ಕೋವಿಡ್ ನಿರ್ವಹಣೆಯಲ್ಲಿ ಟ್ರಂಪ್‌ಗಿಂತ ಮೋದಿ ಗ್ರೇಟ್: ಜೆಪಿ ನಡ್ಡಾ
ಪಟ್ನಾ, ನವೆಂಬರ್ 5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತಲೂ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವೈರಸ್ ಪಿಡುಗಿನ ಸನ್ನಿವೇಶವನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಶ್ಲಾಘಿಸಿದ್ದಾರೆ.
ಬಿಹಾರದ ದರ್ಬಾಂಗಾದಲ್ಲಿ ಗುರುವಾರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಡೊನಾಲ್ಡ್ ಟ್ರಂಪ್ ಅವರಿಗೆ ಕೋವಿಡ್ 19ಅನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಆದರೆ ಮೋದಿ ಸರ್ಕಾರ ದೇಶವನ್ನು ರಕ್ಷಿಸಿದೆ ಎಂದಿದ್ದಾರೆ.
'ಅಮೆರಿಕ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತಿದೆ. ಕೋವಿಡ್-19 ಸನ್ನಿವೇಶವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಡೊನಾಲ್ಡ್ ಟ್ರಂಪ್ ಅವರಿಗೆ ಸಾಧ್ಯವಾಗಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ ಮೋದಿ ಅವರು ಸಮಯಕ್ಕೆ ತೆಗೆದುಕೊಂಡ ನಿರ್ಧಾರದಿಂದ ದೇಶ ಮತ್ತು ಅದರ 130 ಕೋಟಿ ಜನಸಂಖ್ಯೆಯನ್ನು ಉಳಿಸಿದ್ದಾರೆ' ಎಂದು ನಡ್ಡಾ ಕೊಂಡಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಹಪಾಹಪಿಯಲ್ಲಿ ರಾಹುಲ್ ಗಾಂಧಿ, ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನೇ ವಿರೋಧಿಸುತ್ತಿರುವುದನ್ನು ಎಂದಿಗೂ ಅರ್ಥ ಮಾಡಿಕೊಳ್ಳಲಾರರು ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಸಿಪಿಐ (ಎಂ) ಜತೆ ಕೈಜೋಡಿಸಿವೆ. ಸಿಪಿಎಂನ ಚಿಂತನೆಗಳೇ ವಿದ್ವಂಸಕಾರಿಯಾಗಿದೆ. ಇದು ಅಭ್ಯರ್ಥಿಯೊಬ್ಬರಿಗೆ ಮತ ಚಲಾಯಿಸುವಂತಹ ಚುನಾವಣೆಯಲ್ಲ. ಇದು ಬಿಹಾರದ ಭವಿಷ್ಯಕ್ಕೆ ಸಂಬಂಧಿಸಿದ್ದು ಎಂದು ನಡ್ಡಾ ಹೇಳಿದ್ದಾರೆ.












Click it and Unblock the Notifications