ಕೊರೊನಾ ವೈರಸ್ ಹರಡುತ್ತಿರೋ ಈ ಸಮಯದಲ್ಲಿ ಸಿಗರೇಟ್ ಸೇದುವುದು ಅಪಾಯ!
ನವ ದೆಹಲಿ, ಮಾರ್ಚ್ 22: ಕೊರೊನಾ ವೈರಸ್ ವಿರುದ್ಧ ವಿಶ್ವವೇ ಹೋರಾಟ ನೆಡೆಸಿದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಅನೇಕ ಮುಂಜಾಗ್ರತೆ ಕ್ರಮಗಳನ್ನು ತಿಳಿಸಿದ್ದು, ಅದನ್ನು ಪಾಲಿಸುವಂತೆ ಹೇಳಿದೆ. ಇದೀಗ ಇನ್ನು ಕೆಲವು ಅಂಶಗಳನ್ನು WHO ಡೈರೆಕ್ಟರ್ ಜನರಲ್ ಹಂಚಿಕೊಂಡಿದ್ದಾರೆ.
ವಿಶ್ವದ 3,08,564 ಜನರಿಗೆ ಈವರೆಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 13069 ಜನರು ಇದರಿಂದ ಮರಣ ಹೊಂದಿದ್ದಾರೆ. ಭಾರತದಲ್ಲಿ 332 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 6 ಮಂದಿ ಇದರಿಂದ ತಮ್ಮ ಜೀವ ಕಳೆದುಕೊಂಡಿದ್ದಾರೆ.
ಹೀಗಿರುವಾಗ, ಕೊರೊನಾ ವೈರಸ್ ಜನರಿಗೆ ಭಯ ಹುಟ್ಟಿಸಿದೆ. ಈ ಸಮಯದಲ್ಲಿ ಹೇಗಿರಬೇಕು ಎನ್ನುವ ಗೊಂದಲ ಇನ್ನೂ ಇದೆ. ಹೀಗಾಗಿ, ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಕೆಲವೊಂದು ಸೂಚನೆ ನೀಡಿದ್ದಾರೆ. ಅದರಲ್ಲಿ ಸಿಗರೇಟ್ ಸೇದಬಾರದು ಹಾಗೂ ಮಧ್ಯ ಸೇವನೆ ಕಡಿಮೆ ಮಾಡಬೇಕು ಎನ್ನುವ ಅಂಶಗಳು ಇವೆ.

ಸಿಗರೇಟ್ ಸೇದಬಾರದು
ಕೊರೊನಾ ವೈರಸ್ ಹರಡುತ್ತಿರುವ ಈ ಸಮಯದಲ್ಲಿ ಸಿಗರೇಟ್ ಸೇದುವುದು ಸರಿಯಲ್ಲ ಎಂದು WHO ಡೈರೆಕ್ಟರ್ ಜನರಲ್ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ. ಸಿಗರೇಟ್ ಸೇದುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎನ್ನುವುದನ್ನು ಅವರು ಇಲ್ಲಿ ಹೇಳಿಲ್ಲ. ಆದರೆ, ಸಿಗರೇಟ್ ಸೇದುವವರು, ಕೊರೊನಾ ವೈರಸ್ ಸೋಂಕಿಗೆ ಒಳಗಾದರೆ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.
|
ಮಧ್ಯ ಸೇವನೆ ಕೂಡ ಕಡಿಮೆ ಇರಲಿ
ಈ ಸಮಯದಲ್ಲಿ ಮಧ್ಯ ಸೇವನೆ ಕೂಡ ಕಡಿಮೆ ಇರಬೇಕು ಎಂದು ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಸಕ್ಕರೆ ಪಾನೀಯಗಳ ಕುಡಿಯುವುದಕ್ಕೆ ಸಹ ಕಡಿವಾಣ ಹಾಕಬೇಕು ಎಂದು ಅವರು ತಿಳಿಸಿದ್ದಾರೆ. ಆರೋಗ್ಯಕರ ತಿನಿಸುಗಳನ್ನು ತಿನ್ನಬೇಕು. ಪೌಷ್ಟಿಕ ಆಹಾರ ಸೇವನೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಎಂದಿದ್ದಾರೆ.

ದೈಹಿಕ ಚಟುವಟಿಕೆ ಇರಬೇಕು
WHO ದಿನನಿತ್ಯದ ದೈಹಿಕ ಚಟುವಟಿಕೆ ಇರಬೇಕು ಎಂದು ತಿಳಿಸಿದೆ. ದಿನಕ್ಕೆ ವಯಸ್ಕರಿಗೆ 30 ನಿಮಿಷ ಹಾಗೂ ಮಕ್ಕಳಿಗೆ 1 ಗಂಟೆ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಬೇಕು ಎಂದಿದೆ. ಕೊರೊನಾ ವೈರಸ್ ಹರಡುತ್ತಿರುವ ಈ ಸಮಯದಲ್ಲಿ ಮನೆಯಲ್ಲಿ ಇರುವುದು ಸೇಫ್. ಆದರೆ, ಮನೆಯಲ್ಲಿಯೇ ವ್ಯಾಯಾಮ ಮಾಡುವ ಮೂಲಕ ದೇಹವನ್ನು ಚಟುವಟಿಕೆಯಿಂದ ಇಟ್ಟುಕೊಳ್ಳುವ ಅಗತ್ಯವಾಗಿದೆ.

ಮಾನಸಿಕ ಆರೋಗ್ಯ ಮುಖ್ಯ
ಮಾನಸಿಕ ಆರೋಗ್ಯದ ಬಗ್ಗೆ ಗಮನ ನೀಡಬೇಕು. ಇಂತಹ ಸಂದರ್ಭದಲ್ಲಿ ಒತ್ತಡ, ಗೊಂದಲ ಮತ್ತು ಭಯವನ್ನು ಅನುಭವಿಸುವುದು ಸಾಮಾನ್ಯವಾಗಿದೆ. ನಿಮಗೆ ತಿಳಿದಿರುವ ವ್ಯಕ್ತಿಗಳ ಜೊತೆಗೆ ಮಾತನಾಡುವುದು ಒಳ್ಳೆಯದು. ನಿಮ್ಮ ಮೇಲಿನ ನಂಬಿಕೆ ಸಹಾಯ ಮಾಡುತ್ತದೆ ಎಂದಿದ್ದಾರೆ. ಕೊರೊನಾ ವೈರಸ್‌ನಿಂದ ಮನೆಯಲ್ಲೇ ಇರುವ ಈ ಸಮಯದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್ ಆಗಿರಬೇಕು ಎಂದು ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.












Click it and Unblock the Notifications