ಇಡಿಯಿಂದ ಎಂಟು ತಾಸಿಗೂ ಹೆಚ್ಚು ಕಾಲ ಡಿಕೆಶಿ ತಾಯಿ ಗೌರಮ್ಮ ವಿಚಾರಣೆ
ಕನಕಪುರ, ಫೆಬ್ರವರಿ 12: ಪ್ರಭಾವಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮನವರನ್ನು ದೆಹಲಿಯ ಜಾರಿ ನಿರ್ದೇಶನಾಲಯದ ಐವರು ಅಧಿಕಾರಿಗಳ ತಂಡ ಸುಮಾರು ಎಂಟು ತಾಸಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.
ಡಿಕೆಶಿ ತಾಯಿ ಗೌರಮ್ಮ ಅವರು ವಾಸವಿದ್ದ ಕೋಡಿಹಳ್ಳಿ ಗ್ರಾಮದ ಸಂಸದ ಡಿ.ಕೆ.ಸುರೇಶ್ ನಿವಾಸಕ್ಕೆ ಮಧ್ಯಾಹ್ನ ಸುಮಾರು 1 ಗಂಟೆಗೆ ಆಗಮಿಸಿದ, ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಐದು ಮಂದಿ ಇದ್ದ ಇಡಿ ಅಧಿಕಾರಿಗಳ ತಂಡ ರಾತ್ರಿ 9 ಗಂಟೆವರೆಗೆ ವಿಚಾರಣೆ ನಡೆಸಿ ಹಲವು ಮಾಹಿತಿ ಕಲೆ ಹಾಕಿ ತೆರಳಿದರು.
8 ತಾಸುಗಳ ವಿಚಾರಣೆಯಲ್ಲಿ ಮೂರರಿಂದ ನಾಲ್ಕು ಬಾರಿ ಗೌರಮ್ಮ ಅವರಿಗೆ ತುಸು ವಿರಾಮ ನೀಡಿ ಮತ್ತೆ ವಿಚಾರಣೆ ನಡೆಸುತ್ತಿದ್ದರು. ಇಡಿ ಅಧಿಕಾರಿಗಳು ವಿಚಾರಣೆ ಮುಗಿಸಿ ತೆರಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, "ನಾವು ಇಡಿ ಅಧಿಕಾರಿಗಳ ವಿಚಾರಣೆಗೆ ಸಹಕರಿಸಲು ಸಿದ್ಧ. ಸದ್ಯಕ್ಕೆ ವಿಚಾರಣೆ ಅಂತ್ಯವಾಗಿದೆ. ಅವರು ಯಾವಾಗ ಬೇಕಾದರೂ ತನಿಖೆ ನಡೆಸಬಹುದು, ಕಾನೂನಿನ ಮುಂದೆ ಎಲ್ಲರೂ ತಲೆಬಾಗಲೇಬೇಕು" ಎಂದರು.

"ಇಂದು ನಮ್ಮ ತಾಯಿಗೆ ಜ್ವರ ಇತ್ತು. ಆದರೂ ತನಿಖೆಗೆ ಸಹಕರಿಸಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ನ್ಯಾಯಾಲಯಕ್ಕೆ ಗೌರವ ನೀಡಬೇಕು ಮತ್ತು ದೂರದಿಂದ ಬಂದ ಅಧಿಕಾರಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಜ್ವರದ ನಡುವೆಯೂ ತನಿಖೆಗೆ ಸಹಕರಿಸಿದ್ದಾರೆ. ಗಲಾಟೆ ಆಗಬಹುದೆಂಬ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಕ್ಷೇತ್ರದ ಜನತೆ ಯಾವುದೇ ಗದ್ದಲಕ್ಕೆ ಆಸ್ಪದ ಇಲ್ಲದಂತೆ ಸಹಕರಿಸಿದ್ದಕ್ಕೆ ಧನ್ಯವಾದ" ಎಂದರು.












Click it and Unblock the Notifications