ಬಿಹಾರದ 2ನೇ ಹಂತದ ಚುನಾವಣೆ ಮೇಲೆ ಕಣ್ಣು: ಯಾರು ಮುಂದಿನ ಸಿಎಂ?
ಪಾಟ್ನಾ, ನವೆಂಬರ್.03: ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಮುಂದುವರಿಯುತ್ತಾರಾ. ರಾಜ್ಯದ ಯುವ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಸಿಎಂ ಗದ್ದುಗೆಗೆ ಏರುತ್ತಾರಾ ಎನ್ನುವ ಪ್ರಶ್ನೆಗೆ ಎರಡನೇ ಹಂತದ ಚುನಾವಣೆ ಉತ್ತರಿಸಲಿದೆ.
ರಾಜ್ಯದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡನೇ ಹಂತದಲ್ಲಿ 17 ಜಿಲ್ಲೆಗಳ 94 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 2.85 ಕೋಟಿ ಜನ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದು, ಮುಂದಿನ ಸಿಎಂ ಯಾರು ಎನ್ನುವುದರ ಬಗ್ಗೆ ಭವಿಷ್ಯ ಬರೆಯಲಿದ್ದಾರೆ.
ಕಳೆದ ಅಕ್ಟೋಬರ್.28ರಂದು ಮೊದಲ ಹಂತದಲ್ಲಿ 16 ಜಿಲ್ಲೆಗಳ 71 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಶೇ.55.69ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದು, ಈ ಹಿಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣಾ ಮತದಾನದ ದಾಖಲೆಗಳನ್ನು ಬ್ರೇಕ್ ಮಾಡಿದೆ. ಎರಡನೇ ಹಂತದಲ್ಲಿ ನಡೆಯುವ ಚುನಾವಣೆಯು ಬಹು ನಿರ್ಣಾಯಕ ಪಾತ್ರ ವಹಿಸಲಿದ್ದು, ಮುಂದಿನ ಸಿಎಂ ಯಾರು ಎನ್ನುವುದನ್ನು ಸ್ಪಷ್ಟಪಡಿಸಲಿದೆ. ಬಿಹಾರದಲ್ಲಿ ಎರಡನೇ ಹಂತದ ಚುನಾವಣೆ ಎಷ್ಟರ ಮಟ್ಟಿಗೆ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದರ ಕುರಿತು ಒಂದು ವಿಸ್ತೃತ ವರದಿ 'ಒನ್ ಇಂಡಿಯಾ' ಓದುಗರಿಗಾಗಿ.

ಶೇ.2/3ರಷ್ಟು ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ
ಬಿಹಾರದ ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರ ಎರಡರಷ್ಟು ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿಯೇ ಮತದಾನ ಪ್ರಕ್ರಿಯೆ ನಡೆಯಲಿದೆ. ಅಂದರೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವವರು ಯಾರು ಎನ್ನುವುದು ಈ ಹಂತದಲ್ಲಿ ನಡೆಯುವ ಮತದಾನ ಮತ್ತು ಮತದಾರರ ಮೇಲೆಯೇ ತೀರ್ಮಾನವಾಗಲಿದೆ. ಬಿಹಾರದಲ್ಲಿ ಕಳೆದ 1990ರಿಂದ ಈವರೆಗೂ ನಡೆದ ವಿಧಾನಸಭಾ ಚುನಾವಣೆಗಳಲ್ಲಿ 3 ಬಾರಿಯಷ್ಟೇ ಶೇ.60ಕ್ಕಿಂತ ಹೆಚ್ಚು ಮತದಾನ ನಡೆದಿದೆ.
ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆಯ ಶೇ.55.69ರಷ್ಟು ಮತದಾನ ನಡೆದಿತ್ತು. ಈ ಹಿಂದೆ 2015ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಶೇ.56.66ರಷ್ಟು ಮತದಾನ ನಡೆದಿತ್ತು ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.

ಬಿಹಾರ 2ನೇ ಹಂತದ ಚುನಾವಣೆಯಲ್ಲಿನ ಲೆಕ್ಕಾಚಾರ
ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭಗಳಲ್ಲಿ ಸಿಎಂ ನಿತೀಶ್ ಕುಮಾರ್ ಗಿಂತ ರಾಷ್ಟ್ರೀಯ ಜನತಾ ದಳ(RJD) ಮುಖ್ಯಸ್ಥ ತೇಜಸ್ವಿ ಯಾದವ್ ರ್ಯಾಲಿಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಅಂಶವು ಮತದಾನ ಪ್ರಕ್ರಿಯೆಯಲ್ಲಿ ಪರಿಣಾಮ ಬೀರುತ್ತದೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ 94 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷದ ಯಾವ ಅಭ್ಯರ್ಥಿಗಳು ಎಷ್ಟು ಪ್ರಮಾಣದಲ್ಲಿದ್ದಾರೆ ಎನ್ನುವುದರ ಕುರಿತು ಒಂದು ವಿಶೇಷ ಪಟ್ಟಿ ಇಲ್ಲಿದೆ ನೋಡಿ.
ಬಿಹಾರ 2ನೇ ಹಂತದ ಚುನಾವಣೆ ಅಭ್ಯರ್ಥಿಗಳ ಅಂಕಿ-ಸಂಖ್ಯೆ:
- 2ನೇ ಹಂತದ 94 ವಿಧಾನಸಭಾ ಕ್ಷೇತ್ರಗಳಲ್ಲಿ ಆರ್ ಜೆಡಿ 54 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ
- ಬಿಜೆಪಿ 27 ಮತ್ತು ಜೆಡಿಯುನ 24 ಹಾಗೂ ಎನ್ ಡಿಎ ಮೈತ್ರಿಕೂಟದ ವಿಐಪಿಯ 5 ಅಭ್ಯರ್ಥಿಗಳ ವಿರುದ್ಧ ಆರ್ ಜೆಡಿ ಸ್ಪರ್ಧಿಸಿದೆ
- 94 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 46 ಹಾಗೂ ಜೆಡಿಯುನ 43 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ
- ಕಾಂಗ್ರೆಸ್ಸಿನ 24 ಅಭ್ಯರ್ಥಿಗಳು ಎರಡನೇ ಹಂತದ ಚುನಾವಣಾ ಕಣದಲ್ಲಿದ್ದು, ಬಿಜೆಪಿ ವಿರುದ್ಧ 12 ಮತ್ತು ಜೆಡಿಯು ಅಭ್ಯರ್ಥಿಗಳ ವಿರುದ್ಧ 12 ಕಡೆಗಳಲ್ಲಿ ಸ್ಪರ್ಧಿಸಿದೆ

2015ರ ಚುನಾವಣೆಯಲ್ಲಿ ಏನಾಗಿತ್ತು ಫಲಿತಾಂಶ?
ಬಿಹಾರದಲ್ಲಿ 2015ರಲ್ಲಿ ನಡೆದ ವಿಧಾನಸಭಾ ಚುನಾವಣೆಯನ್ನು ಎನ್ ಡಿಎ ಮೈತ್ರಿಕೂಟ ಒಂದು ಕಡೆ ನಿಂತು ಎದುರಿಸಿದರೆ, ಕಾಂಗ್ರೆಸ್-ಜೆಡಿಯು ಮತ್ತು ಆರ್ ಜೆಡಿ ಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟವು ಒಂದಾಗಿ ಚುನಾವಣೆಗೆ ಸ್ಪರ್ಧಿಸಿದ್ದವು. ಅಂದು ಪಕ್ಷಗಳ ಗೆಲುವಿನ ಲೆಕ್ಕಾಚಾರ ಮತ್ತು ಯಾವ ಪಕ್ಷಕ್ಕೆಷ್ಟು ಸ್ಥಾನ ಎನ್ನುವುದರ ವಿವರ ಇಲ್ಲಿದೆ.
- ಈ ಹಿಂದೆ 2015ರ ವಿಧಾನಸಭಾ ಚುನಾವಣೆಯಲ್ಲಿ 94 ಕ್ಷೇತ್ರಗಳ ಪೈಕಿ ಆರ್ ಜೆಡಿ 42 ಕಡೆಗಳಲ್ಲಿ ಸ್ಪರ್ಧಿಸಿತ್ತು. ಅದರಲ್ಲಿ 33 ಕ್ಷೇತ್ರಗಳಲ್ಲಿ ಆರ್ ಜೆಡಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು
- 41 ಕ್ಷೇತ್ರಗಳಲ್ಲಿ ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸಿದ್ದು 30 ಕಡೆಗಳಲ್ಲಿ ಜಯಭೇರಿ ಬಾರಿಸಿದ್ದರು
- ಭಾರತೀಯ ಜನತಾ ಪಕ್ಷವು 63 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 20 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು
- ಕಾಂಗ್ರೆಸ್ ಪಕ್ಷವು ಸ್ಪರ್ಧಿಸಿದ 11 ಕ್ಷೇತ್ರಗಳ ಪೈಕಿ 7 ಕಡೆಗಳಲ್ಲಿ ಗೆಲುವಿನ ನಗೆ ಬೀರಿತ್ತು.
- ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ 21 ಕ್ಷೇತ್ರಗಳ ಪೈಕಿ ಲೋಕಜನಶಕ್ತಿ ಪಕ್ಷವು ಕೇವಲ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
- ಸಿಪಿಐ-ಎಂಎಲ್ ಒಂದು ಸ್ಥಾನವನ್ನು ಗೆದ್ದುಕೊಂಡಿದ್ದರೆ, ಒಂದು ಸ್ಥಾನವನ್ನು ಪಕ್ಷೇತರ ಅಭ್ಯರ್ಥಿಯ ಪಾಲಾಗಿತ್ತು.

ಬಿಹಾರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
- ಲಾಲೂ ಪ್ರಸಾದ್ ಯಾದವ್ ಕುಟುಂಬದ ಇಬ್ಬರು ಕುಡಿಗಳು 2ನೇ ಹಂತದ ಚುನಾವಣಾ ಕಣದಲ್ಲಿದ್ದಾರೆ. ವೈಶಾಲಿಯ ರಾಘೋಪುರ್ ಕ್ಷೇತ್ರದಿಂದ ತೇಜಸ್ವಿ ಯಾದವ್ ಸ್ಪರ್ಧಿಸಿದ್ದಾರೆ. ಸಮಸ್ತಿಪುರ್ ಜಿಲ್ಲೆಯ ಹಸನ್ ಪುರ್ ವಿಧಾನಸಭಾ ಕ್ಷೇತ್ರದಲ್ಲಿ ತೇಜ್ ಪ್ರತಾಪ್ ಯಾದವ್ ಸ್ಪರ್ಧೆಗೆ ಇಳಿದಿದ್ದಾರೆ.
- ರಾಘೋಪುರ್ ಕ್ಷೇತ್ರದ ಹಾಲಿ ಶಾಸಕರಾಗಿರುವ ತೇಜಸ್ವಿ ಯಾದವ್ ವಿರುದ್ಧ ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ಕಣಕ್ಕಿಳಿದಿದ್ದಾರೆ. 2010ರಲ್ಲಿ ಇದೇ ಕ್ಷೇತ್ರದಲ್ಲಿ ತೇಜಸ್ವಿ ಯಾದವ್ ತಾಯಿ ರಾಬ್ರಿ ದೇವಿಯನ್ನು ಸೋಲಿಸಿದ್ದ ಸತೀಶ್ ಕುಮಾರ್ 2015ರಲ್ಲಿ ತೇಜಸ್ವಿ ಯಾದವ್ ವಿರುದ್ಧ ಸೋಲು ಕಂಡಿದ್ದರು.
- ಹಸನ್ ಪುರ್ ಕ್ಷೇತ್ರದಲ್ಲಿ ಜೆಡಿಯು ಮತ್ತು ಆರ್ ಜೆಡಿ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜೆಡಿಯುನ ರಾಜಕುಮಾರ್ ರೈ ವಿರುದ್ಧ ಆರ್ ಜೆಡಿ ಅಭ್ಯರ್ಥಿ ತೇಜ್ ಪ್ರತಾಪ್ ಯಾದವ್ ಸವಾಲೊಡ್ಡಿದ್ದಾರೆ.
- ಹತುವಾ ಕ್ಷೇತ್ರದಲ್ಲಿ ಸಿಎಂ ನಿತೀಶ್ ಕುಮಾರ್ ಸರ್ಕಾರದ ಸಂಪುಟ ಸಚಿವ ರಾಮೇ ಸೇವಕ್ ಸಿಂಗ್ ವಿರುದ್ಧ ಆರ್ ಜೆಡಿಯ ರಾಜೇಶ್ ಕುಶ್ವಹಾ ಸ್ಪರ್ಧಿಸಿದ್ದಾರೆ.
- ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಸಚಿವ ನಂದ್ ಕಿಶೋರ್ ಯಾದವ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರವೀಣ್ ಕುಶ್ವಾಹ ಕಣದಲ್ಲಿದ್ದಾರೆ.

2ನೇ ಹಂತದಲ್ಲಿ 1463 ಅಭ್ಯರ್ಥಿಗಳ ಭವಿಷ್ಯ
ಎರಡನೇ ಹಂತದ ಚುನಾವಣೆಯ ಕಣದಲ್ಲಿ 1463 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ 1316 ಪುರುಷ ಅಭ್ಯರ್ಥಿಗಳಾಗಿದ್ದರೆ, 146 ಮಹಿಳಾ ಅಭ್ಯರ್ಥಿಗಳಾಗಿದ್ದು, ಒಬ್ಬ ತೃತೀಯ ಲಿಂಗಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2ನೇ ಹಂತದಲ್ಲಿ ಒಟ್ಟು 2,85,50,285 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, 1,50,33,034 ಪುರುಷರು ಮತ್ತು 1,35,16,271 ಮಹಿಳಾ ಮತದಾರರು ಹಾಗೂ 980 ತೃತೀಯ ಲಿಂಗದ ಮತದಾರರು ಮತದಾನ ಮಾಡಲಿದ್ದಾರೆ. ಮೂರನೇ ಹಂತದಲ್ಲಿ 15 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್.10ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಹೊರ ಬೀಳಲಿದೆ.












Click it and Unblock the Notifications