ರಾಮನಗರಕ್ಕೂ ವ್ಯಾಪಿಸಿದ ಹಿಜಾಬ್ ಕಿಚ್ಚು; ತರಗತಿ ಬಹಿಷ್ಕಾರ ಮಾಡಿದ 40 ವಿದ್ಯಾರ್ಥಿನಿಯರು
ರಾಮನಗರ, ಫೆಬ್ರವರಿ 16: ಶಾಂತಿಯುತವಾಗಿದ್ದ ರೇಷ್ಮೆನಗರಿ ರಾಮನಗರದಲ್ಲೂ ಇಂದು ಹಿಜಾಬ್ ವಿವಾದ ಭುಗಿಲೆದ್ದಿದೆ. ನ್ಯಾಯಾಲಯದ ಮಧ್ಯಂತರ ಆದೇಶವಿದ್ದರೂ ಸಹ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಇಂದಿನಿಂದ (ಫೆ.16) ಪಿಯು ಹಾಗೂ ಪ್ರಥಮ ದರ್ಜೆ ಕಾಲೇಜು ಆರಂಭಗೊಂಡ ಬೆನ್ನಲ್ಲೇ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ತರಗತಿಗಳಿಗೆ ಹೋಗಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲಹೊತ್ತು ಹೈಡ್ರಾಮ ನಿರ್ಮಾಣವಾಗಿತ್ತು.
ಕಾಲೇಜು ಆರಂಭಗೊಳ್ಳುತ್ತಿದ್ದಂತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಪ್ರಿನ್ಸಿಪಾಲ್ ಮನವೊಲಿಕೆಗೂ ಬಗ್ಗದೆ ಕಾಲೇಜು ಆವರಣದಲ್ಲಿಯೇ ಕುಳಿತಿದ್ದರು. ಇನ್ನು ಕಾಲೇಜಿನ ಹೊರಭಾಗದಲ್ಲಿ ಎಸ್‌ಡಿಪಿಐ ಹಾಗೂ ಮುಸ್ಲಿಂ ಮುಖಂಡರು ಸೇರಿದಂತೆ ಕೆಲ ಪೋಷಕರು ಜಿಲ್ಲಾಡಳಿತದ ನಿಷೇಧಾಜ್ಞೆ ಉಲ್ಲಂಘಿಸಿ ಗುಂಪುಗೂಡಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸರ ವೈಫಲ್ಯಕ್ಕೆ ಸಾಕ್ಷಿಯಾಗಿತ್ತು.

ಅಲ್ಲದೇ ಪೊಲೀಸರ ಜೊತೆಗೆ ತಮ್ಮ ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿ ಇಲ್ಲದಿದ್ದರೆ ನಮ್ಮೊಂದಿಗೆ ಮನೆಗೆ ಕಳಿಸಿ ಎಂದು ಪೋಷಕರು ಮಾತಿನ ಚಕಮಕಿ ನಡೆಸಿದರು. ಇನ್ನು ಗುಂಪುಗೂಡಿದ್ದ ಜನರ ಗುಂಪನ್ನು ಚಿತ್ರೀಕರಿಸಲು ಮಾಧ್ಯಮದವರು ಮುಂದಾದಾಗ ತಕ್ಷಣ ಪೊಲೀಸರು ಎಚ್ಚೆತ್ತು ಗುಂಪನ್ನು ಚದುರಿಸಿದರು.
ಈ ವೇಳೆ ತರಗತಿಗಳನ್ನು ಬಹಿಷ್ಕರಿಸಿದ 40ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಹೊರಭಾಗಕ್ಕೆ ಬಂದು "ವಿ ವಾಂಟ್ ಹಿಜಾಬ್, ಅಲ್ಲಾಹು ಅಕ್ಬರ್' ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಲು ಮುಂದಾದರು.

ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಕೆಲ ಮುಖಂಡರು ಸಾಥ್ ನೀಡಿದ ಪರಿಣಾಮ, ಕೆಲಕಾಲ ಬಿಗುವಿನ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಳಿಗೊಳಿಸಿದರು. ವಿದ್ಯಾರ್ಥಿಗಳೊಂದಿಗೆ ಕಾಲೇಜು ಪ್ರಿನ್ಸಿಪಾಲ್, ಎಸಿ ಮತ್ತು ತಹಶೀಲ್ದಾರ ಸಭೆ ನಡೆಸಲು ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಆದರೆ ಈ ಸಭೆಯಲ್ಲಿ ಕೆಲ ಮುಖಂಡರು ಪಾಲ್ಗೊಂಡಿದ್ದರಿಂದ ವಿದ್ಯಾರ್ಥಿನಿಯರು ಯಾರ ಮಾತು ಕೇಳದೆ ತರಗತಿಗಳನ್ನು ಬಹಿಷ್ಕರಿಸಿ ಹೊರನಡೆದರು. ಇನ್ನು ತಮಗೆ ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ತರಗತಿ ಬಹಿಷ್ಕಾರ ಮಾಡುವುದಾಗಿ ವಿದ್ಯಾರ್ಥಿನಿಯರು ತಿಳಿಸಿದರು.

ಕೇವಲ ಮೂರು ನಾಲ್ಕು ವಿದ್ಯಾರ್ಥಿನಿಯರಿಂದ ಈ ಘಟನೆ ಉಲ್ಬಣಿಸಿದೆ. ಅವರಿಗೆ ನ್ಯಾಯಾಲಯದ ಆದೇಶದ ಬಗ್ಗೆ ತಿಳಿ ಹೇಳಿದ್ದೇವೆ. ಆದರೂ ಅವರು ಒಪ್ಪುತ್ತಿಲ್ಲ. ನಾಳೆ ಕೂಡ ಹಿಜಾಬ್ ಧರಿಸಿ ಕ್ಲಾಸ್ ರೂಂ ಪ್ರವೇಶಕ್ಕೆ ಮುಂದಾದರೆ ನಾವು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ತಿಳಿಸಿದರು.












Click it and Unblock the Notifications