ಶಿವಮೊಗ್ಗ-ಮಂಗಳೂರು ರೈಲ್ವೆ ಲೈನ್: ಮಲೆನಾಡು ಜನರ ನಡುವೆ ತೀವ್ರಗೊಂಡ ಪರ-ವಿರೋಧದ ಸಂಘರ್ಷ
ಬೆಂಗಳೂರು: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದ ಮೂಲಕ ಹಾದುಹೋಗಲಿರುವ, ಶೃಂಗೇರಿ ಮಾರ್ಗದ ಪ್ರಸ್ತಾವಿತ ಶಿವಮೊಗ್ಗ-ಮಂಗಳೂರು ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಮಲೆನಾಡು ಭಾಗದ ಸಾರ್ವಜನಿಕರಲ್ಲಿ ತೀವ್ರ ಭಿನ್ನಾಭಿಪ್ರಾಯ ಮತ್ತು ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಪಶ್ಚಿಮ ಘಟ್ಟಗಳ ಪರಿಸರ ಸಮತೋಲನಕ್ಕೆ ಧಕ್ಕೆಯಾಗುವ ಭೀತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಒಂದು ವರ್ಗದ ಜನರು ಈ ಯೋಜನೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ 'ಸೇವ್ ಶೃಂಗೇರಿ' (Save Sringeri) ಎಂಬ ಆನ್‌ಲೈನ್ ಅಭಿಯಾನವನ್ನು ತೀವ್ರಗೊಳಿಸಿದ್ದಾರೆ. ಮಲೆನಾಡು ಜನರ ಬದುಕನ್ನು ಮುಕ್ಕಾಗಿಸಿ ಮಾಡುವ ರೈಲ್ವೆ ಜಾಲ ನಮಗೆ ಬೇಡ ಎನ್ನುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಪರಿಸರವಾದಿ ನಾಗರಾಜ್ ಕೂವೆ, "ಮಲೆನಾಡು ಭಾಗದ ಜನಪ್ರತಿನಿಧಿಗಳ ಮೊದಲ ಆದ್ಯತೆ ಸಣ್ಣ ರೈತರಿಗೆ ಹಕ್ಕುಪತ್ರ ನೀಡಬೇಕು. ಇಲ್ಲಿ ಅನೇಕರು ಇಂದಿಗೂ ಸೂರಿಲ್ಲದೆ ವಂಚಿತರಾಗಿದ್ದಾರೆ. ಸರ್ಕಾರ ಮೊದಲು ಅವರಿಗೆ ಮನೆ ನೀಡಲಿ, ಆನಂತರ ಕರಾವಳಿ ಮತ್ತು ಮಲೆನಾಡನ್ನು ಜೋಡಿಸುವ ರೈಲ್ವೆ ಲೈನ್ ಬಗ್ಗೆ ಯೋಚಿಸಲಿ" ಎಂದು ಆಗ್ರಹಿಸಿದ್ದಾರೆ.

"ಈ ಯೋಜನೆಯನ್ನು ಬೆಂಬಲಿಸುವವರಿಗೆ ಇದರಿಂದ ಆಗುವ ನಿಖರ ಲಾಭದ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ವಿರೋಧಿಸುವವರ ಬಳಿ ಹತ್ತಾರು ಕಾರಣಗಳಿವೆ. ರೈಲ್ವೆ ಲೈನ್‌ಗಾಗಿ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ, ಇದು ಕಾಡು ಹಾಗೂ ವನ್ಯಜೀವಿಗಳ ನಾಶಕ್ಕೆ ಕಾರಣವಾಗುತ್ತದೆ. ಸ್ಥಳೀಯರು ದಿನನಿತ್ಯ ಕರಾವಳಿಗೆ ಪ್ರಯಾಣಿಸುವುದಿಲ್ಲ, ಹಾಗಾಗಿ ಇದರಿಂದ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಿಲ್ಲ" ಎಂದು ಶೃಂಗೇರಿ ಅಡಿಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ್ ಸಿಗದಾಲ್ ಅಭಿಪ್ರಾಯಪಟ್ಟಿದ್ದಾರೆ.
ಯೋಜನೆಗೆ ಹೊಸನಗರ ಸೇರಿಸಲು ಪ್ರತಿಭಟನೆ
ಒಂದೆಡೆ ಪರಿಸರ ನಾಶದ ಭೀತಿಯಿಂದ ವಿರೋಧ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ಜನತೆ ಈ ಪ್ರಸ್ತಾವಿತ ಯೋಜನೆಯಲ್ಲಿ ತಮ್ಮ ತಾಲೂಕನ್ನು ಸೇರಿಸಿಕೊಳ್ಳಲೇಬೇಕು ಎಂದು ಒತ್ತಾಯಿಸಿ ಬೀದಿಗಿಳಿದಿದ್ದಾರೆ. ಇತ್ತೀಚೆಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು, ಹೊಸನಗರ ವರ್ತಕರ ಸಂಘದ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಸುಮಾರು ₹3,300 ಕೋಟಿ ವೆಚ್ಚದ ಈ ಯೋಜನೆಯ ಡಿಪಿಆರ್ (DPR) ಸಿದ್ಧಪಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದರಲ್ಲಿ ಹೊಸನಗರವನ್ನು ಕೈಬಿಟ್ಟಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸನಗರ ಜನರ ವಾದವೇನು?
ಪ್ರಸ್ತುತ ಈ ರೈಲ್ವೆ ಲೈನ್ ಅನ್ನು ಅರಸಾಳು-ರಿಪ್ಪನ್‌ಪೇಟೆ-ತೀರ್ಥಹಳ್ಳಿ ಮಾರ್ಗವಾಗಿ ನಿರ್ಮಿಸಲು ಚರ್ಚೆ ನಡೆಯುತ್ತಿದ್ದು, ಇದು ಹೊಸನಗರಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ. ಹಿಂದೆ ಜಲವಿದ್ಯುತ್ ಯೋಜನೆಗಳಿಗಾಗಿ ಹೊಸನಗರದ ಜನರು ತಮ್ಮ ಭೂಮಿ ಮತ್ತು ಮನೆಗಳನ್ನು ತ್ಯಾಗ ಮಾಡಿದ್ದಾರೆ. ಆದರೂ ತಾಲೂಕು ಇಂದಿಗೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.
ಪ್ರಸ್ತಾವಿತ ರೈಲ್ವೆ ಮಾರ್ಗವು ಕಡ್ಡಾಯವಾಗಿ ಅರಸಾಳು, ರಿಪ್ಪನ್‌ಪೇಟೆ, ಹೊಸನಗರ ಮತ್ತು ತೀರ್ಥಹಳ್ಳಿ ಮೂಲಕವೇ ಹಾದುಹೋಗಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಒಂದು ಕಡೆ ಪರಿಸರ ಸಂರಕ್ಷಣೆಯ ಕಾಳಜಿ ಹಾಗೂ ಇನ್ನೊಂದೆಡೆ ಪ್ರಾದೇಶಿಕ ಅಭಿವೃದ್ಧಿಯ ಹಪಾಹಪಿಯ ನಡುವೆ ಶಿವಮೊಗ್ಗ-ಮಂಗಳೂರು ರೈಲ್ವೆ ಯೋಜನೆ ಸದ್ಯ ಮಲೆನಾಡಿನಲ್ಲಿ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶ ಮಲೆನಾಡು (ಶಿವಮೊಗ್ಗ) ಮತ್ತು ಕರಾವಳಿ (ಮಂಗಳೂರು) ನಡುವೆ ನೇರ ಸಂಪರ್ಕ ಕಲ್ಪಿಸುವುದು. ಸದ್ಯ ಶಿವಮೊಗ್ಗದಿಂದ ಮಂಗಳೂರಿಗೆ ಹೋಗಬೇಕಾದರೆ ಕಡೂರು-ಹಾಸನ ಮಾರ್ಗವಾಗಿ ಸಾಗಬೇಕು, ಇದು ದೀರ್ಘಾವಧಿಯ ಪ್ರಯಾಣವಾಗಿದೆ. ಆರಂಭದಲ್ಲಿ ಈ ಲೈನ್ ಶಿವಮೊಗ್ಗ - ಅರಸಾಳು - ರಿಪ್ಪನ್‌ಪೇಟೆ - ತೀರ್ಥಹಳ್ಳಿ - ಶೃಂಗೇರಿ - ಕಾರ್ಕಳ ಮಾರ್ಗವಾಗಿ ಮಂಗಳೂರು ತಲುಪಲು ಯೋಜನೆ ರೂಪಿಸಲಾಗಿತ್ತು.
ಆದರೆ ಹೊಸನಗರ ತಾಲೂಕನ್ನು ಕೈಬಿಟ್ಟಿರುವುದಕ್ಕೆ ಈಗ ಸ್ಥಳೀಯವಾಗಿ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಈ ಯೋಜನೆಯ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಲು ಮತ್ತು ಸರ್ವೇ ಕಾರ್ಯಗಳಿಗಾಗಿಯೇ ನೈಋತ್ಯ ರೈಲ್ವೆ (SWR) ಕೋಟ್ಯಂತರ ರೂಪಾಯಿ ವೆಚ್ಚದ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಇಡೀ ಯೋಜನೆಗೆ ಅಂದಾಜು ₹3,300 ಕೋಟಿಗಿಂತಲೂ ಅಧಿಕ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಪಶ್ಚಿಮ ಘಟ್ಟಗಳ ಕಠಿಣ ಭೂಪ್ರದೇಶದಲ್ಲಿ ಸುರಂಗ ಮಾರ್ಗಗಳು (Tunnels) ಮತ್ತು ಬೃಹತ್ ಸೇತುವೆಗಳನ್ನು ನಿರ್ಮಿಸಬೇಕಿರುವುದರಿಂದ ವೆಚ್ಚ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications