ಭಾರತದ ಹಾಲಿನ ನದಿ ಹುಟ್ಟುವುದು ಕರ್ನಾಟಕದಲ್ಲೇ: ಬರಿಗಣ್ಣಿಗೆ ಕಾಣುವುದಿಲ್ಲ ಈ ಗುಪ್ತಗಾಮಿನಿ

ದಕ್ಷಿಣ ಭಾರತದ ರಾಜ್ಯಗಳಲ್ಲಿ ಹರಿಯುವ ನದಿಗಳಲ್ಲಿ ತನ್ನದೇ ಆದ ವಿಶಿಷ್ಟ ಹಾಗೂ ರೋಚಕ ಇತಿಹಾಸ ಹೊಂದಿರುವ ನದಿ ಎಂದರೆ ಅದು ಪಾಲಾರ್ ನದಿ. ಈ ನದಿಯನ್ನು 'ಭಾರತದ ಹಾಲಿನ ನದಿ' (Milk River of India) ಎಂದು ಕರೆಯುತ್ತಾರೆ. ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ಈ ನದಿ ಹರಿಯುತ್ತದೆ. ಅಂದರೆ ಕರ್ನಾಟಕದಲ್ಲಿ ಹುಟ್ಟಿ ಬೇರೆ ಎರಡು ರಾಜ್ಯಗಳ ಮೂಲಕ ಹರಿಯುತ್ತದೆ.

ಬರೀ ಕಾವ್ಯಾತ್ಮಕ ಕಾರಣಗಳಿಂದ ಈ ನದಿಯನ್ನು ಹಾಲಿನ ನದಿ ಎಂದು ಕರೆಯುವುದಿಲ್ಲ. ಬದಲಿಗೆ ಇದರ ಹಿಂದೆ ಅತ್ಯಂತ ರೋಚಕವಾದ ವೈಜ್ಞಾನಿಕ ಮತ್ತು ಭೌಗೋಳಿಕ ಸತ್ಯಗಳಿವೆ.

Indias Milk River

ಚಿಕ್ಕಬಳ್ಳಾಪುರದಿಂದ ತಮಿಳುನಾಡಿನ ಸಮುದ್ರದವರೆಗೆ:

ತಮಿಳು ಭಾಷೆಯ 'ಪಾಲ್' (ಹಾಲು) ಮತ್ತು 'ಆರು' (ನದಿ) ಎಂಬ ಪದಗಳಿಂದ 'ಪಾಲಾರ್' ಎಂಬ ಹೆಸರು ಈ ನದಿಗೆ ಬಂದಿದೆ.ಈ ನದಿಯು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿ ಬೆಟ್ಟದಲ್ಲಿ ಹುಟ್ಟುತ್ತದೆ. ಇಲ್ಲಿಂದ ಸುಮಾರು 348 ಕಿಲೋಮೀಟರ್‌ಗಳಷ್ಟು ದೂರ ಪ್ರವಹಿಸುವ ಈ ನದಿ, ಅಂತಿಮವಾಗಿ ತಮಿಳುನಾಡಿನ ಕಲ್ಪಾಕ್ಕಂ ಸಮೀಪದ ವಾಯಲೂರ್ ಎಂಬಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಹಿಮ್ಮುಖವಾಗಿ ಹರಿಯುತ್ತಾಳೆ ನರ್ಮದೆ : ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಪಶ್ಚಿಮಕ್ಕೆ ಪ್ರವಹಿಸುವ ಹಿಂದಿನ ಕಾರಣ?
ಹಿಮ್ಮುಖವಾಗಿ ಹರಿಯುತ್ತಾಳೆ ನರ್ಮದೆ : ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಪಶ್ಚಿಮಕ್ಕೆ ಪ್ರವಹಿಸುವ ಹಿಂದಿನ ಕಾರಣ?

ಮೂರು ರಾಜ್ಯಗಳಲ್ಲಿ ಹರಿಯುವ ನೀರು:

ಉಗಮ ಸ್ಥಾನವಾದ ಕರ್ನಾಟಕದಲ್ಲಿ ನದಿಯು ಸುಮಾರು 93 ಕಿ.ಮೀ ಹರಿಯುತ್ತದೆ.ಅತ್ಯಂತ ಕಡಿಮೆ ಅಂದರೆ ಕೇವಲ 33 ಕಿ.ಮೀ ಭಾಗ ಆಂಧ್ರಪ್ರದೇಶದ ಮೂಲಕ ಹಾದುಹೋಗುತ್ತದೆ. ಇನ್ನು ಸಿಂಹಪಾಲು ಎನ್ನಬಹುದಾದ 222 ಕಿ.ಮೀ ನಷ್ಟು ಸುದೀರ್ಘ ದೂರವನ್ನು ತಮಿಳುನಾಡಿನ ವೆಲ್ಲೂರು, ರಾಣಿಪೇಟೆ ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ಕ್ರಮಿಸುತ್ತದೆ.

ಹಾಲಿನ ನದಿ ಎಂದು ಕರೆಯುವ ಕಾರಣ:

ಈ ನದಿಯನ್ನು ಸುಮ್ಮನೆ ಹಾಲಿನ ನದಿ ಎಂದು ಕರೆಯುವುದಿಲ್ಲ. ಇದರ ಹಿಂದೆಯೂ ಒಂದು ಕಾರಣವಿದೆ. ಭೌಗೋಳಿಕ ತಜ್ಞರ ಪ್ರಕಾರ ಇದಕ್ಕೆ ನಾಲ್ಕು ಪ್ರಮುಖ ಕಾರಣಗಳಿವೆ. ಬಿಳಿ ಕ್ವಾರ್ಟ್ಸ್ ಮರಳು: ಪಾಲಾರ್ ನದಿಯು ಹಾದುಹೋಗುವ ದಾರಿಯಲ್ಲಿ ಕ್ವಾರ್ಟ್ಸ್ ಮತ್ತು ಫೆಲ್ಡ್‌ಸ್ಪಾರ್ ಖನಿಜಯುಕ್ತ ಬಂಡೆಗಳು ಹೆಚ್ಚಾಗಿವೆ. ಇವು ಸವೆದು ಬಿಳಿಯ ಬಣ್ಣದ ನುಣುಪಾದ ಮರಳಾಗಿ ರೂಪಾಂತರಗೊಳ್ಳುತ್ತವೆ. ನದಿಯಲ್ಲಿ ನೀರು ಹರಿಯುವಾಗ ಅಥವಾ ಬಿಸಿಲು ಈ ಬಿಳಿ ಮರಳಿನ ತಳಕ್ಕೆ ಬಿದ್ದಾಗ ಇಡೀ ನದಿಯೇ ಹಾಲಿನಂತೆ ಬಿಳಿಯಾಗಿ ಗೋಚರಿಸುತ್ತದೆ.

ಗುಪ್ತಗಾಮಿನಿ: ಈ ನದಿಯ ಬಹುದೊಡ್ಡ ವೈಶಿಷ್ಟ್ಯವೆಂದರೆ ಇದು ಮೇಲ್ಮೈಗಿಂತ ಹೆಚ್ಚಾಗಿ ಮರಳಿನ ಆಳದ ಪದರಗಳಲ್ಲಿ 'ಗುಪ್ತಗಾಮಿನಿ'ಯಾಗಿ ಹರಿಯುತ್ತದೆ. ಅಂದರೆ ಬರಿಗಣ್ಣಿಗೆ ಇದು ಕಾಣುವುದಿಲ್ಲ. ಮುಂಗಾರಿನ ಅವಧಿಯಲ್ಲಿ ಅಥವಾ ನೈಸರ್ಗಿಕ ಬುಗ್ಗೆಗಳ ಮೂಲಕ ನೀರು ಹಠಾತ್ತನೆ ಬಿಳಿ ಮರಳಿನಿಂದ ಮೇಲಕ್ಕೆ ಚಿಮ್ಮಿದಾಗ, ಹಾಲು ಉಕ್ಕಿ ಬಂದಂತೆ ನೊರೆ ನೊರೆಯಾಗಿ ಕಾಣುತ್ತದೆ.

ಮಂಗಳ ಗ್ರಹದಲ್ಲಿ ಅಮೆಜಾನ್, ಗಂಗಾ ನದಿಯಂತಹ ಬೃಹತ್ ನದಿ ವ್ಯವಸ್ಥೆ:ವಿಜ್ಞಾನಿಗಳ ನಕ್ಷೆ ಮೂಲಕ ಸಾಬೀತು
ಮಂಗಳ ಗ್ರಹದಲ್ಲಿ ಅಮೆಜಾನ್, ಗಂಗಾ ನದಿಯಂತಹ ಬೃಹತ್ ನದಿ ವ್ಯವಸ್ಥೆ:ವಿಜ್ಞಾನಿಗಳ ನಕ್ಷೆ ಮೂಲಕ ಸಾಬೀತು

ಹೆಚ್ಚಿನ ಕ್ಯಾಲ್ಸಿಯಂ ಮತ್ತು ಸಿಹಿನೀರು: ಕರ್ನಾಟಕ ಮತ್ತು ತಮಿಳುನಾಡಿನ ಸುಣ್ಣದ ಕಲ್ಲು ಹಾಗೂ ಸಮೃದ್ಧ ಖನಿಜಾಂಶಗಳಿರುವ ಪ್ರದೇಶದಲ್ಲಿ ಈ ನದಿ ಹರಿಯುವುದರಿಂದ, ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ಹಿಂದಿನ ಕಾಲದಲ್ಲಿ ಜನರು ಈ ನೀರನ್ನು ಅತ್ಯಂತ ಸ್ವಚ್ಛ ಹಾಗೂ ಹಾಲಿನಷ್ಟೇ ಸಿಹಿಯಾದ ನೀರು ಎಂದು ಕರೆಯುತ್ತಿದ್ದರು.

ಜೀವ ನಾಡಿ: ತಾಯಿಯ ಹಾಲು ಮಗುವಿಗೆ ಹೇಗೆ ಮೊದಲ ಆಹಾರವೋ, ಹಾಗೆಯೇ ತಮಿಳುನಾಡಿನ ಅತ್ಯಂತ ಒಣ ಪ್ರದೇಶಗಳಾದ ವೆಲ್ಲೂರು ಮತ್ತು ಕಾಂಚೀಪುರಂ ಜಿಲ್ಲೆಗಳಿಗೆ ಪಾಲಾರ್ ನದಿಯೇ ಜೀವನಾಡಿ. ಕುಡಿಯುವ ನೀರು ಹಾಗೂ ಕೃಷಿಗೆ ಇದು ಮುಖ್ಯ ಆಧಾರವಾಗಿರುವುದರಿಂದ ಇದನ್ನು ಪ್ರೀತಿಯಿಂದ 'ಹಾಲಿನ ನದಿ' ಎನ್ನಲಾಗುತ್ತದೆ.

ಪಾಲಾರ್ ನದಿಯ ಬಗೆಗಿನ 7 ರೋಚಕ ಸಂಗತಿಗಳು:

ಕೆ.ಜಿ.ಎಫ್ ನ ಜೀವನಾಡಿ: ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಆಳದ ಚಿನ್ನದ ಗಣಿಗಳಲ್ಲಿ ಒಂದಾಗಿದ್ದ ಕೋಲಾರದ ಚಿನ್ನದ ಗಣಿಗೆ ಈ ಪಾಲಾರ್ ನದಿಯೇ ಪ್ರಮುಖ ನೀರಿನ ಮೂಲವಾಗಿತ್ತು.

ಅಪರೂಪದ ತಳಹದಿ: ಈ ನದಿಯ ಪಾತ್ರದಲ್ಲಿ 'ಆರ್ಕೋಸ್' ನಂತಹ ರಾಸಾಯನಿಕವಾಗಿ ಇನ್ನೂ ಪಕ್ವವಾಗದ ಸೆಡಿಮೆಂಟ್ಸ್ ಕಂಡುಬರುತ್ತವೆ. ಅಂದರೆ ಇಲ್ಲಿನ ಬಂಡೆಗಳು ರಾಸಾಯನಿಕವಾಗಿ ಕರಗದೆ, ಕೇವಲ ಭೌತಿಕವಾಗಿ ಒಡೆದು ಮರಳಾಗಿವೆ. ದಕ್ಷಿಣ ಭಾರತದ ನದಿಗಳಲ್ಲಿ ಇದು ಅತ್ಯಂತ ಅಪರೂಪ.

ಕಾವೇರಿ ನದಿಯ ಹಳೇ ದಾರಿ?: ಸಹಸ್ರಾರು ವರ್ಷಗಳ ಹಿಂದೆ ಸಂಭವಿಸಿದ ಭೂಫಲಕಗಳ ಚಲನೆಯಿಂದಾಗಿ ಕಾವೇರಿ ನದಿಯು ತನ್ನ ಹಾದಿ ಬದಲಿಸಿತು. ಅದಕ್ಕೂ ಮುನ್ನ ಪಾಲಾರ್ ನದಿಯೇ ಕಾವೇರಿಯ ಪ್ರಾಚೀನ ಹರಿವಿನ ಹಾದಿಯಾಗಿತ್ತು ಎನ್ನುವುದು ಕೆಲವು ಭೂವಿಜ್ಞಾನಿಗಳ ವಾದ.

ಉಪನದಿಗಳೇ ಇಲ್ಲ: ಇಷ್ಟು ಉದ್ದದ ನದಿಯಾಗಿದ್ದರೂ ಪಾಲಾರ್‌ಗೆ ಪ್ರಮುಖ ಉಪನದಿಗಳು ತೀರಾ ಕಡಿಮೆ. ಮುಂಗಾರು ಮಳೆಯ ನೀರೇ ಇದರ ಪ್ರಮುಖ ಶಕ್ತಿ.

ನೈಸರ್ಗಿಕ ಸ್ಪಂಜ್: ನದಿಯ ತುಂಬೆಲ್ಲಾ ದಟ್ಟವಾದ ಮರಳಿನ ಪದರ ಇರುವುದರಿಂದ, ಇದು ಭಾರೀ ಪ್ರಮಾಣದ ನೀರನ್ನು ಹೀರಿಕೊಂಡು ತನ್ನ ಎರಡೂ ದಂಡೆಗಳ ಮೈಲುಗಟ್ಟಲೆ ಪ್ರದೇಶದ ಅಂತರ್ಜಲ ಮಟ್ಟವನ್ನು ಸದಾ ಕಾಯ್ದುಕೊಳ್ಳುತ್ತದೆ.

ಐತಿಹಾಸಿಕ ಒಪ್ಪಂದ: ಈ ನದಿಯ ನೀರು ಹಂಚಿಕೆಗೆ ಸಂಬಂಧಿಸಿದಂತೆ 1892 ರಲ್ಲೇ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ನಡುವೆ ಐತಿಹಾಸಿಕ ಒಪ್ಪಂದವಾಗಿದ್ದು, ಇಂದಿಗೂ ಇದು ಮೂರೂ ರಾಜ್ಯಗಳ ನಡುವಿನ ಪ್ರಮುಖ ಕಾನೂನು ದಾಖಲೆಯಾಗಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+