ಬಿಹಾರದ ಎರಡು ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವಿಸಿ 24 ಮಂದಿ ಸಾವು!
ಪಾಟ್ನಾ, ನವೆಂಬರ್ 4: ಬಿಹಾರದ ಎರಡು ಜಿಲ್ಲೆಗಳಲ್ಲಿ ಶಂಕಿತ ನಕಲಿ ಮದ್ಯವನ್ನು ಸೇವಿಸಿ ಈವರೆಗೂ 24 ಮಂದಿ ಪ್ರಾಣ ಬಿಟ್ಟಿದ್ದರು, ಹಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ರಾಜ್ಯದ ಗೋಪಾಲ್ ಗಂಜ್ ಮತ್ತು ಪಶ್ಚಿಮ ಚಂಪಾರಣ್ ಜಿಲ್ಲೆಗಳಲ್ಲಿ ನಿರ್ಬಂಧಿತ ಮದ್ಯವನ್ನು ಸೇವಿಸಿದ ಜನರು ಸಾವಿನ ಮನೆ ಸೇರಿಸುವ ಶಂಕೆ ವ್ಯಕ್ತವಾಗಿದೆ.
ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯ ತೆಲ್ಹುವಾ ಹೂಚ್ ಗ್ರಾಮದಲ್ಲಿ ನವೆಂಬರ್ 4ರಂದು ಶಂಕಿತ ನಕಲಿ ಮದ್ಯ ಸೇವಿಸಿದ 8 ಮಂದಿ ಮೃತಪಟ್ಟಿದ್ದಾರೆ. ಇತ್ತ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಅದೇ ರೀತಿ ಶಂಕಿತ ನಕಲಿ ಮದ್ಯವನ್ನು ಸೇವಿಸಿದ ಆರು ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಈವರೆಗೂ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಎರಡೂ ಜಿಲ್ಲೆಗಳಲ್ಲಿ ಒಂದೇ ರೀತಿ ಸಾವಿನ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತೆಲ್ಹುವಾ ಹೂಚ್ ಗ್ರಾಮದಲ್ಲಿ ಗುರುವಾರ ನಡೆದ ನಕಲಿ ಮದ್ಯ ಸೇವನೆ ದುರಂತ ಇದೇ ಮೊದಲೇನಲ್ಲ. ಕಳೆದ 10 ದಿನಗಳಲ್ಲಿ ಉತ್ತರ ಬಿಹಾರದ ಮೂರು ಕಡೆಗಳಲ್ಲಿ ಇದೇ ರೀತಿಯ ಘಟನೆಗಳು ನಡೆದಿರುವುದು ವರದಿಯಾಗಿದೆ. ಪಶ್ಚಿಮ ಚಂಪಾರಣ್‌ನಲ್ಲಿ ಮೃತರನ್ನು ತೆಲ್ಹುವಾ ಗ್ರಾಮದ 2, 3 ಮತ್ತು 4ನೇ ವಾರ್ಡ್‌ಗಳ ನಿವಾಸಿಗಳು ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಅವರ ಸಾವಿಗೆ ಕಾರಣವನ್ನು ಜಿಲ್ಲಾಡಳಿತ ಇನ್ನೂ ಖಚಿತಪಡಿಸಿಲ್ಲ.

ಎನ್‌ಡಿಎ ಸರ್ಕಾರದ ವಿರುದ್ಧ ಪಿತೂರಿ:
ಬಿಹಾರದ ಗೋಪಾಲ್ ಗಂಜ್ ಜಿಲ್ಲೆಗೆ ತೆರಳಿದ ಸಚಿವ ಸಚಿವ ಜನಕ್ ರಾಮ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. "ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಮನೆಗೆ ನಾನು ಭೇಟಿ ನೀಡಿದ್ದೇನೆ. ಇದು ಎನ್‌ಡಿಎ ಸರ್ಕಾರದ ಹೆಸರು ಕೆಡಿಸುವುದಕ್ಕೆ ಮಾಡುತ್ತಿರುವ ಪಿತೂರಿ," ಎಂದು ಹೇಳಿದರು.
ಗೋಪಾಲಗಂಜ್ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಮಾತನಾಡಿ, "ಕಳೆದ ಎರಡು ದಿನಗಳಲ್ಲಿ ಜಿಲ್ಲೆಯ ಮುಹಮ್ಮದ್‌ಪುರ ಗ್ರಾಮದಲ್ಲಿ ಕೆಲವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಗಳನ್ನು ಎದುರು ನೋಡುತ್ತಿದ್ದು, ಅವರ ಸಾವಿಗೆ ಕಾರಣವನ್ನು ಈಗಲೇ ದೃಢವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಸದ್ಯಕ್ಕೆ ಮೂರು ತಂಡಗಳು ಪ್ರಕರಣದ ತನಿಖೆ ನಡೆಸುತ್ತಿವೆ. ಕೆಲವರ ಮೃತದೇಹಗಳನ್ನು ಅವರ ಕುಟುಂಬದವರು ಅಂತ್ಯಸಂಸ್ಕಾರ ಮಾಡಿದ್ದಾರೆ," ಎಂದು ತಿಳಿಸಿದರು.
ವಿಷಕಾರಿ ಪದಾರ್ಥ ಸೇವನೆಯಿಂದ ಸಾವು:
ಮೇಲ್ನೋಟಕ್ಕೆ ಈ ಸಾವು ಯಾವುದೋ ವಿಷಕಾರಿ ಪದಾರ್ಥ ಸೇವನೆಯಿಂದ ಸಂಭವಿಸಿರುವುದು ಎಂದು ಕಂಡುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವೆಂಬರ್ 2 ಮತ್ತು 3 ರ ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಸ್ಥಳೀಯ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದ ನಕಲಿ ಮದ್ಯವನ್ನು 20ಕ್ಕೂ ಹೆಚ್ಚು ಜನರು ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳು ತೆಲ್ಹುವಾದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಪಶ್ಚಿಮ ಚಂಪ್ರಾನ್ ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ನಾಥ್ ವರ್ಮಾ ತಿಳಿಸಿದ್ದಾರೆ.
ಸಾವಿನ ಬಗ್ಗೆ ಗ್ರಾಮಸ್ಥರು ಹೇಳುವುದೇನು?:
ಕಳೆದ ನವೆಂಬರ್ 3ರ ಬುಧವಾರ ಸಂಜೆ ತೆಲ್ಹುವಾ ಗ್ರಾಮದ ಚಮರ್ತೋಲಿ ಪ್ರದೇಶದಲ್ಲಿ ಎಲ್ಲಾ ಸಂತ್ರಸ್ತರು ಮದ್ಯ ಸೇವಿಸಿದ್ದಾರೆ. "ಮದ್ಯ ಸೇವಿಸಿದ ನಂತರ, ಅವರಲ್ಲಿ ಎಂಟು ಜನರ ಸ್ಥಿತಿ ಹದಗೆಟ್ಟಿತು ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಇಂದು ಮೃತಪಟ್ಟರು," ಎಂದು ಗ್ರಾಮಸ್ಥರು ಹೇಳಿದ್ದಾರೆ. ಇನ್ನೂ ಕೆಲವು ಗ್ರಾಮಸ್ಥರು ಮದ್ಯ ಸೇವಿಸಿ ಅಸ್ವಸ್ಥಗೊಂಡ ಕೆಲವರು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬಿಹಾರದಲ್ಲಿ ನಕಲಿ ಮದ್ಯ ಮತ್ತು ಸಾವಿನ ಸರಣಿ:
ಬಿಹಾರದ ಮುಜಾಫರ್‌ಪುರ ಜಿಲ್ಲೆಯ ರುಪೌಲಿ ಗ್ರಾಮದಲ್ಲಿ ನಡೆದ ಹೂಚ್ ದುರಂತದಲ್ಲಿ ಅಕ್ಟೋಬರ್ 28ರಿಂದ ಎಂಟು ಜನರು ಸಾವನ್ನಪ್ಪಿದ್ದಾರೆ. ನಾಲ್ವರು ಮುಜಾಫರ್‌ಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿಯಿಂದ ಅಕ್ಟೋಬರ್ 31, 2021 ರವರೆಗೆ, ನವಾಡ, ಪಶ್ಚಿಮ ಚಂಪಾರಣ್, ಮುಜಾಫರ್‌ಪುರ, ಸಿವಾನ್ ಮತ್ತು ರೋಹ್ತಾಸ್ ಜಿಲ್ಲೆಗಳಲ್ಲಿ ನಕಲಿ ಮದ್ಯವನ್ನು ಸೇವಿಸಿ ಸುಮಾರು 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅನೇಕರು ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ.












Click it and Unblock the Notifications