ಪ್ರಜಾಪ್ರಭುತ್ವದ ಶಕ್ತಿ, ಬಿಹಾರಿಗಳ ಭಕ್ತಿಗೆ ಚುನಾವಣೆ ಸಾಕ್ಷಿ: ಮೋದಿ
ಪಾಟ್ನಾ, ನವೆಂಬರ್.03: ಬಿಹಾರ ವಿಧಾನಸಭಾ ಚುನಾವಣೆಯು ಕೇವಲ ದೇಶಕ್ಕಷ್ಟೇ ಅಲ್ಲ ಇಡೀ ಜಗತ್ತಿಗೆ ಹೊಸ ಸಂದೇಶ ರವಾನಿಸಲಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಹಕ್ಕು ಚಲಾವಣೆ ಮಾಡಿರುವುದು ದಾಖಲೆಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಬಿಹಾರದ ಅರಾರಿಯಾ ಜಿಲ್ಲೆಯ ಫೋರ್ಬಿಸ್ ಗಂಜ್ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೊರೊನಾವೈರಸ್ ಸೋಂಕು ಹರಡುವಿಕೆ ಅಪಾಯದ ನಡುವೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳೊಂದಿಗೆ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಚುನಾವಣಾ ಆಯೋಗಕ್ಕೆ ನಾನು ಶುಭಾಷಯ ಕೋರುವುದಕ್ಕೆ ಬಯಸುತ್ತೇನೆ ಎಂದರು.
ಬಿಹಾರ ವಿಧಾನಸಭೆಯ 2ನೇ ಹಂತದ ಚುನಾವಣೆಯಲ್ಲಿ ಬೆಳಗ್ಗೆ 10 ಗಂಟೆ ಸಮಯದವರೆಗೂ ನಡೆದ ಮತದಾನದ ಶೇಕಡಾವಾರು ಪ್ರಮಾಣವು ಹೊಸ ದಾಖಲೆ ಸೃಷ್ಟಿಸಿದೆ. ಈ ಹಿಂದಿನ ಚುನಾವಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.

ಪ್ರಜಾಪ್ರಭುತ್ವದ ಮೇಲೆ ಬಿಹಾರಿಗಳ ಭಕ್ತ ಬಗ್ಗೆ ಮಾತು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಪಾಯದ ನಡುವೆಯೂ ಜನರು ಮನೆಗಳಿಂದ ಹೊರಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಅಂದರೆ ಬಿಹಾರದ ಜನರಲ್ಲಿ ಪ್ರಜಾಪ್ರಭುತ್ವದ ಮೇಲಿನ ಭಕ್ತಿ ಎಷ್ಟಿದೆ ಎಂಬುದನ್ನು ಇದು ತೋರಿಸುತ್ತದೆ. ಭಾರತೀಯ ಮನಸ್ಸಿನಲ್ಲಿ ಪ್ರಜಾಪ್ರಭುತ್ವ ಎಷ್ಟೊಂದು ಆಳವಾಗಿ ನೆಲೆಯೂರಿದೆ ಎಂಬುದನ್ನು ಅಳೆಯುವುದಕ್ಕೆ ಈ ಚುನಾವಣೆ ಸಾಕ್ಷಿಯಾಗಲಿದೆ ಎಂದು ಮೋದಿ ಹೇಳಿದರು.

ರಾಜ್ಯದ ಜನರ ಆಕಾಂಕ್ಷೆಗಳು ಈಡೇರುವ ಸಮಯ
ಕಳೆದ ಒಂದು ದಶಕದಲ್ಲಿ ಬಿಹಾರದ ಪ್ರತಿಯೊಂದು ಮನೆ ಮನೆಗೂ ವಿದ್ಯುತ್ ದೀಪ ವ್ಯವಸ್ಥೆ ಮತ್ತು ಅಡುಗೆ ಅನಿಲ ಸೌಕರ್ಯವನ್ನು ಒದಗಿಸಲಾಗಿದೆ. ಮುಂದಿನ 2021 ರಿಂದ 2030ರ ಅವಧಿವರೆಗೂ ರಾಜ್ಯದ ಜನರ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಸಮಯ ಬಂದಿದೆ ಎನ್ನುವ ಮೂಲಕ ಸರ್ಕಾರದ ಸಾಧನೆ ಬಗ್ಗೆ ಉಲ್ಲೇಖಿಸಿದರು.

ದೇಶದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ
ದೇಶದ ಪ್ರಜೆಗಳನ್ನು ಹೆಚ್ಚು ದಿನಗಳ ಕಾಲ ಮೂರ್ಖರನ್ನಾಗಿ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗೆ ಮಾಡಲು ಹೋದ ಕಾಂಗ್ರೆಸ್ ಪರಿಸ್ಥಿತಿ ಇದೀಗ ಏನಾಗಿದೆ ಎಂದು ಒಮ್ಮೆ ನೋಡಿ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕಾಂಗ್ರೆಸ್ಸಿನ 100 ಸಂಸದರು ಕೂಡಾ ಇಲ್ಲ. ಇಂದಿಗೂ ಅವರನ್ನು ಪ್ರಜೆಗಳು ದಂಡಿಸುತ್ತಲೇ ಇದ್ದಾರೆ ಎಂದು ಮೋದಿ ಗುಡುಗಿದರು.

ಬಿಹಾರದ 94 ಕ್ಷೇತ್ರಗಳಿಗೆ ಚುರುಕಿನ ಮತದಾನ
ಎರಡನೇ ಹಂತದಲ್ಲಿ 17 ಜಿಲ್ಲೆಗಳ 94 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 2.85 ಕೋಟಿ ಜನ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣೆಯ ಕಣದಲ್ಲಿ 1463 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ 1316 ಪುರುಷ ಅಭ್ಯರ್ಥಿಗಳಾಗಿದ್ದರೆ, 146 ಮಹಿಳಾ ಅಭ್ಯರ್ಥಿಗಳಾಗಿದ್ದು, ಒಬ್ಬ ತೃತೀಯ ಲಿಂಗಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2ನೇ ಹಂತದಲ್ಲಿ ಒಟ್ಟು 2,85,50,285 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, 1,50,33,034 ಪುರುಷರು ಮತ್ತು 1,35,16,271 ಮಹಿಳಾ ಮತದಾರರು ಹಾಗೂ 980 ತೃತೀಯ ಲಿಂಗದ ಮತದಾರರು ಮತದಾನ ಮಾಡಲಿದ್ದಾರೆ.
ಮೂರನೇ ಹಂತದಲ್ಲಿ 15 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್.10ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಹೊರ ಬೀಳಲಿದೆ.












Click it and Unblock the Notifications