ಒಬ್ಬ ಭ್ರಷ್ಟ ವ್ಯಕ್ತಿಗೆ ಅಧಿಕಾರ ಕೊಡಬೇಕಾ..?: ಡಿ.ಕೆ.ಸುರೇಶ್ ವಿರುದ್ಧ ಸಿ.ಪಿ.ಯೋಗೇಶ್ವರ್ ವಾಗ್ದಾಳಿ
ಬೆಂಗಳೂರು, ಮಾರ್ಚ್ 31: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಪ್ರಮಾಣ ಪತ್ರದಲ್ಲಿ 600 ಕೋಟಿ ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ ಅವರು ಮೊದಲ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದಾಗ 6 ಕೋಟಿ ಆಸ್ತಿ ಇರಲಿಲ್ಲ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪಿಸಿದರು.
ಬಿಜೆಪಿ ಜೆಡಿಎಸ್ ಕಾರ್ಯಕರ್ತ ಸಮ್ಮಿಲನ ಸಭೆಯಲ್ಲಿ ಮಾತನಾಡಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ ದಿನ ಸಾವಿರಾರು ಜನರನ್ನು ಸೇರಿಸಿ ನಾಮಿನೇಷನ್ ಮಾಡಿದ್ದಾರೆ. ಬರೋರಿಗೆ ಎರಡು ಸಾವಿರ ಕೊಟ್ಟು, ಬೈಕಿನಲ್ಲಿ ಬಂದವರಿಗೆ ಪೆಟ್ರೋಲ್ ಹಾಕಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

ಮೋದಿ ಸಂಪುಟದಲ್ಲಿ ಭ್ರಷ್ಟಾಚಾರ ಇಲ್ಲ
ಸಾದಾಸೀರೆ ಉಟ್ಟುಕೊಂಡು, ಕಿವಿಯಲ್ಲಿ ಚಿನ್ನದ ಓಲೆ ಇಲ್ಲ, ಕತ್ತಿನಲ್ಲಿ ಚಿನ್ನದ ಸರ ಇಲ್ಲ, ಅವರು ಈ ದೇಶದ ಫೈನಾನ್ಸ್ ಮಿನಿಸ್ಟರ್, ನಿರ್ಮಲಾ ಸೀತಾರಾಮನ್ ಅವರನ್ನು ಮೋದಿ ಅವರು ಲೋಕಸಭೆಗೆ ಸ್ಪರ್ಧೆ ಮಾಡಿ ಎಂದು ಹೇಳಿದರೆ, ಅವರು ಲೋಕಸಭೆಗೆ ದುಡ್ಡಿಲ್ಲ, ನನ್ನನ್ನು ಚುನಾವಣೆಗೆ ದೂಡಬೇಡಿ ಎಂದಿದ್ದಾರೆ.
ನನಗೆ ಬಂದ ಸಂಬಳದಲ್ಲಿ ಅಷ್ಟೋ ಇಷ್ಟೋ ಕೂಡಿಟ್ಟುಕೊಂಡು ಜೀವನ ನಡೆಸುತ್ತಾ ಇದೀನಿ, ನನಗೆ ಚುನಾವಣೆ ಬೇಡ ಅಂದಿದ್ದಾರೆ. ಇದು ದೇಶದ ಹಣಕಾಸು ಸಚಿವ ಪ್ರಮಾಣಿಕತೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ. ನರೇಂದ್ರ ಮೋದಿ ಅವರ ಸಂಪುಟದಲ್ಲಿ ಭ್ರಷ್ಟಾಚಾರ ಇಲ್ಲ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದರು
ಮತದಾರರು ಆತ್ಮಸಾಕ್ಷಿ ಕಳೆದುಕೊಳ್ಳ ಬೇಡಿ
12 ವರ್ಷಗಳ ಹಿಂದೆ ಡಿ.ಕೆ.ಸುರೇಶ್ 6 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿರಲ್ಲಿ, ಅದರೆ ಈ ಬಾರಿ 600 ಕೋಟಿ ದುಡ್ಡಿದೆ ಅಂತ ಹೇಳಿಕೊಂಡಿದ್ದಾರೆ. ಡಿ.ಕೆ.ಸುರೆಶ್ ಒಬ್ಬ ಭ್ರಷ್ಟ, ದುರಾಚಾರಿ, ಅಧಿಕಾರಿಗಳನ್ನು ಹೆದರಿಸುವ ವ್ಯಕ್ತಿಗೆ ಅಧಿಕಾರ ಕೊಡಬೇಕೋ, ನೀವೇ ಯೋಚನೆ ಮಾಡಿ ದೇಶ ವಿಭಜನೆ ಮಾಡೋಣ ಅಂತ ಹೇಳುವ, ನಮ್ ಟ್ಯಾಕ್ಸ್ ನಾವ್ ಏನ್ ಬೇಕಾದ್ರೂ ಮಾಡ್ತೀವಿ ಎನ್ನುವವರಿಗೆ ಮತ ಹಾಕಬೇಕಾ..? ಅವರು ಏನ್ ಬೇಕಾದ್ರೂ ಮಾಡ್ತಾರೆ, ಸೀರೆ ಕೊಡ್ತಾರೆ, ಕುಕ್ಕರ್ ಕೊಡ್ತಾರೆ, ಆದರೆ ನೀವು ಸ್ವಾಭಿಮಾನಿಗಳು, ಯಾವ ಕಾರಣಕ್ಕೂ ಆತ್ಮಸಾಕ್ಷಿ ಕಳೆದುಕೊಳ್ಳಬೇಡಿ ಎಂದರು.
ನಾವು ಹತ್ತು ವರ್ಷದಿಂದ ಜೆಡಿಎಸ್ ಹಾಗೂ ಬಿಜೆಪಿ ಇಬ್ಬರು ಕಿತ್ತಾಟ ಮಾಡಿಕೊಂಡ ಪರಿಣಾಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಕಿತ್ತೆಸೆಯೋದಕ್ಕೆ ನಾವು ಈಗ ಒಂದಾಗಬೇಕು. ಕಾಂಗ್ರೆಸ್ ಪಕ್ಷವನ್ನು ಈ ಭಾಗದಲ್ಲಿ ತೆಗೆಯಬೇಕು. ಎರಡೂ ಪಕ್ಷದ ಮುಖಂಡರು ಒಂದಾದದರೆ ಸಾಕು, ಚುನಾವಣೆ ಮುಗೀತು ಅಂತ ಅರ್ಥ. ಚನ್ನಪಟ್ಟಣ ಒಂದೇ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿಗೆ ಒಂದು ಲಕ್ಷ ಲೀಡ್ ಬಂದೇ ಬರುತ್ತೆ ಎಂದು ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಬಳಿ ದುಡ್ಡಿಲ್ಲ
ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಕುಂತು ತಿಂದ್ರೆ ಕುಡಿಕೆ ಹೊನ್ನು ಸಾಲಲ್ಲ ಅಂತ ನಮ್ಮ ತಾಯಿ ಹೇಳ್ತಿದ್ರು. ಗ್ಯಾರಂಟಿ ಕೊಡುತ್ತೇನೆ ಅಂತ ಹೇಳಿ ಎಲ್ಲಾ ಇಲಾಖೆಯಲ್ಲಿ ಸಾಲ ಮಾಡುತ್ತಿದ್ದಾರೆ. ಬೆಸ್ಕಾಂನಲ್ಲೂ ದುಡ್ಡಿಲ್ಲ. ಕೆಎಸ್‌ಆರ್‌ಟಿಸಿ ಕೂಡ ಬಸ್ ಅಡ ಇಟ್ಟು ಸಾಲ ತೆಗದುಕೊಂಡು ಕೆಲಸ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಆದ ಮೇಲೆ ಸರ್ಕಾರದಲ್ಲಿ ದುಡ್ಡಿರಲ್ಲ, ಯಾಕಂದ್ರೆ ಈ ಸರ್ಕಾರನೇ ಇರಲ್ಲ ಎಂದು ಸಿಪಿವೈ ಭವಿಷ್ಯ ನುಡಿದರು.












Click it and Unblock the Notifications