Winter Session Day 12 Roundup:ಕಲಾಪದ ಪ್ರಮುಖಾಂಶಗಳು
ನವದೆಹಲಿ, ಡಿಸೆಂಬರ್ 14: ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿ 12 ದಿನ ಕಳೆದರೂ, 12 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ಮುಂದುವರೆಯಿತು. 12 ರಾಜ್ಯಸಭಾ ಸಂಸದರ ಅಮಾನತು "ಭಾರತದ ಜನರ ಧ್ವನಿಯನ್ನು ಹತ್ತಿಕ್ಕುವುದರ ಸಂಕೇತ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ. ಸಂಸತ್ತಿನಲ್ಲಿ ರಾಷ್ಟ್ರೀಯ ಮಹತ್ವದ ಯಾವುದೇ ವಿಷಯವನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ವಿಜಯ್ ಚೌಕ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 12 ಸಂಸದರ ಅಮಾನತು ಭಾರತದ ಜನರ ಧ್ವನಿಯನ್ನು ಹತ್ತಿಕ್ಕುವುದರ ಸಂಕೇತವಾಗಿದೆ. ಅವರ ಧ್ವನಿಯನ್ನು ಹತ್ತಿಕ್ಕಲಾಗಿದೆ. ಅವರು ಯಾವುದೇ ತಪ್ಪು ಮಾಡಿಲ್ಲ. ಸಂಸತ್ತಿನಲ್ಲಿ ಪ್ರಮುಖ ವಿಷಯಗಳನ್ನು ಚರ್ಚಿಸಿ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಗದ್ದಲದ ಮಧ್ಯೆ ವಿಧೇಯಕ ಅಂಗೀಕಾರವಾಗುತ್ತಿದೆ. ಇದು ಸಂಸತ್ತನ್ನು ನಡೆಸುವ ವಿಧಾನವಲ್ಲ. ಪ್ರಧಾನಿ ಸದನಕ್ಕೆ ಬರುವುದಿಲ್ಲ. ರಾಷ್ಟ್ರೀಯ ಮಹತ್ವದ ಯಾವುದೇ ವಿಷಯವನ್ನು ಪ್ರಸ್ತಾಪಿಸಲು ನಮಗೆ ಅವಕಾಶವಿಲ್ಲ. ಇದು ದುರದೃಷ್ಟಕರ. ಪ್ರಜಾಪ್ರಭುತ್ವದ ಹತ್ಯೆ ಎಂದು ಅವರು ಹೇಳಿದ್ದಾರೆ.

ಸಚಿವರೊಬ್ಬರು ರೈತರನ್ನು ಕೊಂದಿದ್ದಾರೆ. ಪ್ರಧಾನಿಗೆ ಗೊತ್ತಿದೆ. 2-3 ಬಂಡವಾಳಶಾಹಿಗಳು ರೈತರ ವಿರುದ್ಧ ಎಂಬುದು ಸತ್ಯ. ಈ ಸಂಸದರನ್ನು ರಾಜ್ಯಸಭಾ ಅಧ್ಯಕ್ಷರಾಗಲಿ, ಪ್ರಧಾನಿಯಾಗಲಿ ಅಮಾನತು ಮಾಡಿಲ್ಲ ಎಂದಿದ್ದಾರೆ. 12 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ಉಭಯ ಸದನಗಳ ವಿರೋಧ ಪಕ್ಷದ ನಾಯಕರು ಸಂಸತ್ತಿನಿಂದ ವಿಜಯ್ ಚೌಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಏತನ್ಮಧ್ಯೆ, 12 ಸಂಸದರನ್ನು ಸದನದಿಂದ ಅಮಾನತುಗೊಳಿಸಿರುವುದನ್ನು ಹಿಂಪಡೆಯುವಂತೆ ಕೋರಿ ಪ್ರತಿಪಕ್ಷಗಳು ಸದನದ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ರಾಜ್ಯಸಭೆಯನ್ನು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ. 12 ಸದಸ್ಯರ ಅಮಾನತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೊದಲ ದಿನದಿಂದಲೂ ಮೇಲ್ಮನೆ ನಿರಂತರ ಮುಂದೂಡಿಕೆಗೆ ಸಾಕ್ಷಿಯಾಗಿದೆ.
ಸಿಬಿಐ ನಿರ್ದೇಶಕರ ಅಧಿಕಾರಾವಧಿ ವಿಸ್ತರಿಸುವ ಮಸೂದೆ ಮಂಡನೆ: ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಗರಿಷ್ಠ 5 ವರ್ಷಗಳವರೆಗೆ ವಿಸ್ತರಿಸುವ ಮಸೂದೆಯನ್ನು ಮಂಡಿಸಲಾಯಿತು. ಪ್ರಸ್ತುತ ಎರಡು ವರ್ಷಗಳಿವೆ. ದೆಹಲಿಯ ವಿಶೇಷ ಪೊಲೀಸ್ ಸ್ಥಾಪನೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು,ಲೋಕಸಭೆಯಲ್ಲಿ ಡಿಸೆಂಬರ್ 9ರಂದು ಮಸೂದೆಯನ್ನು ಅಂಗೀಕರಿಸಲಾಗಿತ್ತು.
ಗಡಿ ವಿವಾದಗಳನ್ನು ಹೊಂದಿರುವ ರಾಜ್ಯಗಳನ್ನು ಪಟ್ಟಿ ಮಾಡಿದ ಸರ್ಕಾರ: ಸರ್ಕಾರವು ಗಡಿ ವಿವಾದಗಳನ್ನು ಹೊಂದಿರುವ ರಾಜ್ಯಗಳ ಹೆಸರನ್ನು ಪಟ್ಟಿ ಮಾಡಿದೆ. ಆಂಧ್ರಪ್ರದೇಶ-ಒಡಿಶಾ, ಹರಿಯಾಣ-ಹಿಮಾಚಲಪ್ರದೇಶ, ಲಡಾಖ್- ಹಿಮಾಚಲಪ್ರದೇಶ, ಮಹಾರಾಷ್ಟ್ರ-ಕರ್ನಾಟಕ, ಅಸ್ಸಾಂ-ಅರುಣಾಚಲಪ್ರದೇಶ, ಅಸ್ಸಾಂ-ನಾಗಾಲ್ಯಾಂಡ್, ಅಸ್ಸಾಂ-ಮೆಘಾಲಯ, ಅಸ್ಸಾಂ-ಮಿಜೋರಾಂ ನಡುವೆ ಗಡಿ ವಿವಾದಗಳಿವೆ.
ಕಳೆದ 7 ವರ್ಷಗಳಲ್ಲಿ 8.81 ಲಕ್ಷ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.












Click it and Unblock the Notifications