ಕಟ್ಟೆಚ್ಚರ: 12 ಅಣ್ವಸ್ತ್ರ ಸಿಡಿತಲೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟ ಭಾರತ!
ಬಾಹ್ಯಾಕಾಶ, ರಕ್ಷಣಾ ಮತ್ತು ಜಾಗತಿಕ ರಾಜಕೀಯ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ವಿಶೇಷ ಬರಹ ಇಲ್ಲಿದೆ.
ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಭಾರತ ತನ್ನ ಕೆಲವು ಪರಮಾಣು ಶಸ್ತ್ರಾಸ್ತ್ರಗಳನ್ನು 'ನಿಯೋಜಿತ' ಸ್ಥಿತಿಯಲ್ಲಿ ಇರಿಸಿದೆ. ಜಾಗತಿಕ ಆಯುಧಗಳು, ಯುದ್ಧಗಳು, ಮತ್ತು ಜಗತ್ತಿನಾದ್ಯಂತ ಆಯುಧ ನಿಯಂತ್ರಣದ ಕುರಿತು ಗಮನ ಹರಿಸುವ ಸಿಪ್ರಿ ಸಂಸ್ಥೆಯಿಂದ ಈ ಸುದ್ದಿ ಬಂದಿದೆ. ಸೋಮವಾರ ಬಿಡುಗಡೆಗೊಂಡ ತನ್ನ 'ಇಯರ್ ಬುಕ್'ನಲ್ಲಿ, ಸಿಪ್ರಿ ಭಾರತ 2025ರಲ್ಲಿ ತನ್ನ 12 ಅಣ್ವಸ್ತ್ರ ಸಿಡಿತಲೆಗಳನ್ನು ನಿಯೋಜಿಸಿದ್ದರೆ, ಚೀನಾ ತನ್ನ ಸಿಡಿತಲೆಗಳ ನಿಯೋಜನೆಯನ್ನು 24ರಿಂದ 34ಕ್ಕೆ ವೃದ್ಧಿಸಿದೆ ಎಂದಿದೆ.
ಇಲ್ಲಿ, ಅಣ್ವಸ್ತ್ರ ಸಿಡಿತಲೆಗಳ 'ನಿಯೋಜನೆ' ಎಂದರೆ ಏನರ್ಥ? ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಅಣ್ವಸ್ತ್ರ ಸಿಡಿತಲೆ ಎಂದರೆ ಅದು ಪರಮಾಣು ಶಸ್ತ್ರಾಸ್ತ್ರದ ಸ್ಫೋಟಕ ಭಾಗ ಎಂದುಕೊಳ್ಳಿ. ದೇಶಗಳು ತಮ್ಮ ಸಿಡಿತಲೆಗಳನ್ನು ಎರಡು ರೀತಿಯಲ್ಲಿ ಇಟ್ಟುಕೊಳ್ಳುತ್ತವೆ. ಮೊದಲನೆಯದು, ಸಂಗ್ರಹದಲ್ಲಿ. ಹೇಗೆ ಖಡ್ಗವೊಂದನ್ನು ಬೀಗ ಹಾಕಿಟ್ಟ ಕಪಾಟಿನಲ್ಲಿ ಇಡಲಾಗುತ್ತದೋ, ಇವನ್ನೂ ಹಾಗೇ ಇಡಲಾಗುತ್ತದೆ. ಇಲ್ಲಿ ಆಯುಧ ಸುರಕ್ಷಿತವಾಗಿರುತ್ತದೆ. ಆದರೆ, ಅದನ್ನು ಹೊರತೆಗೆದು, ಸಿದ್ಧಪಡಿಸಲು ಒಂದಷ್ಟು ಸಮಯ ಹಿಡಿಯುತ್ತದೆ. ಎರಡನೆಯದು, ನಿಯೋಜಿತ ಸ್ಥಿತಿ. ಅಂದರೆ, ಖಡ್ಗವನ್ನು ಕೈಯ ಸನಿಹದಲ್ಲಿ ಇಟ್ಟುಕೊಂಡು, ಅವಶ್ಯಕತೆ ಬಿದ್ದಾಗ ಸನ್ನದ್ಧವಾಗಿಡುವುದಾಗಿದೆ. ನಿಯೋಜಿತ ಸಿಡಿತಲೆಗಳನ್ನು ಈಗಾಗಲೇ ಕ್ಷಿಪಣಿಗಳು, ಯುದ್ಧ ವಿಮಾನಗಳು, ಅಥವಾ ಸಬ್‌ಮರೀನ್‌ಗಳಿಗೆ ಅಳವಡಿಸಲಾಗಿದ್ದು, ಆದೇಶ ನೀಡಿದಾಗ, ಅಥವಾ ಅವಶ್ಯಕತೆ ಬಿದ್ದಾಗ ತಕ್ಷಣವೇ ಬಳಸಬಹುದಾಗಿದೆ.

ಆದರೆ, ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಬೇಕು. 'ನಿಯೋಜನೆ' ಎಂದರೆ, ಭಾರತದ ಆಯುಧಗಳೂ ರಷ್ಯಾ ಅಥವಾ ಅಮೆರಿಕದ ಆಯುಧಗಳಂತೆ 'ಹೇರ್ - ಟ್ರಿಗರ್' ಅಲರ್ಟ್, ಅಂದರೆ, ಆದೇಶ ನೀಡಿದ ನಿಮಿಷಗಳೊಳಗೆ ಉಡಾವಣೆಗೊಳಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಭಾರತದ ಬದಲಾವಣೆ ಸಾಧಾರಣ ರೀತಿಯದಾಗಿದ್ದು, ತನ್ನ ಪರಮಾಣು ಸಬ್‌ಮರೀನ್‌ಗಳಂತಹ ವ್ಯವಸ್ಥೆಗಳಲ್ಲಿ ಸಣ್ಣ ಸಂಖ್ಯೆಯಲ್ಲಿ ಅಳವಡಿಸಿರುವ ಸಿಡಿತಲೆಗಳಾಗಿವೆ. ಭಾರತದ ಅಣ್ವಸ್ತ್ರ ಸಿಡಿತಲೆಗಳ ಹೆಚ್ಚಿನ ಪ್ರಮಾಣ ಇನ್ನೂ ಹಿಂದಿನಂತೆಯೇ ಸುರಕ್ಷಿತವಾಗಿ ಸಂಗ್ರಹಿಸಿಡಲ್ಪಟ್ಟಿವೆ. ಆದ್ದರಿಂದ, ನಾಟಕೀಯ ಹೆಚ್ಚಳವಲ್ಲದ ಈ ಜಾಗರೂಕ ಹೆಜ್ಜೆ ಭಾರತದ ಒಟ್ಟಾರೆ ಕಾರ್ಯವಿಧಾನದಲ್ಲಿ ಬದಲಾವಣೆ ತಂದಿದೆ.
ಇಲ್ಲಿಯ ತನಕ, ಭಾರತ ತನ್ನ ಎಲ್ಲ ಅಣ್ವಸ್ತ್ರ ಸಿಡಿತಲೆಗಳನ್ನು ಕ್ಷಿಪಣಿಗಳು ಮತ್ತು ಯುದ್ಧ ವಿಮಾನಗಳಿಂದ ಪ್ರತ್ಯೇಕವಾಗಿದ್ದು, ಸುರಕ್ಷಿತ ಸಂಗ್ರಹಣಾಗಾರದಲ್ಲಿದ್ದವು. ಭಾರತ ಬಹಳ ಹಿಂದಿನಿಂದಲೂ ಇದೇ ವಿಧಾನವನ್ನು ಅನುಸರಿಸುತ್ತಾ ಬಂದಿತ್ತು. ಸಿಪ್ರಿಯ ಇತ್ತೀಚಿನ ವರದಿ ಭಾರತ ತನ್ನ ಅಣ್ವಸ್ತ್ರ ಸಿಡಿತಲೆಗಳ ಪೈಕಿ 12ನ್ನು ಕಾರ್ಯಾಚರಣಾ ಸನ್ನದ್ಧವಾಗಿ ಅಳವಡಿಸಿದೆ ಎಂದಿದೆ.
ಆದ್ದರಿಂದ, ಅಗತ್ಯ ಎದುರಾದಾಗ ಭಾರತ ಈ ಆಯುಧಗಳನ್ನು ಬಳಸಬಹುದೇ? ತಜ್ಞರು ಹೇಳುವಂತೆ ಭಾರತ 'ನ್ಯೂಕ್ಲಿಯರ್ ಟ್ರಯಾಡ್' ಸಾಮರ್ಥ್ಯ ಹೊಂದಿದೆ. ಅಂದರೆ, ಭಾರತ ಭೂಮಿ, ಗಾಳಿ ಮತ್ತು ಸಮುದ್ರದಿಂದಲೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಬಲ್ಲದು. ಸಮುದ್ರದಿಂದ ಉಡಾವಣೆಗೊಳಿಸಲು ಭಾರತದ ಬಳಿ ಅರಿಹಂತ್ ವರ್ಗದ ಅಣ್ವಸ್ತ್ರ ಸಬ್‌ಮರೀನ್‌ಗಳಿವೆ. ಇನ್ನು ಗಾಳಿಯಿಂದ ಪ್ರಯೋಗಿಸುವ ವಿಚಾರಕ್ಕೆ ಬಂದರೆ, ಮಿರೇಜ್ 2000 ಮತ್ತು ಜಗ್ವಾರ್ ಯುದ್ಧ ವಿಮಾನಗಳು ಈ ಆಯುಧಗಳನ್ನು ಒಯ್ಯಬಲ್ಲವಾಗಿದ್ದು, ರಫೇಲ್ ಮತ್ತು ಸು-30ಎಂಕೆಐಗಳಿಗೂ ಇವುಗಳನ್ನು ಅಳವಡಿಸಲು ಸಾಧ್ಯವಿದೆ. ಇನ್ನು ಭೂ ದಾಳಿಗೆ ಬಂದರೆ, ಭಾರತದ ಬಳಿ ಅಗ್ನಿ, ಪೃಥ್ವಿ, ನಿರ್ಭಯ್, ಮತ್ತು ಬ್ರಹ್ಮೋಸ್ ರೀತಿಯ ಕ್ಷಿಪಣಿ ಸರಣಿಗಳಿವೆ. ಈ ಟ್ರಯಾಡ್ ಸಾಮರ್ಥ್ಯ ಭಾರತಕ್ಕೆ ಸಾಕಷ್ಟು ಆಯ್ಕೆಗಳನ್ನು ಒದಗಿಸಿ, ಭಾರತದ ರಕ್ಷಣೆಯನ್ನು ಇನ್ನಷ್ಟು ವೃದ್ಧಿಸುತ್ತದೆ.
ಭಾರತದ ಸಿದ್ಧತೆಯಲ್ಲಿನ ಬದಲಾವಣೆಯ ಸಮಯವೂ ಬಹಳ ಮುಖ್ಯ. ಮೇ 2025ರ ಬೆಳವಣಿಗೆಗಳು ನೆನಪಿವೆಯೇ? ಸ್ವತಃ ಪರಮಾಣು ಸಾಮರ್ಥ್ಯ ಹೊಂದಿರುವ ನೆರೆ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನಗಳು ನಾಲ್ಕು ದಿನಗಳ ಅವಧಿಯ ಸಣ್ಣದಾದ, ಆದರೆ ತೀಕ್ಷ್ಣವಾದ ಚಕಮಕಿಗೆ ಇಳಿದವು. ಆ ನಾಲ್ಕು ದಿನಗಳ ಅವಧಿಯಲ್ಲಿ, ಪಾಕಿಸ್ತಾನ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಎಚ್ಚರಿಕೆಯ ಗಂಟೆಯ ರೀತಿಯಲ್ಲಿ ಪ್ರದರ್ಶಿಸಲು ಮುಂದಾಯಿತು. ಆದರೆ, ಭಾರತ ಹಿಂದೇಟು ಹಾಕದೆ, ದೃಢವಾಗಿಯೇ ನಿಂತಿತ್ತು. ಆ ಮೂಲಕ ತನ್ನ ಕಾರ್ಯತಂತ್ರದ ಸಾಮರ್ಥ್ಯದ ಕುರಿತು ಹೊಂದಿರುವ ವಿಶ್ವಾಸವನ್ನು ಪ್ರದರ್ಶಿಸಿತ್ತು. ಆಪರೇಷನ್ ಸಿಂದೂರದ ಸಂದರ್ಭದಲ್ಲಿ, ಭಾರತ ಪಾಕಿಸ್ತಾನದ ಒಂದಷ್ಟು ವಾಯು ಮತ್ತು ಕ್ಷಿಪಣಿ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಅದು ಒಂದು ರೀತಿಯಲ್ಲಿ ಪರಮಾಣು ಕಾರ್ಯಾಚರಣೆಯತ್ತ ಪ್ರೇರೇಪಿಸಿರಬಹುದು ಎಂದು ಸಿಪ್ರಿ ಅಭಿಪ್ರಾಯ ಪಟ್ಟಿದೆ. ಅದೃಷ್ಟವಶಾತ್, ಉಭಯ ದೇಶಗಳು ಜಾಗರೂಕತೆಯಿಂದ ವರ್ತಿಸಿ, ಉದ್ವಿಗ್ನ ಪರಿಸ್ಥಿತಿ ಪೂರ್ಣ ಪ್ರಮಾಣದ ಯುದ್ಧದತ್ತ ತಿರುಗದಂತೆ ನೋಡಿಕೊಂಡವು. ಸಿಪ್ರಿಯ 2026ರ ಇಯರ್ ಬುಕ್ 2025ರ ಮಾಹಿತಿಗಳನ್ನು ಆಧರಿಸಿದ್ದು, ಅದೇ ವರ್ಷದಲ್ಲಿ ಈ ಕದನವೂ ತಲೆದೋರಿರುವುದರಿಂದ, ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ನಾವು ಈಗ ದೊಡ್ಡದಾದ ಜಾಗತಿಕ ಚಿತ್ರಣದತ್ತ ಗಮನ ಹರಿಸೋಣ. ಸಿಪ್ರಿಯ ಪ್ರಕಾರ, ಅಮೆರಿಕ, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ, ಮತ್ತು ಇಸ್ರೇಲ್ ಒಳಗೊಂಡಂತೆ ಒಂಬತ್ತು ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಜನವರಿ 2026ರ ವೇಳೆಗೆ, ಜಗತ್ತು ಅಂದಾಜು 12,187 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿತ್ತು. ಇವುಗಳ ಪೈಕಿ ಅಂದಾಜು 9,745 ಸಿಡಿತಲೆಗಳು ಮಿಲಿಟರಿ ಸಂಗ್ರಹದಲ್ಲಿದ್ದು, ಅಂದಾಜು 4,012 ಸಿಡಿತಲೆಗಳು ಕ್ಷಿಪಣಿಗಳು ಮತ್ತು ವಿಮಾನಗಳಲ್ಲಿ ನಿಯೋಜನೆಗೊಂಡಿದ್ದವು.
ಇನ್ನಷ್ಟು ಆತಂಕದ ಬೆಳವಣಿಗೆ ಎಂದರೆ, ಅಂದಾಜು 2,100ರಿಂದ 2,200 ಸಿಡಿತಲೆಗಳನ್ನು ಅತ್ಯಂತ ಹೆಚ್ಚಿನ ಸಿದ್ಧತೆಯ ಹಂತದಲ್ಲಿಟ್ಟು, ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಅಳವಡಿಸಲಾಗಿದೆ. ಇವುಗಳನ್ನು ಅವಶ್ಯಕತೆ ಎದುರಾದಾಗ ಕೆಲವೇ ನಿಮಿಷಗಳಲ್ಲಿ ಪ್ರಯೋಗಿಸಬಹುದು. ಇವುಗಳ ಪೈಕಿ ಬಹುತೇಕ ಸಿಡಿತಲೆಗಳು ರಷ್ಯಾ ಅಥವಾ ಅಮೆರಿಕಗೆ ಸೇರಿವೆ. ರಷ್ಯಾದ ಬಳಿ 1,796 ನಿಯೋಜಿತ ಸಿಡಿತಲೆಗಳಿದ್ದರೆ, ಅಮೆರಿಕದ ಬಳಿ 1,770 ಸಿಡಿತಲೆಗಳಿವೆ. ಮೂರನೇ ಸ್ಥಾನದಲ್ಲಿರುವ ಫ್ರಾನ್ಸ್ ಅಂದಾಜು 280 ಸಿಡಿತಲೆಗಳನ್ನು ನಿಯೋಜಿಸಿದ್ದು, ಯುನೈಟೆಡ್ ಕಿಂಗ್‌ಡಮ್ 120 ಸಿಡಿತಲೆಗಳನ್ನು ನಿಯೋಜಿಸಿದೆ. ಚೀನಾ ಮತ್ತು ಭಾರತಗಳು ಶಾಂತಿಯ ಸಂದರ್ಭದಲ್ಲೂ ಒಂದಷ್ಟು ಸಿಡಿತಲೆಗಳನ್ನು ಕ್ಷಿಪಣಿಗಳಿಗೆ ಅಳವಡಿಸಿ ಇಟ್ಟಿರುವ ಸಾಧ್ಯತೆಗಳಿವೆ ಎಂದು ಸಿಪ್ರಿ ಅಭಿಪ್ರಾಯ ಪಟ್ಟಿದೆ.
ಭಾರತದ ಒಟ್ಟು ಅಣ್ವಸ್ತ್ರ ಸಿಡಿತಲೆಗಳ ವಿಚಾರವೇನು? ಸಿಪ್ರಿಯ ಅಂದಾಜಿನ ಪ್ರಕಾರ, ಭಾರತದ ಅಣ್ವಸ್ತ್ರ ಸಂಗ್ರಹ ಹಿಂದಿನ ವರ್ಷ 180 ಇದ್ದಿದ್ದು, ಅದು ಈಗ 190ಕ್ಕೆ ಹೆಚ್ಚಿದೆ. ಭಾರತ ಚೀನಾದಾದ್ಯಂತ ತಲುಪಬಲ್ಲ ದೀರ್ಘ ವ್ಯಾಪ್ತಿಯ ಆಯುಧಗಳ ಅಭಿವೃದ್ಧಿಯತ್ತ ಗಮನ ಹರಿಸಿದ್ದರೂ, ಪಾಕಿಸ್ತಾನವೇ ಭಾರತದ ಮಿಲಿಟರಿ ಯೋಜನೆಯ ಪ್ರಮುಖ ಅಂಶವಾಗಿದೆ. ಪಾಕಿಸ್ತಾನದ ಬಳಿ ಅಂದಾಜು 170 ಸಿಡಿತಲೆಗಳಿದ್ದು, ಅದು ಅವುಗಳ ಪೈಕಿ ಯಾವುದನ್ನೂ ನಿಯೋಜಿಸಿಲ್ಲ. ಆದರೆ, ಪಾಕಿಸ್ತಾನ 2025ರಲ್ಲೂ ಫಿಸೈಲ್ ಸಾಮಗ್ರಿಗಳನ್ನು, ಅಂದರೆ ಪರಮಾಣು ಬಾಂಬ್ ತಯಾರಿಸಲು ಬೇಕಾಗುವ ಉತ್ಪನ್ನಗಳನ್ನು ಸಂಗ್ರಹಿಸುವುದನ್ನು ಮುಂದುವರಿಸಿದೆ ಎಂದು ಸಿಪ್ರಿ ವರದಿ ಮಾಡಿದ್ದು, ಅದು ಮುಂದಿನ ದಶಕದಲ್ಲಿ ತನ್ನ ಬತ್ತಳಿಕೆಯನ್ನು ವೃದ್ಧಿಸಬಹುದು ಎನ್ನಲಾಗಿದೆ. ಇಸ್ರೇಲ್ ಬಳಿ ಅಂದಾಜು 90, ಮತ್ತು ಉತ್ತರ ಕೊರಿಯಾ ಬಳಿ ಬಹುತೇಕ 50 ಅಣ್ವಸ್ತ್ರ ಸಿಡಿತಲೆಗಳಿವೆ ಎಂದು ಅಂದಾಜಿಸಲಾಗಿದೆ.
ಸಿಪ್ರಿ ನೀಡಿರುವ ಒಟ್ಟಾರೆ ಸಂದೇಶ ನಿಜಕ್ಕೂ ಗಂಭೀರವಾಗಿದೆ. ಬಹಳಷ್ಟು ದೇಶಗಳು ಈಗ ತಮ್ಮ ಸಾಮರ್ಥ್ಯ ಮತ್ತು ಪ್ರಭಾವಗಳನ್ನು ಪ್ರದರ್ಶಿಸಲು ಪರಮಾಣು ಶಸ್ತ್ರಾಸ್ತ್ರಗಳ ಮೇಲೆಯೇ ಅವಲಂಬಿತವಾಗಿವೆ. ಇತ್ತೀಚಿನ ಬೆಳವಣಿಗೆಗಳು, ಅದರಲ್ಲೂ ಭಾರತ - ಪಾಕಿಸ್ತಾನ ಉದ್ವಿಗ್ನತೆಗಳು ಪರಮಾಣು ಭದ್ರತೆ ನಿಜಕ್ಕೂ ಯುದ್ಧಗಳನ್ನು ತಡೆಗಟ್ಟಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಮೂಡಿಸಿದ್ದು, ಜಗತ್ತಿನಾದ್ಯಂತ ಪರಮಾಣು ಅಪಾಯಗಳು ಹೆಚ್ಚಾಗುವ ಕುರಿತು ಎಚ್ಚರಿಕೆ ನೀಡಿದೆ.
ಸರಳವಾಗಿ ಹೇಳುವುದಾದರೆ, ಜಗತ್ತಿನ ಅತ್ಯಂತ ಅಪಾಯಕಾರಿ ಆಯುಧಗಳು ಈಗ ಸರ್ವ ಸನ್ನದ್ಧತೆಯತ್ತ ಹೆಜ್ಜೆ ಇಡುತ್ತಿದ್ದು, ಭಾರತವೂ ಈ ನಿಟ್ಟಿನಲ್ಲಿ ಜಾಗರೂಕವಾಗಿ ಹೆಜ್ಜೆ ಮುಂದಿಟ್ಟಿದೆ. ಈ ಬೆಳವಣಿಗೆ ಈಗ ಎಲ್ಲರ ಗಮನ ಸೆಳೆದಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])














Click it and Unblock the Notifications