ಗೋವಾ ಚುನಾವಣೆ; ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮುಂದೂಡಿಕೆ
ಪಣಜಿ, ಫೆಬ್ರವರಿ 02; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರದ ಗೋವಾ ಪ್ರವಾಸವನ್ನು ಮುಂದೂಡಿದ್ದಾರೆ. ಫೆಬ್ರವರಿ 4ರಂದು ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಫೆಬ್ರವರಿ 14ರಂದು ನಡೆಯುವ ಚುನಾವಣೆ ಪ್ರಚಾರ ನಡೆಸಲಿದ್ದಾರೆ.
ಬುಧವಾರ ರಾಹುಲ್ ಗಾಂಧಿ ಗೋವಾ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ಗೋವಾಕ್ಕೆ ಫೆಬ್ರವರಿ 4 ರ ಶುಕ್ರವಾರ ಭೇಟಿ ನೀಡಲಿದ್ದಾರೆ ಎಂದು ಎಐಸಿಸಿ ಅಲ್ಕಾ ಲಾಂಬಾ ಹೇಳಿದ್ದಾರೆ.
ಫೆಬ್ರವರಿ 3ರಂದು ರಾಹುಲ್ ಗಾಂಧಿ ಛತ್ತೀಸ್‌ಗಢ್‌ಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 4ರಂದು ಗೋವಾಕ್ಕೆ ಭೇಟಿ ನೀಡಲಿದ್ದು ಪ್ರವಾಸೋದ್ಯಮ ಕ್ಷೇತ್ರದ ಜನರ ಜೊತೆ, ಅಂಗನವಾಡಿ ಕಾರ್ಯಕರ್ತೆಯರ ಜೊತೆ ಸಂವಾದ ನಡೆಸಲಿದ್ದಾರೆ.

ಗೋವಾ ವಿಧಾನಸಭೆ ಚುನಾವಣೆಗೆ ಕಣದಲ್ಲಿರುವ 37 ಕ್ಷೇತ್ರಗಳ ಅಭ್ಯರ್ಥಿಗಳ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ರಾಜ್ಯದ 40 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 37ರಲ್ಲಿ ಕಣಕ್ಕಿಳಿದಿದ್ದು, 3 ಸ್ಥಾನಗಳನ್ನು ಜಿಎಫ್‌ಪಿ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.
ಅಭ್ಯರ್ಥಿಗಳಿಂದ ಪಕ್ಷ ನಿಷ್ಠ ಪ್ರತಿಜ್ಞೆ; ರಾಹುಲ್ ಗಾಂಧಿ ಗೋವಾ ಭೇಟಿ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಪಕ್ಷ ನಿಷ್ಠ ಪ್ರತಿಜ್ಞೆ ಮಾಡಬೇಕಿದೆ. ಗೋವಾ ಕಾಂಗ್ರೆಸ್ ಅಭ್ಯರ್ಥಿಗಳಿಂದ ಇಂತಹ ಪ್ರತಿಜ್ಞೆ ಮಾಡಿಸಿ ಹೊಸ ರಾಜಕೀಯ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದೆ.
2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿ 17 ಶಾಸಕರು ಆಯ್ಕೆಯಾದರು. ಆದರೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿಲ್ಲ. ಇದಕ್ಕೆ ಪಕ್ಷಾಂತರವೇ ಪ್ರಮುಖ ಕಾರಣವಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಆಯ್ಕೆಯಾದ 17 ಶಾಸಕರ ಪೈಕಿ ಈಗ ಪಕ್ಷದಲ್ಲಿರುವುದು ಕೇವಲ ಇಬ್ಬರು ಮಾತ್ರ.
ಈ ಹಿನ್ನಲೆಯಲ್ಲಿ ಈ ವರ್ಷದ ಚುನವಣೆ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಪಕ್ಷ ನಿಷ್ಠೆಯ ಪ್ರತಿಜ್ಞೆ ಮಾಡಿಸಿಕೊಳ್ಳಲಾಗುತ್ತಿದೆ. ಕಾಂಗ್ರೆಸ್‌ಗೆ ಮತ ಹಾಕುವುದು ವ್ಯರ್ಥವಾಗುವುದಿಲ್ಲ ಮತ್ತು ಚುನಾಯಿತ ಪ್ರತಿನಿಧಿಗಳು ಚುನಾಯಿತರಾದ ನಂತರ ಪಕ್ಷಾಂತರ ಮಾಡುವುದಿಲ್ಲ ಎಂಬ ಭರವಸೆಯನ್ನು ಪಕ್ಷ ಈ ಮೂಲಕ ರಾಜ್ಯದ ಜನರಿಗೆ ನೀಡುತ್ತಿದೆ.
301 ಅಭ್ಯರ್ಥಿಗಳು ಕಣದಲ್ಲಿ; 40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ನಾಮಪತ್ರಗಳನ್ನು ವಾಪಸ್ ಪಡೆಯಲು ಜನವರಿ 31 ಕೊನೆಯ ದಿನವಾಗಿತ್ತು. ಅಂತಿಮವಾಗಿ 301 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ. ಈ ಬಾರಿಯ ಗೋವಾ ಚುನಾವಣೆಯಲ್ಲಿ 11,64,522 ಮತದಾರರು ಹಕ್ಕು ಚಲಾವಣೆ ಮಾಡಲಿದ್ದಾರೆ.
ಗೋವಾದಲ್ಲಿ ನಡೆದ ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿವೆ ಎಂದು ಅಂದಾಜಿಸಿವೆ. ಕಾಂಗ್ರೆಸ್ ಪಕ್ಷ ಸಹ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಟಿಎಂಸಿ, ಶಿವಸೇನೆ, ಎನ್‌ಸಿಪಿ ನೀಡಿದ್ದ ಮೈತ್ರಿಕೂಟದ ಆಹ್ವಾನವನ್ನು ತಿರಸ್ಕಾರ ಮಾಡಿ 37 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 21.
ರಂಗೇರಿದ ಚುನಾವಣಾ ಪ್ರಚಾರ; ಗೋವಾ ವಿಧಾನಸಭೆ ಚುನಾವಣೆಗಾಗಿ ಕೋವಿಡ್ ಪರಿಸ್ಥಿತಿ ನಡುವೆಯೂ ಅಭ್ಯರ್ಥಿಗಳು ಮನೆ-ಮನೆ ಪ್ರಚಾರವನ್ನು ಬಿರುಸಿನಿಂದ ನಡೆಸುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಬೈಕ್ ಜಾಥಾ, ರೋಡ್ ಶೋ, ಸೈಕಲ್ ಜಾಥಾ ಮುಂತಾದ ಪ್ರಚಾರಗಳ ಮೇಲಿನ ನಿರ್ಬಂಧವನ್ನು ಫೆಬ್ರವರಿ 14ರ ತನಕ ವಿಸ್ತರಣೆ ಮಾಡಿದೆ.
ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು 1000 ಜನರನ್ನು ಸೇರಿಸಿ ಅಥವ ಮೈದಾನದ ಶೇ 50ರಷ್ಟು ಆಸನ ಭರ್ತಿ ಮಾಡಿ ಸಮಾವೇಶ ನಡೆಸಲು ಅನುಮತಿ ನೀಡಿದೆ. ಅಲ್ಲದೇ ಮನೆ-ಮನೆ ಪ್ರಚಾರಕ್ಕೆ 20 ಜನರು ತೆರಳಬಹುದು ಎಂದು ಹೇಳಿದೆ. ಆದ್ದರಿಂದ ಪಕ್ಷಗಳು ಮನೆ-ಮನೆ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿವೆ.












Click it and Unblock the Notifications