KIADB ಸಂಪೂರ್ಣ ಡಿಜಿಟಲ್: ಭೂಸ್ವಾಧೀನ, ನಿವೇಶನ ಹಂಚಿಕೆ ಎಲ್ಲವು ಇನ್ನೂ ಆನ್‌ಲೈನ್
ಬೆಂಗಳೂರು: ಕರ್ನಾಟಕ ಸರ್ಕಾರ ಇತ್ತೀಚೆಗೆ ಬೆಂಗಳೂರು ವ್ಯಾಪ್ತಿಯಗೆ ಜಾರಿಗೆ ತಂದು ಬಳಿಕ ರಾಜ್ಯಾದ್ಯಂತ ಆಸ್ತಿ ದಾಖಲೆಗಳ ಡಿಜಿಟಲೀಕರಣಗೊಳಿಸಿ ಇ-ಖಾತಾ, ಬಿ-ಖಾತಾ ವಿತರಣೆ ಘೋಷಿಸಿತು. ಇದೀಗ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಯ (ಕೆಐಎಡಿಬಿ) ಮೂಲಕ ನಡೆಯುವ ಭೂಸ್ವಾಧೀನ ಮತ್ತು ನಿವೇಶನ ಮಂಜೂರಾತಿಯವರೆಗಿನ ಪ್ರತಿಯೊಂದು ಪ್ರಕ್ರಿಯೆಗೆ ಡಿಜಿಟಲ್ ರೂಪ ನೀಡಲು ಮುಂದಾಗಿದೆ.
ಕೆಐಎಡಿಬಿ ಎಲ್ಲ ಪ್ರಕ್ರಿಯೆಗಳು ಡಿಜಿಟಲೀಕರಣ ಮಾಡುವುದರಿಂದ ರೈತರು ಮತ್ತು ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ. ಈ ಸಂಬಂಧದ ಕೆಲಸಗಳನ್ನು ಮುಂದಿನ ನೂರು ದಿನಗಳಲ್ಲಿ ಮುಗಿಸಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅವರು ಬುಧವಾರ ಖನಿಜ ಭವನದಲ್ಲಿ ಕೈಗಾರಿಕೆ ಇಲಾಖೆಯ ಎರಡನೇ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮುಂದಿನ ನೂರು ದಿನಗಳಲ್ಲಿ ಮಾಡಬೇಕಾದ ಕೆಲಸಗಳೇನೇನು ಎಂಬುದನ್ನು ಅಧಿಕಾರಿಗಳಿಗೆ ತಿಳಿಸಿದರು.
ನಿವೇಶನಗಳ ಪ್ರತಿ ವಿವರ ಡಿಜಿಟಲ್
ಸರ್ಕಾರ ಇ-ಗವರ್ನೆನ್ಸ್ ಇಲಾಖೆಯು ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ. ಇದರ ಅಡಿಯಲ್ಲೇ ಈಗ ರಾಜ್ಯದ ಹಳೆಯ ಮತ್ತು ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ನಿವೇಶನಗಳ ಪ್ರತಿಯೊಂದು ವಿವರವನ್ನೂ ಡಿಜಿಟಲೀಕರಣ ಮಾಡಲಾಗುವುದು. ಇದರಲ್ಲಿ ಪ್ರತೀ ನಿವೇಶನಕ್ಕೆ ಸಂಬಂಧಿಸಿದಂತೆಯೂ ಒಟ್ಟು 77 ಕಾಲಂಗಳಲ್ಲಿ ಮಾಹಿತಿ ಇರಲಿದೆ ಎಂದು ತಿಳಿಸಿದರು.
ಕೈಗಾರಿಕಾ ನಿವೇಶನದ ಮಂಜೂರಾತಿ, ಅದರ ಸ್ಥಿತಿಗತಿ, ಅಲ್ಲಿರುವ ಕೈಗಾರಿಕೆ, ಮಾಡಿರುವ ಹೂಡಿಕೆ, ಆಗಿರುವ ಉದ್ಯೋಗಸೃಷ್ಟಿ, ಸಂತ್ರಸ್ತ ರೈತರಿಗೆ ಕೊಟ್ಟಿರುವ ಪರಿಹಾರ, ಕೋರ್ಟ್ ಕೇಸಿನ ವಿವರಗಳು, ಹೂಡಿಕೆದಾರರಿಗೆ ಕೊಟ್ಟಿರುವ ಕಾಲಾವಕಾಶ ಮುಂತಾದ ವಿವರಗಳು ಡಿಜಿಟಲೀಕರಣದಿಂದ ಕ್ಷಣಾರ್ಧದಲ್ಲಿ ಸಿಗಲಿವೆ. ಬಹಳ ಹಿಂದಿನ ದಾಖಲೆಗಳನ್ನು ಕಾಪಾಡುವ ಕಷ್ಟವೂ ಇದರಿಂದ ತಪ್ಪಲಿದ್ದು, ಪ್ರತಿಯೊಂದು ಮಾಹಿತಿಯೂ ಶಾಶ್ವತವಾಗಿ ಉಳಿಯಲಿದೆ ಎಂದು ಅವರು ವಿವರಿಸಿದರು.
ಹೆಚ್ಚಲಿದೆ ಪಾರದರ್ಶಕ ಸೇವೆ
ಹಿಂದೆ ಎಷ್ಟೋ ಪ್ರಕರಣಗಳಲ್ಲಿ ದಾಖಲೆಗಳು ಸರಿಯಾಗಿಲ್ಲದೆ ಒಂದೊಂದೇ ಜಮೀನಿಗೆ ಎರಡೆರಡು ಬಾರಿ ಪರಿಹಾರ ಕೊಟ್ಟಿರುವ ಪ್ರಕರಣಗಳು ಕೂಡ ಸಂಭವಿಸಿವೆ. ಹೊಸ ವ್ಯವಸ್ಥೆಯಿಂದ ಸಂಪೂರ್ಣ ಪಾರದರ್ಶಕತೆ ಬರಲಿದೆ. ಹೂಡಿಕೆದಾರರು ತಾವು ಇರುವಲ್ಲಿಂದಲೇ ತಮಗೆ ಬೇಕಾದ ಮಾಹಿತಿ ಪಡೆದುಕೊಳ್ಳಬಹುದು. ಇಲ್ಲಿ ಮಧ್ಯವರ್ತಿಗಳ ಕಾಟ ಇರುವುದಿಲ್ಲ ಎಂದರು.
ರಾಜ್ಯದಲ್ಲಿ ಈಗ 224 ಕೈಗಾರಿಕಾ ಪ್ರದೇಶಗಳಿವೆ. ಇಲ್ಲಿರುವ ಸಾವಿರಾರು ನಿವೇಶನಗಳ ಸ್ಥಿತಿಗತಿ ಎಲ್ಲವೂ ಸದ್ಯದಲ್ಲೇ ಸ್ಕ್ಯಾನ್ ಆಗಿ, ಸುರಕ್ಷಿತವಾಗಲಿದೆ. ಕೈಗಾರಿಕಾ ಇಲಾಖೆಯಲ್ಲಿ ಜನಸ್ನೇಹಿ ಸುಧಾರಣೆಗಳನ್ನು ತರಬೇಕು ಎನ್ನುವ ಉದ್ದೇಶದಿಂದ ಡಿಜಿಟಲೀಕರಣ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಹಳೇ ಕೈಗಾರಿಕಾ ಪ್ರದೇಶಗಳಲ್ಲಿನ ನಿವೇಶನಗಳ ಹಂಚಿಕೆ ಮಾಹಿತಿಯನ್ನು ಸ್ಕ್ಯಾನ್ ಮಾಡುವ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಮಾಡಬೇಕು. ಬಳಿಕ ಆ ದತ್ತಾಂಶವನ್ನು ಇ-ಆಡಳಿತ ಇಲಾಖೆ ಜತೆ ಹಂಚಿಕೊಂಡು ಕೆಐಎಡಿಬಿಗೆ ಬೇಕಾಗುವ ಹಾಗೆ ಸಾಪ್ಟ್ ವೇರ್ ಅಭಿವೃದ್ಧಿಪಡಿಸಲಾಗುವುದು. ಬಳಿಕ ಅದನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಇ- ಸ್ವತ್ತು ತಂತ್ರಾಂಶದ ಜತೆ ಜೋಡಣೆ ಮಾಡಲಾಗುತ್ತದೆ. ಆ ಮೂಲಕ ಇ- ಖಾತಾ ಕೊಡುವುದು ಸೇರಿದಂತೆ ಇತರ ಪ್ರಕ್ರಿಯೆಗಳಿಗೂ ಅನುಕೂಲ ಆಗಲಿದೆ ಎಂದು ಹೇಳಿದರು.













Click it and Unblock the Notifications