ಹಿಮ್ಮುಖವಾಗಿ ಹರಿಯುತ್ತಾಳೆ ನರ್ಮದೆ : ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಪಶ್ಚಿಮಕ್ಕೆ ಪ್ರವಹಿಸುವ ಹಿಂದಿನ ಕಾರಣ?

ಭಾರತದ ಪ್ರಮುಖ ನದಿಗಳು ಹಿಮಾಲಯ ಅಥವಾ ಆ ಭಾಗದ ಎತ್ತರದ ಪ್ರದೇಶಗಳಲ್ಲಿ ಹುಟ್ಟಿ ಪೂರ್ವದ ಕಡೆಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದು ಭೌಗೋಳಿಕ ನಿಯಮ. ಶಾಲಾ ದಿನಗಳಿಂದಲೂ ನಾವೆಲ್ಲರೂ ಇದನ್ನೇ ಓದಿಕೊಂಡು ಬಂದಿರುವುದು. ಆದರೆ, ಈ ಸಾಂಪ್ರದಾಯಿಕ ನಿಯಮಕ್ಕೆ ಸೆಡ್ಡು ಹೊಡೆದು ಉಲ್ಟಾ ಪ್ರವಹಿಸುವ ನದಿಯೊಂದಿದೆ. ಅದು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಅಂದರೆ ಪಶ್ಚಿಮದ ಕಡೆಗೆ ಹರಿಯುತ್ತದೆ. ಈ ಮೂಲಕ ಭೌಗೋಳಿಕ ವಿಸ್ಮಯವಾಗಿ ಎದ್ದು ಕಾಣುತ್ತದೆ.

ನರ್ಮದಾ ನದಿ ಸುಮಾರು 1,310 ಕಿಲೋಮೀಟರ್ ಉದ್ದವಿದ್ದು, ಭಾರತದ 5ನೇ ಅತಿ ದೊಡ್ಡ ನದಿಯಾಗಿದೆ. ನರ್ಮದೆ ಗಂಗಾ ಅಥವಾ ಗೋದಾವರಿಯಂತೆ ಪೂರ್ವಕ್ಕೆ ಹರಿಯುವುದಿಲ್ಲ. ಬದಲಿಗೆ ಇದು ಪಶ್ಚಿಮದ ಕಡೆಗೆ ಮುಖ ಮಾಡಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಭಾರತದಲ್ಲಿ ಹೀಗೆ ಪಶ್ಚಿಮಕ್ಕೆ ಹರಿಯುವ ಕೆಲವೇ ಕೆಲವು ನದಿಗಳಲ್ಲಿ ನರ್ಮದಾ ಪ್ರಮುಖವಾಗಿವೆ. ಸುತ್ತಮುತ್ತಲಿನ ಉಳಿದೆಲ್ಲಾ ನದಿಗಳು ಪೂರ್ವಕ್ಕೆ ಹರಿಯುವುದರಿಂದ, ನರ್ಮದಾ ನದಿ 'ಉಲ್ಟಾ' ಹರಿಯುತ್ತದೆ ಎಂದೇ ಹೇಳಲಾಗುತ್ತದೆ.

Why Does the Narmada River Flow West

ನರ್ಮದಾ ನದಿಯ ಉಗಮ ಮತ್ತು ಹರಿವು:

ಈ ನದಿ ಮಧ್ಯಪ್ರದೇಶದ ಅಮರಕಂಟಕದಲ್ಲಿ ಹುಟ್ಟುತ್ತದೆ. ಅಲ್ಲಿಂದ ಪಶ್ಚಿಮದ ಕಡೆಗೆ ತನ್ನ ಹರಿವು ಆರಂಭಿಸುವ ನರ್ಮದಾ; ಮಧ್ಯಪ್ರದೇಶ, ಮಹಾರಾಷ್ಟ್ರದ ಕೆಲ ಭಾಗ ಹಾಗೂ ಗುಜರಾತ್ ರಾಜ್ಯಗಳ ಮೂಲಕ ಹಾದು ಹೋಗಿ, ಕೊನೆಗೆ ಭರೂಚ್ ಬಳಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಈ ದಾರಿಯುದ್ದಕ್ಕೂ ನದಿಯು ಕಿರಿದಾದ ಕಣಿವೆಗಳು, ಬೆಟ್ಟಗಳು ಹಾಗೂ ವಿಶಾಲವಾದ ಮೈದಾನ ಪ್ರದೇಶಗಳನ್ನು ದಾಟುತ್ತಾ ಸಾಗುತ್ತದೆ.

ನರ್ಮದೆ ಪಶ್ಚಿಮಾಭಿಮುಖವಾಗಲು ಕಾರಣವೇನು?:

ನರ್ಮದಾ ನದಿ ಹೀಗೆ ವಿರುದ್ಧ ದಿಕ್ಕಿನಲ್ಲಿ ಹರಿಯಲು ಯಾವುದೇ ಪವಾಡ ಕಾರಣವಲ್ಲ.ಬದಲಿಗೆ ಕೋಟ್ಯಂತರ ವರ್ಷಗಳ ಹಿಂದಿನ ಭೌಗೋಳಿಕ ಬದಲಾವಣೆ ಇದರ ಮೂಲ.

ಖಂಡ ಸೀಳು ಕಣಿವೆ : ಪ್ರಾಚೀನ ಟೆಕ್ಟಾನಿಕ್ ಚಟುವಟಿಕೆಗಳಿಂದಾಗಿ ಇಲ್ಲಿ ಒಂದು ಸೀಳು ಕಣಿವೆ ನಿರ್ಮಾಣವಾಗಿದೆ.ಈ ಕಣಿವೆಯು ಪೂರ್ವದಿಂದ ಪಶ್ಚಿಮದ ಕಡೆಗೆ ಇಳಿಜಾರಾಗಿದೆ. ನದಿಯ ನೀರು ಈ ಸ್ವಾಭಾವಿಕ ಇಳಿಜಾರನ್ನೇ ಅನುಸರಿಸುತ್ತದೆ.

ಪರ್ವತ ಶ್ರೇಣಿಗಳು: ಈ ನದಿಯ ಉತ್ತರಕ್ಕೆ ವಿಂಧ್ಯ ಪರ್ವತ ಶ್ರೇಣಿ ಹಾಗೂ ದಕ್ಷಿಣಕ್ಕೆ ಸತ್ಪುರ ಪರ್ವತ ಶ್ರೇಣಿಗಳಿವೆ. ನರ್ಮದೆ ಕಣಿವೆಯ ಮಧ್ಯೆ ಹರಿಯುವುದರಿಂದಲೇ ಈ ನದಿಯು ಮುಖಜ ಭೂಮಿಯನ್ನು ಸೃಷ್ಟಿಸದೆ, ಸಮುದ್ರ ಸೇರುವ ಮುನ್ನ ಕರಾವಳಿ ಮುಖಜವನ್ನು ನಿರ್ಮಿಸುತ್ತದೆ.

ಭಾರತದಲ್ಲಿರುವ ಅಪರೂಪದ ಪುರುಷ ನದಿ ಇದೇ! ಬ್ರಹ್ಮಪುತ್ರದ 5 ಅಚ್ಚರಿಯ ಸಂಗತಿಗಳು
ಭಾರತದಲ್ಲಿರುವ ಅಪರೂಪದ ಪುರುಷ ನದಿ ಇದೇ! ಬ್ರಹ್ಮಪುತ್ರದ 5 ಅಚ್ಚರಿಯ ಸಂಗತಿಗಳು

ಕೃಷಿ ಮತ್ತು ಜಲಾನಯನ ಪ್ರದೇಶ:

ನದಿಯ ಮೇಲ್ಭಾಗದ ಪ್ರದೇಶಗಳು ಬೆಟ್ಟ ಹಾಗೂ ಕಾಡುಗಳಿಂದ ಆವೃತವಾಗಿದೆ. ಇಲ್ಲಿ ನೆಲೆಸಿರುವ ಜನಸಂಖ್ಯೆ ಕೂಡಾ ಕಡಿಮೆ. ಆದರೆ ಪಶ್ಚಿಮದ ಕಡೆಗೆ ಸಾಗುತ್ತಿದ್ದಂತೆ ಬಯಲು ಸೀಮೆ ಆರಂಭವಾಗುತ್ತದೆ. ಈ ಫಲವತ್ತಾದ ಮೈದಾನಗಳಲ್ಲಿ ಗೋಧಿ, ಧಾನ್ಯಗಳು ಹಾಗೂ ಹತ್ತಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಕುಡಿಯುವ ನೀರು ಮತ್ತು ಕೃಷಿಗಾಗಿ ಕೋಟ್ಯಂತರ ಜನರು ಈ ನದಿಯನ್ನೇ ಅವಲಂಬಿಸಿದ್ದಾರೆ.

ಬೃಹತ್ ಅಣೆಕಟ್ಟುಗಳು ಮತ್ತು ಅಭಿವೃದ್ಧಿ:

ನರ್ಮದಾ ನದಿಗೆ ಹಲವು ಪ್ರಮುಖ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಗುಜರಾತ್‌ನಲ್ಲಿರುವ ವಿಶ್ವಪ್ರಸಿದ್ಧ ಸರ್ದಾರ್ ಸರೋವರ್ ಅಣೆಕಟ್ಟು ಇವುಗಳಲ್ಲಿ ಪ್ರಮುಖವಾದದ್ದು. ಇದರೊಂದಿಗೆ ಮಧ್ಯಪ್ರದೇಶದ ಇಂದಿರಾ ಸಾಗರ್ ಮತ್ತು ಓಂಕಾರೇಶ್ವರ ಅಣೆಕಟ್ಟುಗಳು ಪ್ರಮುಖವಾಗಿವೆ.

ಪ್ರವಾಸಿ ತಾಣಗಳು ಮತ್ತು ನೈಸರ್ಗಿಕ ಸೌಂದರ್ಯ:

ಜಬಲ್‌ಪುರ ಬಳಿ ನರ್ಮದಾ ನದಿಯು ಸುಣ್ಣದ ಕಲ್ಲುಗಳ ಮಧ್ಯೆ ಹರಿಯುವ 'ಮಾರ್ಬಲ್ ರಾಕ್ಸ್' ನೋಡುಗರ ಕಣ್ಣು ಸೆಳೆಯುತ್ತದೆ. ಇದರೊಂದಿಗೆ ಧುವಾಂಧಾರ್ ಜಲಪಾತವು ಮಳೆಗಾಲದಲ್ಲಿ ಭೋರ್ಗರೆಯುತ್ತಾ ಧುಮ್ಮಿಕ್ಕುವ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾರತದ ಈ ಮೂರು ನದಿಗಳಲ್ಲಿ ನೀರಿನೊಂದಿಗೆ ಹರಿಯುತ್ತದೆ ಚಿನ್ನ!
ಭಾರತದ ಈ ಮೂರು ನದಿಗಳಲ್ಲಿ ನೀರಿನೊಂದಿಗೆ ಹರಿಯುತ್ತದೆ ಚಿನ್ನ!

ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವ:

ಭಾರತೀಯ ಸಂಸ್ಕೃತಿಯಲ್ಲಿ ನರ್ಮದಾ ಕೇವಲ ನದಿಯಲ್ಲ, ಆಕೆ ಜೀವಂತ ದೈವ ಸ್ವರೂಪಿಣಿ. ಮಹೇಶ್ವರ, ಓಂಕಾರೇಶ್ವರ ಮತ್ತು ಅಮರಕಂಟಕ ದೇವಾಲಯಗಳಿಗೆ ವರ್ಷಪೂರ್ತಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ನದಿಯ ತಟದ ಮೂಲಕವೇ ಸಾಗುವ ಸುದೀರ್ಘ ಪಾದಯಾತ್ರೆ 'ನರ್ಮದಾ ಪರಿಕ್ರಮ' ಅತ್ಯಂತ ಪವಿತ್ರ ಧಾರ್ಮಿಕ ಆಚರಣೆಯಾಗಿದೆ. ತಲೆಮಾರುಗಳಿಂದಲೂ ಈ ನದಿ ಭಾರತದ ನಂಬಿಕೆ, ಬದುಕು ಮತ್ತು ಸಂಸ್ಕೃತಿಯನ್ನು ಪೋಷಿಸುತ್ತಾ ಬಂದಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+