ಸರ್ಕಾರಿ ಶಾಲೆಗಳಲ್ಲಿ ಯೋಗ ಕಡ್ಡಾಯ : ಸ್ಮೃತಿ ಇರಾನಿ
ನವದೆಹಲಿ, ಜೂ, 22 : ಕೇಂದ್ರೀಯ ಶಿಕ್ಷಣ ವಿದ್ಯಾಲಯ ಹಾಗೂ ಜವಾಹರ್ ನವೋದಯ ವಿದ್ಯಾಲಯ ಒಳಗೊಂಡಂತೆ, ಸರ್ಕಾರದ ಸುಪರ್ದಿಗೆ ಒಳಪಡುವ ಎಲ್ಲಾ ಶಾಲೆಗಳಲ್ಲಿ ಯೋಗ ಕಡ್ಡಾಯ ಶಿಕ್ಷಣವಾಗಬೇಕು ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
ಪಠ್ಯಕ್ರಮ ಮತ್ತು ಅಧ್ಯಯನ ಸಾಮಾಗ್ರಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯೋಗ ಕೇವಲ 6 ರಿಂದ 10 ನೇ ತರಗತಿಯ ಮಕ್ಕಳಿಗೆ ಮಾತ್ರ ಸೀಮಿತವಾಗಬೇಕಿಲ್ಲ. ಶೈಕ್ಷಣಿಕ ಕಾರ್ಯಕ್ರಮಗಳ ತರಬೇತಿ ನೀಡುವ ಶಿಕ್ಷಕರನ್ನು ಒಳಗೊಂಡಂತೆ ಯೋಗ ಎಲ್ಲರಿಗೂ ತಲುಪಬೇಕು. ಕೇಂದ್ರೀಯ ಮಾನ್ಯತೆ ಪಡೆದ ಎಲ್ಲಾ ಶಾಲೆಗಳು ತಮ್ಮ ಶೈಕ್ಷಣಿಕ ವರ್ಷದ ಪಠ್ಯಕ್ರಮದಲ್ಲಿ ಯೋಗವನ್ನು ಒಂದು ಅಧ್ಯಯನ ವಿಷಯವಾಗಿ ಅಳವಡಿಸಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಬೇಕು ಎಂದು ನುಡಿದರು.[ಶಾಲಾ ಪಠ್ಯದಲ್ಲಿ ಯೋಗ ಅಳವಡಿಕೆ: ಸಿದ್ದರಾಮಯ್ಯ]

ಈಗಾಗಲೇ ಯೋಗದ ಕುರಿತಾಗಿ ಪಠ್ಯಕ್ರಮವನ್ನು ರೂಪಿಸುವ ಯೋಜನೆ ಕೈಗೊಂಡಿದ್ದೇವೆ. ಅಲ್ಲದೇ ಯೋಗದಲ್ಲಿ ಡಿಪ್ಲೋಮ, ಪದವಿ ಹಾಗೂ ಸ್ನಾತಕೋತ್ತರ ಪದವಿ ಗಳಿಸಲು ಕೂಡ ಅನುಕೂಲ ಮಾಡಿಕೊಡಲಾಗುವುದು. ಇದರಿಂದ ಯೋಗ ಶಿಕ್ಷಕರಿಗೆ ಎಲ್ಲಿಲ್ಲದ ಬೇಡಿಕೆ ಒದಗಲಿದೆ ಎಂದು ನುಡಿದರು.
ಅಲ್ಲದೇ ಒಂದರಿಂದ ಪಿಯುಸಿವರೆಗೆ ಎನ್ ಸಿ ಇ ಆರ್ ಟಿ ಪುಸ್ತಕ, ಪಠ್ಯಕ್ರಮ ಪಡೆಯಲು ನೆರವಾಗುವ ಉಚಿತ ಮೊಬೈಲ್ ಆಪ್ ಜುಲೈ 17 ರ ಒಳಗಾಗಿ ತಲುಪಲಿದೆ. ಹಾಗೆಯೇ ಮುಂದಿನ ವರ್ಷ ಯೋಗ ಕುರಿತು ರಾಷ್ಟ್ರ ಮಟ್ಟದ ಸ್ಪರ್ಧೆ ಏರ್ಪಡಿಸಲಾಗುವುದು. ಅದರಲ್ಲಿ ಅತ್ಯುತ್ತಮ ಸಾಧನೆಗೈದವರಿಗೆ 5 ಲಕ್ಷ ಬಹುಮಾನ ವಿತರಿಸಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications