ರಾಮನಗರ ಮಹಿಳೆಯರಿಗೆ ವಾಷಿಂಗ್ ಮಷಿನ್ ಭಾಗ್ಯ: ಏನಿದು ಹೊಸ ಯೋಜನೆ?
ರಾಮನಗರ, ಮಾರ್ಚ್ 04: ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿ ಕುಳಿತಿಲ್ಲ, ಜಾತಿ, ಧರ್ಮ, ಮತ ಭೇದವಿಲ್ಲದೆ ನೀಡಿದ ಐದು ಗ್ಯಾರಂಟಿಗಳಿಗೆ 60 ಸಾವಿರ ಕೋಟಿ ರೂಪಾಯಿಗಳನ್ನು ತಲುಪಿಸುವ ಕೆಲಸ ಮಾಡಿದೆ ಎಂದು ಶಾಸಕ ಎಚ್.ಎ ಇಕ್ಬಾಲ್ ಹುಸೇನ್ ಹೇಳಿದರು.
ನಗರದ ಶಾಸಕರ ಕಚೇರಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಜನತೆಯ ಸೇವೆಯನ್ನು ಯಾವ ರೀತಿ ಮಾಡಿ ತೋರಿಸಬಹುದು. ಸರ್ಕಾರದ ಕಾರ್ಯಕ್ರಮ ಮತ್ತು ಅಭಿವೃದ್ಧಿಗಳನ್ನು ಎಲ್ಲರ ಸಹಕಾರದಲ್ಲಿ ಮಾಡಿ ತೋರಿಸುತ್ತಿದ್ದೇನೆ. ಕಳೆದ 25 ವರ್ಷಗಳಿಂದ ಆಗದ ಕೆಲಸಗಳು ನನಗೆ ಸವಾಲಾಗಿವೆ ಎಂದರು.

ಅಭಿವೃದ್ಧಿ, ಕುಡಿಯುವ ನೀರು, 157 ಕೋಟಿ ರೂ ವೆಚ್ಚದಲ್ಲಿ ಅರ್ಕಾವತಿ ದಂಡೆಯಲ್ಲಿ ಪಾರ್ಕ್, ಜಿಲ್ಲಾ ಕ್ರೀಡಾಂಗಣಕ್ಕೆ ಸೌಕರ್ಯಗಳು ಸೇರಿದಂತೆ ಕ್ಷೇತ್ರಕ್ಕೆ ಹೊಸ ಚಿತ್ರಣ ಕೊಡುವ ಕೆಲಸ ಮಾಡಲಾಗುತ್ತಿದೆ.100 ಎಕರೆ ಜಮೀನಿನಲ್ಲಿ ವಸತಿ ಕಲ್ಪಿಸುವ ಕೆಲಸಕ್ಕೆ ಈಗಾಗಲೇ ನಿವೇಶನ ರಹಿತ 13 ಸಾವಿರ ಅರ್ಜಿಗಳು ಬಂದಿವೆ ಎಂದರು.
ಕ್ಷೇತ್ರ ಪ್ರವಾಸದ ಸಮಯದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಸಮಸ್ಯೆ ಹೇಳಿಕೊಂಡರು. ಅದಕ್ಕೆ ಪ್ರತಿ ತಿಂಗಳು ಸರ್ಕಾರದಿಂದ ನನಗೆ ಸಿಗುವ ನೆರವಿನ ಹಣದಲ್ಲಿ 61 ವಿದ್ಯಾರ್ಥಿಗಳಿಗೆ 7 ಲಕ್ಷ ರೂ ಡಿಡಿ ವಿತರಿಸಿದ್ದೇನೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ, ಸರ್ಕಾರದ ಸವಲತ್ತುಗಳನ್ನು ಪಡೆದ ಫಲಾನುಭವಿಗಳು, ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಬದುಕುಕಟ್ಟಿಕೊಳ್ಳಿ ಎಂದು ಕಿವಿ ಮಾತು ಹೇಳಿದರು
ರಾಮನಗರದ ಎರಡು ವಾರ್ಡ್‌ಗಳಲ್ಲಿ ಬಟ್ಟೆ ಒಗೆಯುವ 10 ಮೆಷಿನ್ ಕೇಂದ್ರ ನಿರ್ಮಾಣಕ್ಕೆ ಪ್ರಾಯೋಗಿಕವಾಗಿ ಯೋಜನೆ ರೂಪಿಸಿದ್ದು, ಕೆಲವೇ ದಿನಗಳಲ್ಲಿ ವಿನೂತನ ಯೋಜನೆ ಸಾಕಾರವಾಗಲಿದೆ ಎಂದರು.
ರಾಮನಗರ ಮಹಿಳೆಯರಿಗೆ ವಾಷಿಂಗ್ ಮಷಿನ್ ಭಾಗ್ಯ
ಸಾಮಾನ್ಯವಾಗಿ ಮಹಿಳೆಯರು ಬಟ್ಟೆಗಳನ್ನು ತೊಳೆಯಲು ನದಿ ದಡ ಅಥವಾ ಕೆರೆಗಳ ಬಳಿ ಹೋಗುತ್ತಾರೆ. ಮಕ್ಕಳು ಕೂಡ ತೆರಳುತ್ತಾರೆ. ಹಲವೆಡೆ, ಬಟ್ಟೆ ತೊಳೆಯಲು ಹೋಗಿ ನೀರಿನಲ್ಲಿ ಕೊಚ್ಚಿದ ಘಟನೆಗಳು ನಡೆದಿವೆ. ಹೀಗಾಗಿ ಮಹಿಳೆಯರ ಅನುಕೂಲಕ್ಕಾಗಿ ರಾಮನಗರದ ಶಾಸಕರು ಸಾರ್ವಜನಿಕ ಸ್ಥಳಗಳಲ್ಲಿ ವಾಷಿಂಗ್ ಮಷಿನ್ ಅಳವಡಿಕೆ ಮಾಡಲು ಮುಂದಾಗಿದ್ದಾರೆ.

ಚೈನಾ, ಇಂಡೋನೇಷ್ಯಾದಂತಹ ದೇಶಗಳಲ್ಲಿ ಈ ರೀತಿಯ ಕ್ರಮ ಜಾರಿಯಲ್ಲಿವೆ. ಇದೇ ವ್ಯವಸ್ಥೆಯನ್ನ ರಾಮನಗರದಲ್ಲಿ ಅಳವಡಿಕೆ ಮಾಡಲಿದ್ದು, ಪ್ರಾರಂಭಿಕವಾಗಿ 10 ವಾಷಿಂಗ್ ಮಷಿನ್ ಅಳವಡಿಕೆಗೆ ಮಾಡಲಾಗುತ್ತದೆ. ಈ ಯೋಜನೆಗೆ ಶಾಸಕರು, ಹೈಜೂರು ಸರ್ಕಲ್ ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಗುರುತಿಸಿದ್ದಾರೆ ಎನ್ನಲಾಗಿದೆ.
ಶಾಸಕರಿಂದ ಕುಶಲಕರ್ಮಿಗಳಿಗೆ ವಿವಿಧ ಉಪಕರಣಗಳ ವಿತರಣೆ
ಶಾಸಕರ ವೈಯಕ್ತಿಕ ವೆಚ್ಚದಿಂದ 61 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಸುಮಾರು 7 ಲಕ್ಷ ರೂ ವೆಚ್ಚದ ಡಿ.ಡಿ.ಗಳ ವಿತರಣೆ, 50 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಯಿತು.
ಶಾಸಕರ ಅನುದಾನದಡಿ 20 ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಸಣ್ಣ ಕೈಗಾರಿಕಾ ಇಲಾಖೆ ವತಿಯಿಂದ 67 ಫಲಾನುಭವಿಗಳಿಗೆ ಸುಧಾರಿತ ಉಪಕರಣಗಳನ್ನು ( ಮರಗೆಲಸ -28, ಗಾರೆ ಕೆಲಸ-24, ಭಜಂತ್ರಿ-3, ಡೋಬಿ-10, ಕಲ್ಲು ಕೆಲಸ -2), ಸಣ್ಣ ಕೈಗಾರಿಕೆ ಇಲಾಖೆ ವತಿಯಿಂದ 22 ಫಲಾನುಭವಿಗಳು, 22 ಫಲಾನುಭವಿಗಳಿಗೆ ದೇವರಾಜು ಅರಸು ನಿಗಮದ ವತಿಯಿಂದ 22 ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ.












Click it and Unblock the Notifications