವೆ. ಮತ್ತೊಂದೆಡೆ ಇದೀಗ ಮತ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜೂನ್ 1ರಿಂದ ಟೋಲ್ ದರವನ್ನು ಹೆಚ್ಚಳ ಮಾಡಿದೆ. ಆದರೆ ಇತ್ತೀಚೆಗಷ್ಟೆ ಈ ವಿಚಾರ ಬೆಳಕಿಗೆ ಬಂದಿದ್ದು, ಇಂದು ಟೋಲ್ ದರ ಹೆಚ್ಚಳ ವಿರೋಧಿಸಿ ಕಣಮಿಣಕಿ ಟೋಲ್‌ನಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ ದರ ಹೆಚ್ಚಳ ನಿಲುವನ್ನು ವಿರೋಧಿಸಿ ಇಂದು ಕನ್ನಡಪರ ಸಂಘಟನೆಗಳು ಕಣಮಿಣಿಕಿ ಟೋಲ್‌ನಲ್ಲಿ ಪ್ರತಿಭಟನೆ ನಡುಸುವ ಮೂಲಕ ಆಕ್ರೋಶ ಹೊರಹಾಕಿವೆ. ಅಲ್ಲದೆ ಬೆಲೆ ಏರಿಕೆಯಿಂದ ಈಗಾಗಲೇ ಜನ ಬೇಸತ್ತಿದ್ದಾರೆ. ಈ ಸಮಯದಲ್ಲಿ ಟೋಲ್ ದರ ಹೆಚ್ಚು ಮಾಡಿದರೆ ಸಾಮಾನ್ಯ ಜನರ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂದು ಕನ್ನಡ ಪರ ಹೋರಾಟಗಾರರು ಕೆಂಡಕಾಡಿದ್ದಾರೆ.

ಹಾಗೆಯೇ ಒಂದು ವಾರದಲ್ಲಿ ಟೋಲ್ ದರ ಪರಿಷ್ಕರಣೆ ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ.ಮೂಲ ಸೌಲಭ್ಯ ನೀಡದೆ ಅಪೂರ್ಣ ಹೆದ್ದಾರಿಗೆ ಟೋಲ್ ದರ ಹೆಚ್ಚಳ ಮಾಡಿರುವುದು ತೀವ್ರ ಖಂಡನೀಯವಾಗಿದೆ. ಒಂದು ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಟೋಲ್ ಬೆಲೆ ಏರಿಕೆ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಟೋಲ್ ಶುಲ್ಕ ಹೆಚ್ಚಳ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ರಸ್ತೆಯ ಟೋಲ್ ಶುಲ್ಕವನ್ನು ಮತ್ತೇ ಹೆಚ್ಚಳ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಶೇಕಡಾ 22ರಷ್ಟು ಟೋಲ್ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಜೂನ್ 1ರಿಂದಲೇ ಶುಲ್ಕ ಹೆಚ್ಚಳ ನಿಯಮ ಅನ್ವಯ ಆಗಿದೆ. ಆದರೆ ಫಾಸ್ಟ್ ಟ್ಯಾಗ್ ಇದ್ದ ಹಿನ್ನೆಲೆ ಟೋಲ್ ದರ ಹೆಚ್ಚಳದ ಬಗ್ಗೆ ವಾಹನ ಸವಾರರ ಗಮನಕ್ಕೆ ಬಂದಿರಲಿಲ್ಲ. ಇದೀಗ ಈ ವಿಚಾರ ಬಹಿರಂಗವಾಗಿದ್ದು, ಆಕ್ರೋಶಗಳು ಭುಗಿಲೆದ್ದಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಧಿಸಿರುವ ಟೋಲ್ ದರದ ವಿವರವನ್ನು ಇಲ್ಲಿ ನೀಡಲಾಗಿದೆ. ಹಾಗಾದರೆ ಶುಲ್ಕವನ್ನು ಯಾವ ವಾಹನಕ್ಕೆ ಎಷ್ಟು ಹೆಚ್ಚಳ ಮಾಡಿದ್ದಾರೆ ಮಾಡಿದ್ದಾರೆ ಎಂದು ತಿಳಿಯಿರಿ.
ಯಾವ ವಾಹನಕ್ಕೆ ಎಷ್ಟು ದರ?
1. ಕಾರು, ವ್ಯಾನ್, ಜೀಪ್ ಏಕಮುಖ ಸಂಚಾರ: 135-165 ರೂಪಾಯಿಗೆ ಏರಿಕೆ (30 ರೂಪಾಯಿ ಹೆಚ್ಚಳ)
2. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ ದರ 220-270 ರೂಪಾಯಿಗೆ ಏರಿಕೆ (50 ರೂಪಾಯಿ ಹೆಚ್ಚಳ)
3. ಟ್ರಕ್, ಬಸ್, 2 ಆ್ಯಕ್ಸೆಲ್ ವಾಹನ ಏಕಮುಖ ಸಂಚಾರ ಟೋಲ್ ದರ 460-565 ರೂಪಾಯಿಗೆ ಏರಿಕೆ (105 ರೂಪಾಯಿ ಹೆಚ್ಚಳ)
4.3 ಆ್ಯಕ್ಸೆಲ್ ವಾಹನಗಳ ಏಕಮುಖ ಸಂಚಾರ ಟೋಲ್ ದರ 500-615 ರೂಪಾಯಿಗೆ ಏರಿಕೆ (115 ರೂಪಾಯಿ ಹೆಚ್ಚಳ)
5. ಭಾರಿ ವಾಹನಗಳ ಏಕಮುಖ ಸಂಚಾರ ಟೋಲ್ ದರ 720- 885 ರೂಪಾಯಿಗೆ ಏರಿಗೆ (165 ರೂಪಾಯಿ ಹೆಚ್ಚಳ)
6. ಅದರಲ್ಲೂ 7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸೆಲ್ ವಾಹನಗಳ ಟೋಲ್ ದರ 880-1,080 ರೂಪಾಯಿಗೆ ಏರಿಕೆ (200 ರೂಪಾಯಿ ಹೆಚ್ಚಳ)












Click it and Unblock the Notifications