KCET 2026 ಅಭ್ಯರ್ಥಿಗಳೇ ಗಮನಿಸಿ: ಆಯ್ಕೆ ಭರ್ತಿ ಪ್ರಕ್ರಿಯೆ ತಡೆಹಿಡಿದ KEA
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವತಿಯಿಂದ ನಡೆಯುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಪ್ರವೇಶಾತಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಆಯ್ಕೆ ಭರ್ತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಸೀಟ್ ಮ್ಯಾಟ್ರಿಕ್ಸ್ ಇನ್ನೂ ಅಂತಿಮಗೊಳ್ಳದ ಕಾರಣ ಈ ವಿಳಂಬ ಉಂಟಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಪ್ರಾಧಿಕಾರದ ಕೆಸಿಇಟಿ 2026 ವೆಬ್ ಆಧಾರಿತ ಆಯ್ಕೆ ನಮೂದ ಇಂದು ಜೂನ್ 10 ರಂದು ಬುಧವಾರ ಪ್ರಾರಂಭವಾಗಬೇಕಿತ್ತು. ಉನ್ನತ ಶಿಕ್ಷಣ ಇಲಾಖೆಯಿಂದ ಅಂತಿಮ ಅನುಮೋದಿತ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ರಚನೆ ಬಿಡುಗಡೆ ಆಗಿಲ್ಲ. ವೆಬ್ ಪೋರ್ಟಲ್ ಬಿಡುಗಡೆ ಇನ್ನೂ ಕೆಲವು ದಿನ ಹಿಡಿಯಬಹುದು ಎಂದು ಪರೀಕ್ಷಾ ಸಂಸ್ಥೆ ಖಚಿತಪಡಿಸಿದೆ.

ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆಯಾದ ನಂತರವೇ ಆಯ್ಕೆ ಭರ್ತಿ ಪ್ರಕ್ರಿಯೆಯು ಅಧಿಕೃತವಾಗಿ ಆರಂಭವಾಗಲಿದೆ. ಅಲ್ಲಿಯವರೆಗೆ ಅಭ್ಯರ್ಥಿಗಳು ಕಾಯಬೇಕಾಗುತ್ತದೆ. ಪ್ರವೇಶಾತಿ ಪ್ರಕ್ರಿಯೆಯ ಕುರಿತಾದ ಇತ್ತೀಚಿನ ಮಾಹಿತಿ ಮತ್ತು ಅಪ್‌ಡೇಟ್‌ಗಳಿಗಾಗಿ ವಿದ್ಯಾರ್ಥಿಗಳು ಕೆಇಎ (KEA) ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ. ಯಾವುದೇ ಗೊಂದಲಗಳಿಗೆ ಒಳಗಾಗದಂತೆ ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ಗಮನಿಸಲು ಸಲಹೆ ನೀಡಲಾಗಿದೆ.
ಜೂನ್ 13ರಂದು ಅಪ್ಡೇಟ್ ಸಿಗುವ ನಿರೀಕ್ಷೆ
ಸರ್ಕಾರ ಅನುಮೋದಿಸುವವರೆಗೂ ಎಂಜಿನಿಯರಿಂಗ್, ಫಾರ್ಮಸಿ ಮತ್ತು ಕೃಷಿ ಕೋರ್ಸ್‌ಗಳಲ್ಲಿ ಖಾಲಿ ಇರುವ ಸೀಟುಗಳ ನಿಖರವಾದ ಸಂಖ್ಯೆಯ ಸೀಟ್ ಮ್ಯಾಟ್ರಿಕ್ಸ್ ಪ್ರಸಾರವಾಗುವುದಿಲ್ಲ. ಜೂನ್ 13 ರಂದು ಅಥವಾ ನಂತರ ಕೆಸಿಇಟಿ ಆಯ್ಕೆ ಭರ್ತಿ ಪೋರ್ಟಲ್ ನೇರ ಪ್ರಸಾರ ಮೂಲಕ ಮಾಹಿತಿ ಬಿಡುಗಡೆ ನಿರೀಕ್ಷೆ ಇದೆ. 2.92 ಲಕ್ಷಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ಆದ್ಯತೆಯ ಕಾಲೇಜು ಪಟ್ಟಿಗಳನ್ನು ಅಂತಿಮಗೊಳಿಸಬಹುದು. ಅದಕ್ಕಾಗಿ ಅಭ್ಯರ್ಥಿಗಳಿಗೆ ಹೆಚ್ಚುವರಿ ದಿನಗಳು ಸಿಗಲಿವೆ. ಪೋರ್ಟಲ್ ತೆರೆಯುವ ಮೊದಲು ತಾವು ಸೇರಬಯಸುವ ಕಾಲೆಜುಗಳ ಕರಡು ಪಟ್ಟಿ ಸಿದ್ಧವಾಗಿಟ್ಟುಕೊಳ್ಳಬೇಕು. ಮುಂದೆ ಗೊಂದಲ ಮಾಡಿಕೊಳ್ಳದಂತೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆಸಿಇಟಿ ಪರೀಕ್ಷೆಗೆ ಹಾಜರಾದ 3,09,014 ವಿದ್ಯಾರ್ಥಿಗಳಲ್ಲಿ ಒಟ್ಟು 2,92,782 ವಿದ್ಯಾರ್ಥಿಗಳು ತೇರ್ಗಡೆಯಾಗಿ ಅರ್ಹತೆ ಪಡೆದುಕೊಂಡಿದ್ದಾರೆ. ಇವರೆಲ್ಲರು ಮುಂದಿನ ವಾರ ಆಯ್ಕೆ ಭರ್ತಿ ಪೋರ್ಟಲ್ ತೆರೆದ ನಂತರ ಪಾಲ್ಗೊಂಡು ನಮೂದಿಸಬಹುದಾಗಿದೆ. ವಿದ್ಯಾರ್ಥಿಗಳು cetonline.karnataka.gov.in ಅಥವಾ keaonline.karnataka.gov.in ನಲ್ಲಿ KEA ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಲಾಗಿನ್ ಆಗಿ ಆಯ್ಕೆ ಭರ್ತಿ ಮಾಡಬೇಕು. ಹೆಚ್ಚಿನ ಮಾಹಿತಿಗೆ ಕೆಇಎ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡುವಂತೆ ತಿಳಿಸಲಾಗಿದೆ.













Click it and Unblock the Notifications