ಗೋವಾದಲ್ಲಿ ವಿಜಯಲಕ್ಷ್ಮಿ ಚಂಚಲೆ: ಕಾಂಗ್ರೆಸ್ ಅಭ್ಯರ್ಥಿಗಳನ್ನು ರೆಸಾರ್ಟಲ್ಲಿ ಕೂಡಿಟ್ಟುಕೊಂಡ ಡಿಕೆಶಿ
ಪಣಜಿ, ಮಾರ್ಚ್ 10: ಪ್ರತಿ ಚುನಾವಣೆಯಲ್ಲೂ ಅತಂತ್ರ ಫಲಿತಾಂಶ ನೀಡುವ ರಾಜ್ಯಗಳ ಪೈಕಿ ಗೋವಾ ಕೂಡಾ ಒಂದು. 2022ರ ಅಸೆಂಬ್ಲಿ ಚುನಾವಣೆಯ ಇದುವರೆಗಿನ ಟ್ರೆಂಡ್ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲವನ್ನು ಕಾಯ್ದುಕೊಂಡಿದೆ.
ಅಂತಿಮ ಕ್ಷಣದಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎನ್ನುವ ಕುತೂಹಲಕ್ಕೆ ಗೋವಾ ಫಲಿತಾಂಶ ಕಾರಣವಾಗಿದೆ. ಏನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಅನ್ಯ ಪಕ್ಷಗಳ ಬೆಂಬಲವನ್ನು ಪಡೆಯದೇ ಬೇರೆ ದಾರಿಯಿಲ್ಲ ಪರಿಸ್ಥಿತಿ ಸದ್ಯ ಅಲ್ಲಿ ನಿರ್ಮಾಣವಾಗಿದೆ.
ಫಲಿತಾಂಶಕ್ಕೆ ಎರಡು ದಿನಕ್ಕೆ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ. ಗೋವಾ ಚುನಾವಣಾ ಉಸ್ತುವಾರಿ ದಿನೇಶ್ ಗುಂಡೂರಾವ್ ಕೂಡಾ ಪಣಜಿಯಲ್ಲೇ ಇದ್ದಾರೆ.
ಗುರುವಾರ (ಮಾರ್ಚ್ 10) ಮಧ್ಯಾಹ್ನ ಒಂದು ಗಂಟೆಗೆ ಪಣಜಿಯ ಖಾಸಗಿ ಹೊಟೇಲ್ ನಲ್ಲಿ ಕಾಂಗ್ರೆಸ್ ತಮ್ಮ ಶಾಸಕರ ವಿಶೇಷ ಸಭೆಯನ್ನು ಕರೆದಿದೆ. ಕಳೆದ ಬಾರಿ ಮಾಡಿದ್ದ ಎಡವಟ್ಟು ಪುನರಾವರ್ತನೆಗೊಳ್ಳದಂತೆ ಕಾಂಗ್ರೆಸ್ ಎಚ್ಚರ ವಹಿಸಿದೆ. ರೆಸಾರ್ಟ್ ರಾಜಕಾರಣ ಸದ್ಯ ಗೋವಾದಲ್ಲಿ ಜೋರಾಗಿ ನಡೆಯುತ್ತಿದೆ.

ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಬಿಜೆಪಿ ಮುನ್ನಡೆ
ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದರೆ, ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಮುನ್ನಡೆಯನ್ನು ಸಾಧಿಸಿದೆ. ಇನ್ನು, ಗೋವಾದಲ್ಲಿ ಮಾತ್ರ ಅತಂತ್ರ ಪರಿಸ್ಥಿತಿಯಿದೆ. ಗೋವಾದ ನಲವತ್ತು ಸ್ಥಾನಗಳ ಪೈಕಿ ಸದ್ಯದ ಟ್ರೆಂಡಿಂಗ್ ಪ್ರಕಾರ ಬಿಜೆಪಿ 18, ಕಾಂಗ್ರೆಸ್ 13, ಟಿಎಂಸಿ 5 ಮತ್ತು ಇತರರು 4 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಅಧಿಕಾರಕ್ಕೇರಲು 21ಸೀಟು ಬೇಕಾಗಿದೆ. ಹಾಗಾಗಿ, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಅನ್ಯ ಪಕ್ಷಗಳೇ ದಿಕ್ಕು.

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯ
"ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಚುನಾವಣೆಗೆ ಕೆಲವು ತಿಂಗಳಿಗೆ ಮುನ್ನ ಭರ್ಜರಿ ಪ್ರಚಾರವನ್ನು ನಡೆಸಿತ್ತು. ಆ ಎರಡು ಪಕ್ಷಗಳಿಗೆ ಬೀಳುವ ಮತಗಳು ಕಾಂಗ್ರೆಸ್ಸಿಗೆ ಬೀಳುವಂತಹ ಮತಗಳಾಗಿದ್ದವು. ಬೇರೆ ಕಡೆಯಿಂದ ಬಂದು ನಮ್ಮ ಚಿಹ್ನೆಯಿಂದ ನಿಂತು ಚುನಾವಣೆ ಗೆದ್ದಿದ್ದಾರೆ. ನಮ್ಮ ಪಕ್ಷದವರು ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಯಿತು"ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ.

ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ ಮತ್ತು ದಿನೇಶ್ ಗುಂಡೂರಾವ್
ಗೆದ್ದ ಮತ್ತು ಮುನ್ನಡೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳು ಸದ್ಯ ರೆಸಾರ್ಟ್/ಹೊಟೇಲ್ ನಲ್ಲಿದ್ದಾರೆ. ಹೊಟೇಲಿಗೆ ಭಾರೀ ಭದ್ರತೆಯನ್ನು ನೀಡಲಾಗಿದೆ. ಪಿ.ಚಿದಂಬರಂ, ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ ಮತ್ತು ದಿನೇಶ್ ಗುಂಡೂರಾವ್ ಹೊಟೇಲ್ ನಲ್ಲಿದ್ದು, ಮಧ್ಯಾಹ್ನ ಕಾಂಗ್ರೆಸ್ ಸಭೆ ನಡೆಯಲಿದೆ. ಪಕ್ಷದ ಮುಂದಿನ ರೂಪುರೇಷೆಯ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಲಾಗಿದೆ. ಅಷ್ಟೊತ್ತಿಗೆ ಗೋವಾದ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.

ದೇವೇಂದ್ರ ಫಡ್ನವೀಸ್ ಬ್ಯಾಕ್ ಟು ಬ್ಯಾಕ್ ಸಭೆ
2017ರ ಚುನಾವಣೆಯಲ್ಲಿ ಬಿಜೆಪಿ 13, ಕಾಂಗ್ರೆಸ್ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ವಿಫಲವಾಗಿ ಪ್ರತಿಪಕ್ಷದಲ್ಲಿ ಕುಳಿತಿತ್ತು. ವಿವಿಧ ಪಕ್ಷ, ಪಕ್ಷೇತರರ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಮುಂದುವರಿದರೆ, ಇತರರ ಬೆಂಬಲ ಪಡೆಯುವುದಾಗಿ ಬಿಜೆಪಿ ಮುಖಂಡರು ಹೇಳಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಗೋವಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಬ್ಯಾಕ್ ಟು ಬ್ಯಾಕ್ ಸಭೆಯನ್ನು ನಡೆಸುತ್ತಿದ್ದಾರೆ.












Click it and Unblock the Notifications