ಪ್ರಧಾನಿ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ಸುರಂಗಮಾರ್ಗ
ನವದೆಹಲಿ, ಮೇ 30: ನೂತನ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಕ್ಷಿಪ್ರ ನಿರ್ಧಾರ ತೆಗೆದುಕೊಂಡಿದ್ದಾರೆ. ದಿಲ್ಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ನಿವಾಸದಿಂದ ಸಫ್ದರಜಂಗ್ ವಿಮಾನ ನಿಲ್ದಾಣಕ್ಕೆ ಸುರಂಗ ಮಾರ್ಗ ರಸ್ತೆ ನಿರ್ಮಾಣದಲ್ಲಿ ಸಂಚರಿಸಲು ತೀರ್ಮಾನಿಸಿದ್ದಾರೆ.
ಈ ಸುರಂಗವು ಸುಮಾರು 1.5 ಕಿಮೀ ಉದ್ದದ ಮಾರ್ಗವಾಗಿದ್ದು, ಪ್ರಧಾನ ಮಂತ್ರಿಗೆಂದೇ ವಿಶೇಷವಾಗಿ ಮೊದಲ ಬಾರಿಗೆ ಇಂತಹ ಸುರಂಗ ನಿರ್ಮಾಣವಾಗುತ್ತಿದೆ. ಇನ್ನು 2 ತಿಂಗಳಲ್ಲಿ ಕಾಮಗಾರಿ ಮುಗಿಯಲಿದ್ದು, ಪ್ರಧಾನಿ ಸಂಚಾರಕ್ಕೆ ಮುಕ್ತವಾಗಲಿದೆ.
ತುರ್ತು ಸನ್ನಿವೇಶ ಮತ್ತು ಗರಿಷ್ಠ ಭದ್ರತೆಯೊಂದಿಗೆ ಪ್ರಧಾನಿ ಮೋದಿ ಸಂಚರಿಸುವಂತಾಗಬೇಕು. ಅದೇ ವೇಳೆ ಮೇಲ್ಮೈ ಸಂಚಾರದಲ್ಲಿ ಸಾರ್ವಜನಿಕರು ತೊಂದರೆಗೀಡಾಗಬಾರದು ಎಂಬುದು ಈ ಸುರಂಗ ಮಾರ್ಗ ನಿರ್ಮಾಣದ ಉದ್ದೇಶವಾಗಿದೆ. ಅಮೆರಿಕ ಮತ್ತು ಅನೇಕ ಯುರೋಪ್ ದೇಶಗಳಲ್ಲಿ ಇಂತಹಗ ವ್ಯವಸ್ಥೆಯಿದೆ.

ಅಂದಹಾಗೆ, ಫಲಿತಾಂಶ ಹೊರಬಿದ್ದ 15 ದಿನಗಳ ತರುವಾಯ, ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ವಾರದ ನಂತರ ಇಂದು ಬೆಳಗ್ಗೆ ಸರಳ ಪೂಜೆ ನಡೆಸಿ, ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ನಿವಾಸ 5ಕ್ಕೆ ಗೃಹಪ್ರವೇಶ ಮಾಡಿದ್ದಾರೆ.
2010ರಿಂದ ಕೇಂದ್ರ ಲೋಕೋಪಯೋಗಿ ಇಲಾಖೆಯು (CPWD) ಈ ಸುರಂಗದ ನಿರ್ಮಾಣ ಕಾರ್ಯ ನಡೆಸುತ್ತಿದೆ. ಗರಿಷ್ಠ ಭದ್ರತೆಯ ದೃಷ್ಟಿಯಿಂದ ಗುಪ್ತದಳದ ಮೇಲುಸ್ತುವಾರಿಯಲ್ಲಿ ಈ ಕಾಮಗಾರಿ ನಡೆದಿದೆ. ದಿಲ್ಲಿ ಮೆಟ್ರೋ ರೈಲು ನಿಗಮವು (DMRC) ಯೋಜನೆಯನ್ನು ಪೂರ್ಣಗೊಳಿಸಲಿದೆ.
ಸುರಂಗ ಮಾರ್ಗವು Kamal Ataturk Marg, Golf Course ಮತ್ತು Safdarjung Tomb ಮೂಲಕ ಹಾದುಹೋಗಲಿದೆ. ರೇಸ್ ಕೋರ್ಸ್ ರಸ್ತೆಯ ಪ್ರಧಾನಿ ನಿವಾಸವು ಸಫ್ದರಜಂಗ್ ವಿಮಾನ ನಿಲ್ದಾಣದಿಂದ ಸುಮಾರು 3 ಕಿಮೀ ದೂರದ ಅಂತರದಲ್ಲಿದೆ.
ದಿಲ್ಲಿಯಿಂದ ಬಂದುಹೋಗಲು ಗಣ್ಯಾತಿಗಣ್ಯ ವ್ಯಕ್ತಿಗಳು ಸಫ್ದರಜಂಗ್ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿ ಅಲ್ಲಿಂದ ತಮ್ಮ ಪ್ರವಾಸವನ್ನು ಮುಂದುವರಿಸುತ್ತಾರೆ.












Click it and Unblock the Notifications