ಶಾಸಕನ ಮನೆಯಲ್ಲಿ ಎಕೆ-47, ಸ್ಫೋಟಕ ವಸ್ತು ಪತ್ತೆ
ಮೊಕಮ್, ಆಗಸ್ಟ್ 17: ಬಿಹಾರದ ಶಾಸಕನೊಬ್ಬನ ಮನೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಬಿಹಾರದ ಪಕ್ಷೇತರ ಶಾಸಕ ಅನಂತ್ ಕುಮಾರ್ ಸಿಂಗ್ ಅವರ ಮನೆಯ ಮೇಲೆ ನಿನ್ನೆ ಪೊಲೀಸರು ದಾಳಿ ನಡೆಸಿದ್ದು, ಎಕೆ-47 ಸೇರಿದಂತೆ ಇನ್ನೂ ಹಲವು ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಗ್ಯಾಂಗ್‌ಸ್ಟರ್ ಕೂಡಾ ಆಗಿರುವ ಅನಂತ್ ಕುಮಾರ್ ಸಿಂಗ್, ಶಾಸಕರಾಗಿದ್ದರೂ ಭೂಗತ ಲೋಕದ ಸಂಪರ್ಕ ಬಿಟ್ಟಿರಲಿಲ್ಲ, ಹಾಗಾಗಿ ಅವರ ಮನೆಯ ಮೇಲೆ ಪೊಲೀಸ್ ದಾಳಿ ನಡೆಸಲಾಗಿತ್ತು. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ವಿಶೇಷ ಟಾಸ್ಕ್ ಫೋರ್ಸ್ ಸೇರಿ ನೂರಾರು ಮಂದಿ ಪೊಲೀಸರು ನಿನ್ನೆ ದಾಳಿಯಲ್ಲಿ ಭಾಗಿಯಾಗಿದ್ದರು.

ಬಿಹಾರದ ನಡಾವಾ ಗ್ರಾಮದಲ್ಲಿನ ಅನಂತ್ ಕುಮಾರ್ ಸಿಂಗ್ ಅವರ ನಿವಾಸದ ಮೇಲೆ ಈ ದಾಳಿ ನಡೆದಿದ್ದು, ದಾಳಿಯ ನಂತರ ಮನೆಯನ್ನು ಮ್ಯಾಜಿಸ್ಟ್ರೇಟ್ ಹಾಜರಿಯಲ್ಲಿ ಸೀಜ್ ಮಾಡಿ ಬೀಗ ಜಡಿಯಲಾಗಿದೆ.
ದಾಳಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅನಂತ್ ಕುಮಾರ್ ಸಿಂಗ್, 'ನನ್ನ ಮನೆಯ ಮೇಲೆ ದಾಳಿ ಮಾಡಿಲ್ಲ, ಬದಲಾಗಿ ನನ್ನ ಮನೆಯನ್ನು ಒಡೆಯಲಾಗಿದೆ' ಎಂದು ಹೇಳಿದ್ದಾರೆ.

'ನಾನು ಚುನಾವಣೆಯಲ್ಲಿ ಲಲನ್ ಸಿಂಗ್ ವಿರುದ್ಧ ಚುನಾವಣೆಗೆ ನಿಂತು ಗೆದ್ದೆ ಹಾಗಾಗಿ ನನ್ನ ವಿರುದ್ಧ ದ್ವೇಷಕ್ಕಾಗಿ ಈ ದಾಳಿ ನಡೆದಿದೆ' ಎಂದು ಅವರು ಹೇಳಿದ್ದಾರೆ.












Click it and Unblock the Notifications