ಬೀದಿಯಲ್ಲೇ ನವಿಲುಗರಿ ಮಾರಾಟ ಮಾಡ್ತಾರೆ, ಅದೆಲ್ಲ ಕಣ್ಣಿಗೆ ಕಾಣಲ್ವಾ? ಕಿಶನ್-ನಿವೇದಿತಾ ಬೆಂಬಲಕ್ಕೆ ನಿಂತ ಫ್ಯಾನ್ಸ್
ಸೋಷಿಯಲ್ ಮೀಡಿಯಾ ಸ್ಟಾರ್ಸ್ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ಕಿಶನ್ ಬಿಳಗಲಿ (Kishen Bilagali) ಮತ್ತು ನಿವೇದಿತಾ ಗೌಡ ಇತ್ತೀಚೆಗೆ ಮಾಡಿದ್ದ ರೀಲ್ಸ್ ದೊಡ್ಡ ಕಾನೂನು ವಿವಾದಕ್ಕೆ ಸಿಲುಕಿಕೊಂಡಿದೆ. 'ಹೇ ನವಿಲೇ...' ಎಂಬ ಜನಪ್ರಿಯ ಹಾಡಿಗೆ ನವಿಲುಗರಿಗಳನ್ನು ಹಿಡಿದು ಇವರಿಬ್ಬರು ಹೆಜ್ಜೆ ಹಾಕಿದ್ದರು. ಆದರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನವಿಲುಗರಿ ಬಳಸುವುದು ಅಪರಾಧ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿತ್ತು. ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇಬ್ಬರೂ ಆ ವಿಡಿಯೋವನ್ನು ಇನ್‌ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದರು. ಈ ಬಗ್ಗೆ ಕಿಶನ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ಜನ ಕೂಡ ನವಿಲುಗರಿ ಮಾರಾಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಅಸಲಿ ವಿಷಯ ಬಿಚ್ಚಿಟ್ಟ ಕಿಶನ್
ಈ ಇಡೀ ವಿವಾದದ ಕುರಿತು ನಟ ಕಿಶನ್ ಬಿಳಗಲಿ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದು, ತಮಗೆ ಅರಣ್ಯ ಇಲಾಖೆಯಿಂದ ನೋಟಿಸ್ ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ. "ನಾವು ಚಿಕ್ಕಂದಿನಿಂದಲೂ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಲ್ಲಿ, ಕೃಷ್ಣ ಜನ್ಮಾಷ್ಟಮಿ ಹಬ್ಬದ ಆಚರಣೆಗಳಲ್ಲಿ ನವಿಲುಗರಿ ಬಳಸುವುದನ್ನು ನೋಡಿಕೊಂಡು ಬಂದಿದ್ದೇವೆ. ದರ್ಗಾಗಳಲ್ಲಿ ಆಶೀರ್ವಾದ ಮಾಡಲು ಸಹ ನವಿಲುಗರಿಗಳನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಾರ್ಯಕ್ರಮಗಳಿಗಾಗಿ ನವಿಲುಗರಿಗಳನ್ನು ಬಾಡಿಗೆಗೆ ತರುವ ಅಭ್ಯಾಸವೂ ಇದೆ. ನಾವು ಕೂಡ ಈ ವಿಡಿಯೋಗಾಗಿ ನವಿಲುಗರಿಗಳನ್ನು ಬಾಡಿಗೆಗೆ ತಂದಿದ್ದೆವು. ಇದು ಇಡೀ ತಂಡ ಸೇರಿ ಮಾಡಿದ ಕೆಲಸ" ಎಂದು ಕಿಶನ್ ವಿವರಿಸಿದ್ದಾರೆ.

ಗೊತ್ತಿಲ್ಲದೆ ತಪ್ಪಾಗಿದೆ, ಕ್ಷಮಿಸಿ
"ಹಾಗಂತ ನಾನು ಮಾಡಿದ್ದು ಸರಿ ಎಂದು ವಾದಿಸುತ್ತಿಲ್ಲ. ಕಾನೂನಿನ ಪ್ರಕಾರ ಇದು ತಪ್ಪು ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ ಬಳಿಕವೇ ನಮಗೂ ಮನವರಿಕೆಯಾಯಿತು. ನವಿಲುಗರಿಯನ್ನು ಬಾಡಿಗೆಗೆ ಪಡೆಯುವುದು ಕೂಡ ಕಾನೂನುಬಾಹಿರ ಅಪರಾಧ ಎಂಬ ವಿಷಯ ನಮಗೆ ತಿಳಿದಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನ ನಮ್ಮನ್ನು ಫಾಲೋ ಮಾಡುವುದರಿಂದ, ಅವರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ತಕ್ಷಣವೇ ವಿಡಿಯೋ ಡಿಲೀಟ್ ಮಾಡಿದ್ದೇವೆ. ಸಾರ್ವಜನಿಕರು ಸಹ ಇನ್ಮುಂದೆ ಮಕ್ಕಳ ಕಾರ್ಯಕ್ರಮಗಳಿಗೆ ನವಿಲುಗರಿ ಬಳಸುವಾಗ ಎಚ್ಚರಿಕೆಯಿಂದ ಇರಿ. ನನ್ನಿಂದ ತಿಳಿಯದೇ ಆಗಿರುವ ಈ ತಪ್ಪಿಗೆ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ" ಎಂದಿದ್ದಾರೆ ಕಿಶನ್.
ಕಿಶನ್ ಬೆಂಬಲಕ್ಕೆ ನಿಂತ ಫ್ಯಾನ್ಸ್
ಕಿಶನ್ ಅವರ ಈ ಕ್ಷಮೆಯಾಚನೆ ವಿಡಿಯೋ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅವರ ಬೆಂಬಲಕ್ಕೆ ಜನ ನಿಂತಿದ್ದಾರೆ. ಅರಣ್ಯ ಇಲಾಖೆಯ ದ್ವಂದ್ವ ನಿಲುವನ್ನು ನೆಟ್ಟಿಗರು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ. "ಬೆಂಗಳೂರಿನ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಸಿಗ್ನಲ್‌ಗಳು ಹಾಗೂ ಪ್ರಮುಖ ರಸ್ತೆಗಳ ಬದಿಯಲ್ಲೇ ಇವತ್ತಿಗೂ ನವಿಲುಗರಿಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತದೆ. ಪ್ರತಿದಿನ ನೂರಾರು ಜನ ಇದನ್ನು ಕಣ್ಣಾರೆ ನೋಡುತ್ತಾರೆ. ರಸ್ತೆಯಲ್ಲಿ ನಿಂತು ನವಿಲುಗರಿ ಮಾರುವವರ ಮೇಲೆ ಅರಣ್ಯ ಇಲಾಖೆಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲವೇ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಯಾವುದೋ ಒಂದು ವಿಡಿಯೋಗಾಗಿ ಬಾಡಿಗೆಗೆ ತಂದು ಡ್ಯಾನ್ಸ್ ಮಾಡಿದ್ದನ್ನೇ ಇಷ್ಟು ದೊಡ್ಡ ಅಪರಾಧ ಎಂಬಂತೆ ಬಿಂಬಿಸುತ್ತಿರುವುದು ನಿಜಕ್ಕೂ ವಿಪರ್ಯಾಸ" ಎಂದು ಕಿಶನ್ ಪರವಾಗಿ ಅಭಿಮಾನಿಗಳು ಕಮೆಂಟ್ಸ್ ಮೂಲಕ ಬೆಂಬಲಕ್ಕೆ ನಿಂತಿದ್ದಾರೆ. ಸೆಲೆಬ್ರಿಟಿಗಳ ಮೇಲೆ ಮಾತ್ರ ತಕ್ಷಣ ಕ್ರಮ ಕೈಗೊಳ್ಳುವ ಅಧಿಕಾರಿಗಳು, ಬೀದಿಗಳಲ್ಲಿ ರಾಜಾರೋಷವಾಗಿ ನವಿಲುಗರಿ ಮಾರಾಟ ಮಾಡುವ ಜಾಲವನ್ನು ಯಾಕೆ ಇನ್ನು ಪತ್ತೆ ಹಚ್ಚಿಲ್ಲ? ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.













Click it and Unblock the Notifications