ವಿಪರೀತ ಬಂದ ಕರೆಂಟ್ ಬಿಲ್ ನೀಡಿದ ಸುಳಿವು: ಮನೆಯೊಳಗೆ ಪತ್ತೆಯಾಯಿತು 300ಕ್ಕೂ ಹೆಚ್ಚು ಹೆಬ್ಬಾವು
2024ರ ಮಾರ್ಚ್ ತಿಂಗಳಲ್ಲಿ ಸ್ಥಳೀಯ ವೃದ್ಧರೊಬ್ಬರು ಬೆಟ್ಟದ ತಪ್ಪಲಿನಲ್ಲಿ ಬೃಹತ್ ಹೆಬ್ಬಾವೊಂದನ್ನು ಪತ್ತೆಹಚ್ಚಿದ್ದರು. ಸಾಮಾನ್ಯವಾಗಿ ಆ ಹವಾಮಾನದಲ್ಲಿ ಹಾಗೂ ಆ ಪ್ರದೇಶದಲ್ಲಿ ಇಂತಹ ಹಾವುಗಳು ಕಾಣಿಸಿಕೊಳ್ಳುವುದು ಅಪರೂಪವಾಗಿತ್ತು. ಆಗಲೇ ಶುರುವಾಗಿದ್ದು ಈ ಹಾವು ಯಾವುದೋ ಮನೆಯಿಂದ ತಪ್ಪಿಸಿಕೊಂಡು ಬಂದಿರಬೇಕು ಎನ್ನುವ ಅನುಮಾನ. ಅದರಂತೆ ಈ ಅನುಮಾನದ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದರು. ಬೆಟ್ಟದ ತಪ್ಪಲಿನಲ್ಲಿ ಸಿಕ್ಕ ಸಣ್ಣ ಸುಳಿವನ್ನು ಬೆನ್ನಟ್ಟಿದ ಪೊಲೀಸರಿಗೆ ದೊಡ್ಡ ಜಾಲವೇ ಪತ್ತೆಯಾಗಿದೆ.
ಅತಿಯಾದ ಕರೆಂಟ್ ಬಿಲ್ ಕೊಟ್ಟ ಸುಳಿವು:
ಹಾವುಗಳು ಎಲ್ಲಿಂದ ಬಂದಿರಬಹುದು ಎನ್ನುವುದನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಅಷ್ಟು ಸುಲಭವಾಗಿರಲಿಲ್ಲ. ಅದು ಹಲವು ಸವಾಲುಗಳಿಂದ ಕೂಡಿತ್ತು. ಆದರೆ, ಉರಗ ತಜ್ಞರು ನೀಡಿದ ಒಂದು ಐಡಿಯಾ ಇಡೀ ಕೇಸ್‌ನ ದಿಕ್ಕನ್ನೇ ಬದಲಿಸಿತು. ಹೆಬ್ಬಾವುಗಳು ಬದುಕಲು ಮತ್ತು ಸಂತಾನೋತ್ಪತ್ತಿ ಮಾಡಲು ನಿರಂತರವಾಗಿ ಬೆಚ್ಚಗಿನ ಹಾಗೂ ಆರ್ದ್ರತೆಯಿಂದ ಕೂಡಿರುವ ವಾತಾವರಣ ಬೇಕಾಗುತ್ತದೆ. ಈ ವಾತಾವರಣವನ್ನು ಮನೆಯಲ್ಲಿ ಒದಗಿಸಿ ಕೊಡಬೇಕಾದರೆ ಭಾರೀ ಪ್ರಮಾಣದ ವಿದ್ಯುತ್ ಬಳಕೆಯಾಗುತ್ತದೆ ಎನ್ನುವ ಅಂಶವನ್ನು ತಜ್ಞರು ತಿಳಿಸಿದ್ದಾರೆ.
ಈ ಸುಳಿವಿನ ಜಾಡಿ ಹಿಡಿದು ಪೊಲೀಸರು ಸುತ್ತಮುತ್ತಲಿನ ಮನೆಗಳ ವಿದ್ಯುತ್ ಬಿಲ್ ಪರಿಶೀಲಿಸತೊಡಗಿದ್ದಾರೆ. ಆಗ 'ಗುವೊ' ಎಂಬಾತನ ಮನೆಯ ಕರೆಂಟ್ ಬಿಲ್ ಅಸಹಜವಾಗಿ ಹೆಚ್ಚಿರುವುದು ಕಂಡುಬಂದಿದೆ.

ಬಿಳಿ ಇಲಿಗಳ ಪಾರ್ಸೆಲ್ ಮತ್ತು ಸೋಶಿಯಲ್ ಮೀಡಿಯಾ ಲಿಂಕ್:
ಪೊಲೀಸರು ಗುವೊ ಮೇಲೆ ನಿಗಾ ಇರಿಸಿದಾಗ, ಮತ್ತೊಬ್ಬ ವ್ಯಕ್ತಿ ಆತನ ಮನೆಗೆ ಪದೇ ಪದೇ ಭೇಟಿ ನೀಡುತ್ತಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ಹಾವುಗಳ ಆಹಾರವಾದ 'ಬಿಳಿ ಇಲಿಗಳ' ಪಾರ್ಸೆಲ್ ಅನ್ನು ಈ ಇಬ್ಬರು ನಿಯಮಿತವಾಗಿ ರಿಸೀವ್ ಮಾಡುತ್ತಿದ್ದರು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳ ಮಾರಾಟದ ಬಗ್ಗೆ ಇವರು ಹಾಕುತ್ತಿದ್ದ ಪೋಸ್ಟ್‌ಗಳು ಪೊಲೀಸರ ಅನುಮಾನವನ್ನು ಖಚಿತಪಡಿಸಿದವು. ಇವರಿಬ್ಬರು ರಹಸ್ಯವಾಗಿ ಎರಡು ಹೆಬ್ಬಾವುಗಳನ್ನು ಮಾರಾಟ ಮಾಡಿದ ಬೆನ್ನಲ್ಲೇ ಪೊಲೀಸರು ದಾಳಿಗೆ ಸ್ಕೆಚ್ ಹಾಕಿದರು.
ಫ್ಲ್ಯಾಟ್ ತುಂಬಾ ಹಾವುಗಳದ್ದೇ ಕಾರುಬಾರು:
ಗುವೊ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದಾಗ ಅಲ್ಲಿನ ದೃಶ್ಯ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಆತ ತನ್ನ ಮಲಗುವ ಕೋಣೆಯನ್ನು ಹೊರತುಪಡಿಸಿ, ಇಡೀ ಮನೆಯನ್ನೇ ಹಾವಿನ ಫಾರಂ ಆಗಿ ಬದಲಾಯಿಸಿದ್ದ. ರೂಮ್‌ಗಳು, ಲಿವಿಂಗ್ ಏರಿಯಾಗಳಲ್ಲಿ ಪ್ಲಾಸ್ಟಿಕ್ ಬಾಕ್ಸ್‌ಗಳನ್ನು ಒಂದರ ಮೇಲೊಂದರಂತೆ ಜೋಡಿಸಿ, ಪ್ರತಿ ಬಾಕ್ಸ್‌ನಲ್ಲೂ ಹೆಬ್ಬಾವುಗಳನ್ನು ಸಾಕಿದ್ದ. ಈ ಕಾರ್ಯಾಚರಣೆ ವೇಳೆ ಒಟ್ಟು 309 ಹೆಬ್ಬಾವುಗಳು ಪತ್ತೆಯಾಗಿದ್ದು, ಅವುಗಳನ್ನು ರಕ್ಷಿಸಿ, ಸ್ಥಳೀಯ ಮೃಗಾಲಯಕ್ಕೆ ಒಪ್ಪಿಸಲಾಗಿದೆ.
'ಹಾವುಗಳ ಬಗ್ಗೆ ವಿಪರೀತ ಕ್ರೇಜ್:
ವಿಚಾರಣೆ ವೇಳೆ ಆರೋಪಿ ಗುವೊ, ತನಗೆ ಹಾವುಗಳೆಂದರೆ ವಿಪರೀತ ಕ್ರೇಜ್ ಇರುವುದಾಗಿ ಒಪ್ಪಿಕೊಂಡಿದ್ದಾನೆ. 2014ರಲ್ಲಿ ಕೇವಲ 4 ಹೆಬ್ಬಾವುಗಳನ್ನು ಖರೀದಿಸಿ ಸಾಕಲು ಆರಂಭಿಸಿದ್ದ. ನಂತರ ತಾನೇ ಸ್ವತಃ ಬ್ರೀಡಿಂಗ್ ತಂತ್ರಗಳನ್ನು ಕಲಿತುಕೊಂಡಿದ್ದ. ವಿಭಿನ್ನ ಬಣ್ಣ ಹಾಗೂ ತಳಿಯ ಹಾವುಗಳನ್ನು ಸೃಷ್ಟಿಸುವಲ್ಲಿ ತಾನು ಎಕ್ಸ್‌ಪರ್ಟ್ ಆಗಿದ್ದು, ತನ್ನನ್ನು ತಾನು "ಹಾವುಗಳ ಸೃಷ್ಟಿಕರ್ತ" ಎಂದು ಕರೆದುಕೊಳ್ಳುವುದಕ್ಕೆ ಆರಂಭಿಸಿದ.
ಇಬ್ಬರೂ ಆರೋಪಿಗಳು ಈಗಾಗಲೇ 80ಕ್ಕೂ ಹೆಚ್ಚು ಹೆಬ್ಬಾವುಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಹತ್ತು ವರ್ಷಗಳ ಹಿಂದೆ ಇವನಿಗೆ ಹಾವುಗಳನ್ನು ತಂದು ಕೊಟ್ಟಿದ್ದ 'ಡೆಂಗ್' ಎಂಬ ಮತ್ತೊಬ್ಬ ಆರೋಪಿಯನ್ನೂ ಬಂಧಿಸಲಾಗಿದೆ. ಆತನ ಮನೆಯಲ್ಲೂ 47 ಹೆಬ್ಬಾವುಗಳು ಪತ್ತೆಯಾಗಿವೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದ ಈ ಘಟನೆ ಆಘಾತಕಾರಿಯಾಗಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications