ತೊಡೆಯ ಮೇಲೆ ಬಂದೂ ಕೂಡು ಅಂದನೆ ಊಬರ್ ಡ್ರೈವರ್?
ನವದೆಹಲಿ, ಮಾರ್ಚ್ 20 : "ನಿನಗೆ ತುಂಬಾ ಹೀಟ್ ಆಗುತ್ತಿದ್ದರೆ, ಬಂದು ನನ್ನ ತೊಡೆಯ ಮೇಲೆ ಕುಳಿತುಕೋ" ಎಂದು ಅಸಭ್ಯವಾಗಿ ವರ್ತಿಸಿದ್ದನೆಂದು ಊಬರ್ ಟ್ಯಾಕ್ಸಿ ಚಾಲಕನ ವಿರುದ್ಧ ದೆಹಲಿ ಪತ್ರಕರ್ತೆಯೊಬ್ಬರು ಆರೋಪಿಸಿದ್ದಾರೆ.
ಮಂಗಳವಾರ ರಾತ್ರಿ ಊಬರ್ ಟ್ಯಾಕ್ಸಿಯಲ್ಲಿ ತಾವು ಅನುಭವಿಸಿದ ಅಸಹ್ಯಕರ ಘಟನೆಯನ್ನು ಅಮೃತಾ ದಾಸ್ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಜೊತೆ ಗಂಡ ಇದ್ದರೂ ಟ್ಯಾಕ್ಸಿ ಚಾಲಕ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಅವರು ಹೇಳಿದ್ದಾರೆ.
"ಆತ ತುಂಬಾ ಅನಾಗರಿಕನಂತೆ ವರ್ತಿಸುತ್ತಿದ್ದ. ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮೊದಲು ಅಷ್ಟು ಸೆಖೆ ಇದ್ದರೂ ಏರ್ ಕಂಡಿಷನರ್ ಆನ್ ಮಾಡಲು ನಿರಾಕರಿಸಿದ. ನಂತರ, ಅಷ್ಟೊಂದು ಹೀಟ್ ಆಗುತ್ತಿದ್ದರೆ ನನ್ನ ತೊಡೆಯ ಮೇಲೆ ಬಂದು ಕುಳಿತುಕೊ ಎಂದು ಕೆಟ್ಟದಾಗಿ ಹೇಳಿದ. ಆಕ್ಷೇಪಿಸಿದ್ದಕ್ಕೆ, ತಕ್ಷಣ ಗಾಡಿ ನಿಲ್ಲಿಸಿ, ಬಲವಂತವಾಗಿ ನಮ್ಮನ್ನು ಹೊರಹಾಕಿದ. ನನ್ನ ಗಂಡ ಜೊತೆಯಲ್ಲಿದ್ದಾಗಲೇ ಇದೆಲ್ಲ ನಡೆದಿದೆ" ಎಂದು ಅವರು ಬರೆದುಕೊಂಡಿದ್ದಾರೆ.

ಈ ಬಗ್ಗೆ ಊಬರ್ ಸಂಸ್ಥೆ ಅಮೃತಾ ಅವರ ಕ್ಷಮೆಯನ್ನು ಕೋರಿದ್ದು. ಈ ಕುರಿತಾಗಿ ನಮ್ಮ ತಂಡ ನಿಮಗೆ ಈಮೇಲ್ ಕಳಿಸಿದ್ದು. ಹೆಚ್ಚಿನ ವಿವರಗಳೇನಾದರೂ ಇದ್ದರೆ ಅದಕ್ಕೆ ಉತ್ತರ ಬರೆಯಿರಿ ಎಂದು ತಿಳಿಸಿದೆ.
ಇಷ್ಟೆಲ್ಲ ನಡೆದರೂ ಊಬರ್ ಟ್ಯಾಕ್ಸಿ ಡ್ರೈವರ್ ವಿರುದ್ಧ ಕೂಡಲೆ ಕ್ರಮ ತೆಗೆದುಕೊಳ್ಳಲು ವಿಫಲವಾಗಿದ್ದಕ್ಕೆ ಕೆಲವರು ದೆಹಲಿ ಪೊಲೀಸರ ವಿರುದ್ಧ ಕೆಂಡ ಕಾರಿದ್ದಾರೆ. ಇಂಥ ಡ್ರೈವರುಗಳನ್ನು ನೇಮಕ ಮಾಡಿಕೊಳ್ಳುವಾಗ ಅವರ ಹಿನ್ನೆಲೆಯನ್ನು ಪರಿಶೀಲಿಸುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಆದರೆ, ಕೆಲವೊಬ್ಬರು ಪತ್ರಕರ್ತೆಯನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. 'ನಿಮ್ಮ ಬಳಿ ಪುರಾವೇ ಏನಿದೆ? ಕಷ್ಟಪಟ್ಟು ದುಡಿಯುವ ಚಾಲಕನ ವಿರುದ್ಧವೇ ನೀವು ಕೆಟ್ಟದಾಗಿ ನಡೆದುಕೊಂಡಿರಬಹುದು' ಎಂದು ಕೆಲವರು ಪ್ರಶ್ನಿಸುತ್ತಿದ್ದಂತೆ ಅಮೃತಾ ದಾಸ್ ಅವರು ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.












Click it and Unblock the Notifications