ಮೋದಿಗೆ ಗಡ್ಕರಿ ನೀಡಿದ ವಜ್ರದ ನೆಕ್ಲೆಸ್ ಬೆಲೆ ಎಷ್ಟು?
ನವದೆಹಲಿ, ಸೆ 20: ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ದಿನ ಪಕ್ಷದ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಮೋದಿಗೆ ಉಡುಗೊರೆಯಾಗಿ ನೀಡಿದ ವಜ್ರದ ನೆಕ್ಲೆಸ್ ಬೆಲೆ ಎಷ್ಟು ಎಂದು ಶರದ್ ಪವಾರ್ ಅವರ NCP (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಕೇಳಿದೆ.
ಮೋದಿ ತನ್ನ ಅಭ್ಯರ್ಥಿ ಎಂದು ಘೋಷಿಸಿದ ದಿನ ನಿತಿನ್ ಗಡ್ಕರಿ ಅವರು ಮೋದಿಗೆ ವಜ್ರ ಮತ್ತು ಮುತ್ತಿನ ನೆಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ದೇಶದ ಜನತೆ ಅದರ ಬೆಲೆ ಎಷ್ಟಿರ ಬಹುದು ಎಂದು ತಿಳಿದುಕೊಳ್ಳಲು ಬಯಸುತ್ತದೆ ಎಂದು ಎನ್ಸಿಪಿ ವಕ್ತಾರ ನವಾಬ್ ಮಲಿಕ್ ಬಿಜೆಪಿಗೆ ಸ್ಪಷ್ಟನೆ ಕೇಳಿದ್ದಾರೆ.

ಗಡ್ಕರಿ ನೀಡಿದ ನೆಕ್ಲೆಸ್ ಅನ್ನು ಮೋದಿ ಸ್ವಲ್ಪ ಹೊತ್ತು ಧರಿಸಿ ತದನಂತರ ಅದನ್ನು ತನ್ನ ಕಾರ್ಯದರ್ಶಿಗೆ ನೀಡಿದರು. ಈಗ ಆ ನೆಕ್ಲೆಸ್ ಎಲ್ಲಿದೆ, ಅವರ ಬಳಿ ಇದೆಯಾ ಅಥವಾ ಗುಜರಾತ್ ಸರಕಾರದ ಟ್ರೆಷರಿಯಲ್ಲಿ ಇದೆಯಾ? ಇದನ್ನು ರಾಷ್ಟ್ರದ ಜನತೆ ತಿಳಿದು ಕೊಳ್ಳಲು ಬಯಸುತ್ತದೆ ಎಂದು ಮಲಿಕ್ ಹೇಳಿದ್ದಾರೆ.
ನಮ್ಮ ಪಕ್ಷದ ಜೊತೆಗೆ ದೇಶ ಜನತೆ ಕೂಡಾ ಇದರ ಬೆಲೆ ಎಷ್ಟು ಎಂದು ತಿಳಿದುಕೊಳ್ಳಲು ಬಯಸುತ್ತದೆ. ಇದರ ಬೆಲೆ ಎಷ್ಟಿರ ಬಹುದು ಐವತ್ತು ಕೋಟಿ, ಐದು ಕೋಟಿ, ಐವತ್ತು ಲಕ್ಷ ಅಥವಾ ಐದು ರೂಪಾಯಿ ಆಗಿರಲಿ. ಅದರ ಬೆಲೆಯನ್ನು ನಿತಿನ್ ಗಡ್ಕರಿ ಬಯಲು ಮಾಡಲಿ ಎಂದು ನವಾನ್ ಮಲಿಕ್ ಸವಾಲೆಸೆದಿದ್ದಾರೆ.
ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಮುಖಂಡರಾದ ಸುಷ್ಮಾ ಸ್ವರಾಜ್, ಅರುಣ್ ಜೆಟ್ಲೆ ನರೇಂದ್ರ ಮೋದಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿದ್ದರೆ, ಗಡ್ಕರಿ ಅವರು ಮೋದಿಗೆ ಮುತ್ತಿನ ಹಾರವನ್ನು ಹಾಕಿ ಅಭಿನಂದಿಸಿದ್ದರು. (ಪಿಟಿಐ)












Click it and Unblock the Notifications