ಮಂಗಳ ಗ್ರಹದಲ್ಲಿ ಅಮೆಜಾನ್, ಗಂಗಾ ನದಿಯಂತಹ ಬೃಹತ್ ನದಿ ವ್ಯವಸ್ಥೆ:ವಿಜ್ಞಾನಿಗಳ ನಕ್ಷೆ ಮೂಲಕ ಸಾಬೀತು
ವಿಜ್ಞಾನ ಲೋಕದಲ್ಲಿ ಅತ್ಯಂತ ಮಹತ್ವದ ಸಂಶೋಧನೆಯೊಂದು ಹೊರಬಿದ್ದಿದೆ. ಕೆಂಪು ಗ್ರಹ ಎಂದೇ ಕರೆಯಲ್ಪಡುವ ಮಂಗಳ ಗ್ರಹದಲ್ಲಿ ಒಂದು ಕಾಲದಲ್ಲಿ ನದಿ ಹರಿಯುತ್ತಿತ್ತು ಎನ್ನುವುದು ಬೆಳಕಿಗೆ ಬಂದಿದೆ. ಭೂಮಿಯ ಮೇಲಿನ ಗಂಗಾ ಮತ್ತು ಅಮೆಜಾನ್ ನದಿಗಳಷ್ಟೇ ಬೃಹತ್ ಪ್ರಮಾಣದ, ಪರಸ್ಪರ ಸಂಪರ್ಕ ಹೊಂದಿದ್ದ ನದಿ ವ್ಯವಸ್ಥೆಗಳು ಮಂಗಳನ ಅಂಗಳದಲ್ಲಿ ಕೂಡಾ ಇದ್ದವು. ವಿಜ್ಞಾನಿಗಳು ಮೊದಲ ಬಾರಿಗೆ ಮ್ಯಾಪಿಣಗ್ ಮೂಲಕ ಈ ವಿಚಾರವನ್ನು ಸಾಬೀತುಪಡಿಸಿದ್ದಾರೆ.
ಯುನಿವರ್ಸಿಟಿ ಆಫ್ ಟೆಕ್ಸಾಸ್‌ನ ಸಂಶೋಧಕರು ನಡೆಸಿರುವ ಈ ಮಹತ್ವದ ಅಧ್ಯಯನವು ಪ್ರಸಿದ್ಧ 'ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್' ಜರ್ನಲ್‌ನಲ್ಲಿ ಪ್ರಕಟವಾಗಿದೆ. ಈ ಸಂಶೋಧನೆಯು ಮಂಗಳ ಗ್ರಹದಲ್ಲಿ ಬರೋಬ್ಬರಿ 16 ಬೃಹತ್ ನದಿ ಪಾತ್ರಗಳನ್ನು ಗುರುತಿಸಿದೆ.

ಜೀವಸಂಕುಲಕ್ಕೆ ಪೂರಕವಾಗಿತ್ತು ಮಂಗಳ ಗ್ರಹ:
ವಿಜ್ಞಾನಿಗಳ ಪ್ರಕಾರ, ಕೋಟ್ಯಂತರ ವರ್ಷಗಳ ಹಿಂದೆ ಮಂಗಳ ಗ್ರಹವು ಅತ್ಯಂತ ಬೆಚ್ಚಗಿನ ಮತ್ತು ಆರ್ದ್ರತೆಯಿಂದ ಕೂಡಿತ್ತು ಎಂಬ ವಾದಕ್ಕೆ ಈ ಸಂಶೋಧನೆ ಪುಷ್ಟಿ ನೀಡಿದೆ. ಅಲ್ಲಿ ಸುರಿದ ಭಾರಿ ಮಳೆಯು ಕಣಿವೆಗಳನ್ನು ಸೃಷ್ಟಿಸಿ, ನದಿಗಳ ಮೂಲಕ ನೀರನ್ನು ಸರೋವರಗಳು ಮತ್ತು ಸಾಗರಗಳಿಗೆ ತಲುಪಿಸುತ್ತಿತ್ತು ಎನ್ನಲಾಗಿದೆ.
"ಭೂಮಿಯ ಮೇಲಿನ ಇಂತಹ ನದಿ ಪಾತ್ರಗಳು ಜೀವವೈವಿಧ್ಯತೆಯಿಂದ ಕೂಡಿರುತ್ತವೆ. ಒಂದು ವೇಳೆ ಇದೇ ರೀತಿಯ ವಾತಾವರಣ ಮಂಗಳ ಗ್ರಹದಲ್ಲೂ ಇದ್ದಿದ್ದರೆ, ಅಲ್ಲಿ ಸೂಕ್ಷ್ಮಜೀವಿಗಳು ಬದುಕಲು ಸಾಧ್ಯವಿತ್ತು ಎನ್ನುವುದು ವಿಜ್ಞಾನಿಗಳ ವಾದ.
ನಾಸಾ ಡೇಟಾದಿಂದ ಬಯಲಾಯ್ತು ರಹಸ್ಯ:
ನಾಸಾದ (NASA) ಮಾರ್ಸ್ ಆರ್ಬಿಟರ್ ಲೇಸರ್ ಆಲ್ಟಿಮೀಟರ್ (MOLA) ಮತ್ತು ಮಾರ್ಸ್ ರೆಕನೈಸನ್ಸ್ ಆರ್ಬಿಟರ್‌ನಲ್ಲಿರುವ ಕಾಂಟೆಕ್ಸ್ಟ್ ಕ್ಯಾಮೆರಾ (CTX) ಒದಗಿಸಿದ ದತ್ತಾಂಶಗಳನ್ನು ಬಳಸಿ ವಿಜ್ಞಾನಿಗಳು ಈ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.
ಬೃಹತ್ ನದಿ ಪಾತ್ರಗಳು: ಸಂಶೋಧನೆಯಲ್ಲಿ ಪತ್ತೆಯಾದ 19 ಜಲಮಾರ್ಗಗಳ ಪೈಕಿ 16 ನದಿ ಪಾತ್ರಗಳು ತಲಾ 1 ಲಕ್ಷ ಚದರ ಕಿಲೋಮೀಟರ್‌ಗಿಂತಲೂ ದೊಡ್ಡದಾಗಿವೆ.
ಮಣ್ಣಿನ ಸವೆತ: ಈ ನದಿಗಳು ಮಂಗಳ ಗ್ರಹದ ಕೇವಲ ಶೇ. 5 ರಷ್ಟು ಭಾಗದಲ್ಲಿದ್ದರೂ, ಗ್ರಹದ ಒಟ್ಟು ನದಿ ಸವೆತದ ಶೇ. 42 ರಷ್ಟು ಭಾಗಕ್ಕೆ ಇವೇ ಕಾರಣವಾಗಿವೆ. ಸುಮಾರು 28,000 ಕ್ಯೂಬಿಕ್ ಕಿಲೋಮೀಟರ್‌ನಷ್ಟು ಮಣ್ಣು ಈ ನದಿಗಳ ಮೂಲಕ ಹರಿದು ಹೋಗಿದೆ. ಈ ಹೂಳಿನಲ್ಲಿ ಜೀವ ರಾಶಿಗೆ ಬೇಕಾದ ಪೋಷಕಾಂಶಗಳು ಇರಬಹುದು ಎಂದು ಅಂದಾಜಿಸಲಾಗಿದೆ.
ಭೂಮಿಗೂ ಮಂಗಳನಿಗೂ ಇರುವ ವ್ಯತ್ಯಾಸ:
ಭೂಮಿಗೆ ಹೋಲಿಸಿದರೆ ಮಂಗಳ ಗ್ರಹದಲ್ಲಿ ದೊಡ್ಡ ನದಿಗಳ ಸಂಖ್ಯೆ ಕಡಿಮೆ. ಇದಕ್ಕೆ ಕಾರಣ ಭೂಮಿಯಂತೆ ಮಂಗಳ ಗ್ರಹದಲ್ಲಿ ಸಕ್ರಿಯ ಟೆಕ್ಟೋನಿಕ್ ಪ್ಲೇಟ್‌ಗಳು ಇಲ್ಲದಿರುವುದು. ಭೂಮಿಯಲ್ಲಿ ಇವು ಪರ್ವತ ಮತ್ತು ಕಣಿವೆಗಳನ್ನು ಸೃಷ್ಟಿಸಿ ದೊಡ್ಡ ನದಿಗಳ ಉಗಮಕ್ಕೆ ಕಾರಣವಾಗುತ್ತವೆ. ಭೂಮಿಯ ಮೇಲಿನ 62 ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣದ ಅಮೆಜಾನ್ ನದಿ ಪಾತ್ರ ಸೇರಿದಂತೆ ಒಟ್ಟು 91 ಪ್ರಮುಖ ನದಿ ಪಾತ್ರಗಳಿಗೆ ಹೋಲಿಸಿದರೆ ಮಂಗಳದಲ್ಲಿ ಇವುಗಳ ಸಂಖ್ಯೆ ಸೀಮಿತವಾಗಿದೆ.
ಮುಂದಿನ ಸಂಶೋಧನೆಗಳಿಗೆ ದಿಕ್ಸೂಚಿ:
ಮಂಗಳ ಗ್ರಹವು ಸುಮಾರು 450 ಕೋಟಿ ವರ್ಷಗಳ ಹಿಂದೆ ರೂಪುಗೊಂಡಿದ್ದು, 200 ಕೋಟಿ ವರ್ಷಗಳ ಹಿಂದಿನವರೆಗೂ ಅಲ್ಲಿ ನೀರು ಇತ್ತು ಎಂದು ಅಂದಾಜಿಸಲಾಗಿದೆ. ನಂತರದ ದಿನಗಳಲ್ಲಿ ಕಾಂತೀಯ ಕ್ಷೇತ್ರ ಮತ್ತು ವಾತಾವರಣದ ನಷ್ಟದಿಂದಾಗಿ ಸೂರ್ಯನ ವಿಕಿರಣಕ್ಕೆ ತುತ್ತಾಗಿ ನೀರು ಸಂಪೂರ್ಣವಾಗಿ ಬರಿದಾಗಿ ಹೋಗಿದೆ.
ಪ್ರಸ್ತುತ ಪತ್ತೆಯಾಗಿರುವ ಈ 16 ನದಿ ಪಾತ್ರಗಳು ಮುಂದಿನ ದಿನಗಳಲ್ಲಿ ಮಂಗಳ ಗ್ರಹಕ್ಕೆ ತೆರಳಲಿರುವ ರೋವರ್‌ಗಳಿಗೆ ಮತ್ತು ಪ್ರಾಚೀನ ಜೀವದ ಹುಡುಕಾಟ ನಡೆಸುವ ಸಂಶೋಧನಾ ಮಿಷನ್‌ಗಳಿಗೆ ಪ್ರಮುಖ ಕೇಂದ್ರಬಿಂದುವಾಗಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications