Bengaluru Mysuru Expressway: ಜನಾಕ್ರೋಶಕ್ಕೆ ಮಣಿದು ಟೋಲ್ ದರ ಹೆಚ್ಚಳ ಕೈಬಿಟ್ಟ ಪ್ರಾಧಿಕಾರ
ರಾಮನಗರ, ಏಪ್ರಿಲ್ 1: ಲೋಕಾರ್ಪಣೆಗೊಂಡ ದಿನದಿಂದಲೂ ಟೋಲ್ ವಿಚಾರವಾಗಿ ವಿವಾದದಲ್ಲಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್ ದರ ಏಪ್ರಿಲ್1ರಿಂದ ಏರಿಕೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿತ್ತು. ಆದರೆ ವಾಹನ ಸವಾರರಿಂದ ತೀವ್ರ ವಿರೋಧದ ಬಳಿಕ ಟೋಲ್ ದರ ಹೆಚ್ಚಳವನ್ನು ಹೆದ್ದಾರಿ ಪ್ರಾಧಿಕಾರ ಕೈಬಿಟ್ಟಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್ ದರ ಹೆಚ್ಚಳ ಖಂಡಿಸಿ ತೀವ್ರ ವಿರೋದ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಒತ್ತಡಕ್ಕೆ ಮಣಿದು ಹೆದ್ದಾರಿ ಪ್ರಾಧಿಕಾರ ಹಳೆಯ ಟೋಲ್ ದರವನ್ನೇ ಮುಂದುವರೆಸಲು ನಿರ್ಧಾರ ಮಾಡಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಮಾರ್ಚ್ 12ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾ. 14 ರಿಂದ ಟೋಲ್ ಸಂಗ್ರಹ ಆರಂಭ ಆಗಿತ್ತು. ಸರ್ವೀಸ್ ರಸ್ತೆ ಹಾಗೂ ಮೂಲಭೂತ ಸೌಕರ್ಯ ನೀಡದೇ ಟೋಲ್ ವಸೂಲಿ ವಿರುದ್ಧ ಸಾಕಷ್ಟು ಹೋರಾಟ ನಡೆದಿದ್ದವು. ಟೋಲ್ ಸಂಗ್ರಹ ಪ್ರಾರಂಭವಾದ ದಿನದಿಂದಲೂ ದುಬಾರಿ ಶುಲ್ಕ ಎಂದು ಎಕ್ಸ್‌ಪ್ರೆಸ್ ವೇ ಟೋಲ್ ಬಳಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು.
ಇದೀಗ ಟೋಲ್ ಆರಂಭವಾದ 17 ದಿನದಲ್ಲೇ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ಶೇಕಡಾ 22ರಷ್ಟು ದರವನ್ನು ಹೆಚ್ಚಳ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಇದರ ವಿರುದ್ಧ ವಾಹನ ಸವಾರರು ಕೆಂಡಕಾರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದರು. ಒಂದು ವೇಳೆ ಟೋಲ್ ದರ ಏರಿಕೆ ತಡೆಯದೇ ಇದ್ದರೆ, ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಂದಿದ್ದ ಹೊಸ ದರಗಳ ವಿವರ
1. ಕಾರು, ವ್ಯಾನ್, ಜೀಪ್: 165 ರೂಪಾಯಿ, ದ್ವಿಮುಖ ಸಂಚಾರ 250 ರೂಪಾಯಿ ಮತ್ತು ಒಂದು ಬಾರಿ 30 ರೂಪಾಯಿ, ಮತ್ತೊಂದು ಬಾರಿ 45 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
2. ಟ್ರಕ್, ಬಸ್, ಟ್ಯಾಕ್ಸಿ: 565 ರೂಪಾಯಿ, ದ್ವಿಮುಖ ಸಂಚಾರಕ್ಕೆ 850 ರೂಪಾಯಿ. ಹಾಗೆಯೇ ಒಂದು ಬಾರಿ 165 ರೂಪಾಯಿ, ಮತ್ತೊಂದು ಬಾರಿ 160 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
3. ಲಘು ವಾಹನಗಳು, ಮಿನಿ ಬಸ್: 270 ರೂಪಾಯಿ, ದ್ವಿಮುಖ ಸಂಚಾರಕ್ಕೆ 405 ರೂಪಾಯಿ ಆಗಿದೆ. ಅಲ್ಲದೇ ಒಂದು ಬಾರಿ 50 ರೂಪಾಯಿ ಎರಡನೇ ಬಾರಿ 75 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
4. ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: 615 ರೂಪಾಯಿ, ದ್ವಿಮುಖ ಸಂಚಾರಕ್ಕೆ 925 ರೂಪಾಯಿ ಆಗಿದೆ. ಮೊದಲ ಬಾರಿ 115 ರೂಪಾಯಿ ಹೆಚ್ಚಳ ಮಾಡಿದ್ದು, ಎರಡನೇ ಬಾರಿ 225 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
5. ಭಾರಿ ವಾಹನಗಳು: 885 ರೂಪಾಯಿ, ದ್ವಿಮುಖ ಸಂಚಾರಕ್ಕೆ 1,330 ರೂಪಾಯಿ ಆಗಿದೆ. ಹಾಗೆಯೇ ಮೊದಲ ಬಾರಿ 165 ರೂಪಾಯಿ ಎರಡನೇ ಬಾರಿ 250 ರೂಪಾಯಿ ಹೆಚ್ಚಳ ಮಾಡಲಾಗಿದೆ.
6. 7 ಅಥವಾ ಎಕ್ಸೆಲ್ ವಾಹನಗಳಿಗೆ 1,080 ರೂಪಾಯಿ, ದ್ವಿಮುಖ ಸಂಚಾರಕ್ಕೆ 1,620 ರೂಪಾಯಿ ಆಗಿದೆ. ಮೊದಲ ಬಾರಿ 200 ರೂಪಾಯಿ ಎರಡನೇ ಬಾರಿ 305 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಸದ್ಯ ಸಾರ್ವಜನಿಕರ ಒತ್ತಡಕ್ಕೆ ಮಣಿದು ಹೆದ್ದಾರಿ ಪ್ರಾಧಿಕಾರ ಹಳೆಯ ಟೋಲ್ ದರವನ್ನೇ ಮುಂದುವರೆಸಲು ನಿರ್ಧಾರ ಮಾಡಿದೆ.












Click it and Unblock the Notifications