ಕೋವಿಡ್; ಗೋವಾ ವಿಧಾನಸಭೆ ಚುನಾವಣೆ ಮುಂದೂಡಿಕೆ ಇಲ್ಲ
ಪಣಜಿ, ಜನವರಿ 02; ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ನಿಗದಿಯಂತೆ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ವಿವಿಧ ರಾಜಕೀಯ ಪಕ್ಷಗಳು ಸಹ ಕೋವಿಡ್ ಮಾರ್ಗಸೂಚಿಗಳ ಜೊತೆ ನಿಗದಿಯಾಗಿರುವ ಅವಧಿಯಲ್ಲೇ ಚುನಾವಣೆ ನಡೆಸಲು ಒಪ್ಪಿಗೆ ನೀಡಿವೆ.
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ನೇತೃತ್ವದ ಆಯೋಗದ ಅಧಿಕಾರಿಗಳ ತಂಡ ಪಂಜಾಬ್, ಗೋವಾ, ಉತ್ತರಾಖಂಡ ರಾಜ್ಯಕ್ಕೆ ಈಗಾಗಲೇ ಭೇಟಿ ನೀಡಿದೆ. ಪಂಜಾಬ್ ಮತ್ತು ಮಣಿಪುರಕ್ಕೆ ಆಯೋಗ ಮುಂದಿನ ವಾರ ಭೇಟಿ ನೀಡುವ ನಿರೀಕ್ಷೆ ಇದೆ.
"ಎಲ್ಲಾ ರಾಜಕೀಯ ಪಕ್ಷಗಳು ಕೋವಿಡ್ ಮಾರ್ಗಸೂಚಿ ಜೊತೆಗೆ ನಿಗದಿತ ಸಮಯದಲ್ಲಿಯೇ ಚುನಾವಣೆ ನಡೆಸುವಂತೆ ಸಲಹೆ ನೀಡಿವೆ" ಎಂದು ಲಕ್ನೋದಲ್ಲಿ ಸುಶೀಲ್ ಚಂದ್ರ ಹೇಳಿದ್ದಾರೆ. ವಿಧಾನಸಭೆ ಚುನಾವಣೆ ದಿನಾಂಕ ಯಾವಾಗ ಘೋಷಣೆಯಾಗಲಿದೆ? ಎಂಬ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ.

ಫೆಬ್ರವರಿ ಅಂತ್ಯ ಅಥವ ಮಾರ್ಚ್ ತಿಂಗಳಿನಲ್ಲಿ ಉತ್ತರ ಪ್ರದೇಶ (403), ಪಂಜಾಬ್ (117), ಉತ್ತರಾಖಂಡ (70), ಮಣಿಪುರ (60) ಮತ್ತು ಗೋವಾ (40) ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆ ದಿನಾಂಕ ಘೋಷಣೆಯಾದ ತಕ್ಷಣವೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ.
ಚುನಾವಣಾ ಆಯೋಗ ಚುನಾವಣೆ ನಡೆಯುವ ದೊಡ್ಡರಾಜ್ಯವಾದ ಉತ್ತರ ಪ್ರದೇಶಕ್ಕೆ ಮೂರು ದಿನ ಭೇಟಿ ನೀಡಿತ್ತು. ಜಿಲ್ಲಾ ಮಟ್ಟದ ಅಧಿಕಾರಿಗಳು, ಪೊಲೀಸ್ ಮುಖ್ಯಸ್ಥರು, ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದೆ.
ಗೋವಾ ವಿಧಾನಸಭೆ ಚುನಾವಣೆ; ಗೋವಾ ರಾಜ್ಯದ 40 ಸದಸ್ಯ ಬಲದ ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 21. ರಾಜ್ಯದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ.
ಬಿಜೆಪಿ, ಕಾಂಗ್ರೆಸ್, ಶಿವಸೇನಾ, ಟಿಎಂಸಿ, ಎನ್‌ಸಿಪಿ, ಎಂಜಿಪಿ, ಜಿಎಫ್‌ಪಿ ಪಕ್ಷಗಳು ಚುನಾವಣೆಗೆ ಈಗಾಗಲೇ ತಯಾರಿಯನ್ನು ಆರಂಭಿಸಿವೆ. ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಜನರಿಗೆ ಹಲವಾರು ಭರವಸೆಗಳನ್ನು ನೀಡುತ್ತಿವೆ.
2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 13 ಸ್ಥಾನಗಳಲ್ಲಿ ಜಯಗಳಿಸಿತ್ತು. ಎಂಜಿಪಿ ಮತ್ತು ಜಿಎಫ್‌ಪಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಧಿಕಾರ ಪಡೆದಿತ್ತು. ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗಿದ್ದರು.
ಮನೋಹರ್ ಪರಿಕ್ಕರ್ ನಿಧನದ ಬಳಿಕ ಪ್ರಮೋದ್ ಸಾವಂತ್ ರಾಜ್ಯದ ಮುಖ್ಯಂತ್ರಿಯಾಗಿದ್ದಾರೆ. ಈ ಬಾರಿಯ ಚುನಾವಣೆ ಬಗ್ಗೆ ಎಬಿಪಿ-ಸಿ-ವೋಟರ್ ನಡೆಸಿರುವ ಸಮೀಕ್ಷೆಗಳು ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ.
ಆಮ್ ಆದ್ಮಿ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ನಿರೀಕ್ಷೆ ಇದೆ. ಕಾಂಗ್ರೆಸ್‌ನಿಂದ ಪ್ರತಿಪಕ್ಷ ಸ್ಥಾನವನ್ನು ಎಎಪಿ ಕಸಿದುಕೊಳ್ಳಲಿದೆ ಎಂದು ಸಮೀಕ್ಷೆ ವರದಿಗಳು ಹೇಳಿವೆ.
ಕೋವಿಡ್ ಮಾರ್ಗಸೂಚಿ; ಕೋವಿಡ್ ಮಾರ್ಗಸೂಚಿಗಳ ಅನ್ವಯವೇ ಚುನಾವಣೆ ನಡೆಯಲಿದೆ. 80 ವರ್ಷ ಮೇಲ್ಪಟ್ಟ, ಕೋವಿಡ್ ಸೋಂಕಿತರು ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಚುನಾವಣಾ ಬೂತ್ ಸಿಬ್ಬಂದಿಗಳಿಗೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಚುನಾವಣೆ ಪ್ರಕ್ರಿಯೆ ಮುಂದೂಡಬಹುದೇ ಎಂದು ಅವಲೋಕಿಸಿ, ಪ್ರಧಾನಿ ನರೇಂದ್ರ ಮೋದಿ ಸಮಾವೇಶಗಳನ್ನು ಮುಂದೂಡಬಹುದೇ? ಎಂದು ಪಶ್ನಿಸಿತ್ತು.












Click it and Unblock the Notifications