ರಾಯಚೂರು: ಕಲುಷಿತ ನೀರು ಸೇವಿಸಿ 30ಕ್ಕೂಹೆಚ್ಚು ಜನ ಅಸ್ವಸ್ಥ, ಬಾಲಕ ಸಾವು
ರಾಯಚೂರು, ಮೇ 26: ಕಲುಷಿತ ನೀರು ಸೇವಿಸಿ ಸುಮಾರು 30ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಸಮೀಪದ ಅರಕೇರಾ ತಾಲೂಕಿನ ರೇಖಲಮರಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಅಸ್ವಸ್ಥ ಗೊಂಡಿರುವ ಜನರನ್ನು ಅರಕೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ದೇವದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ದುರಾದೃಷ್ಟವಶಾತ್ ಗ್ರಾಮ ಹನುಮಂತ ಎಂಬ 3 ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಸುಮಾರು ವರ್ಷಗಳಿಂದ ಗ್ರಾಮದಲ್ಲಿ ನೀರು ಸರಬರಾಜು ಆಗುತ್ತಿದ್ದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದೆ ಇರುವುದರಿಂದ ಕಲುಷಿತಗೊಂಡ ನೀರು ಸೇವಿಸಿ ಗ್ರಾಮಸ್ಥರು ವಾಂತಿ, ಬೇಧಿಗೆ ತುತ್ತಾಗಿದ್ದಾರೆ. ಮತ್ತು ರಸ್ತೆ ಬದಿಯಲ್ಲಿ ಪೈಪ್ ಲೈನ್ ಹೊಡೆದು ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಬೆರೆತು ಘಟನೆ ಸಂಭವಿಸಿದೆ. ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ನಿರುಪಯುಕ್ತವಾಗಿದ್ದು ಪಂಚಾಯಿತಿ ಅಧಿಕಾರಿಗಳು ದುರಸ್ತಿ ಮಾಡದೆ ಹಿನ್ನೆಲೆ ಜನರು ಟ್ಯಾಂಕ್ ನೀರು ಹೆಚ್ಚು ಬಳಸುತ್ತಿದ್ದರು ಎಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅರಕೇರಾ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ತಾಲೂಕು ಆರೋಗ್ಯಾಧಿಕಾರಿ ಡಿ.ಬನದೇಶ್ವರ, ಪಿಡಿಒ ರೇಣುಕಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.












Click it and Unblock the Notifications