ಮಾವು ಹಣ್ಣುಗಳ ರಾಜನಾದ್ರೆ, ರಾಣಿ ಪಟ್ಟ ಯಾವ ಹಣ್ಣಿಗೆ? ಇಲ್ಲಿದೆ ಉತ್ತರ
ಬೇಸಿಗೆ ಬಂತೆಂದರೆ ಸಾಕು ಘಮ ಘಮಿಸುವ ರಸಭರಿತ ಮಾವಿನ ಹಣ್ಣು ಮಾರುಕಟ್ಟೆಗೆ ಕಾಲಿಡುತ್ತವೆ. ಈ ರಸವತ್ತಾದ ಹಣ್ಣಿನ ಅದ್ಭುತ ಸಿಹಿ ಮತ್ತು ಜನಪ್ರಿಯತೆಯಿಂದಾಗಿ ಅದನ್ನು 'ಹಣ್ಣುಗಳ ರಾಜ' ಎಂದು ಕರೆಯಲಾಗುತ್ತದೆ. ಮಾವಿನ ಹಣ್ಣು ಹಣ್ಣುಗಳ ರಾಜ ಎನ್ನುವ ವಿಚಾರ ಪುಟ್ಟ ಮಕ್ಕಳಿಗೂ ಗೊತ್ತಿದೆ. ಆದರೆ, ಹಣ್ಣುಗಳ ರಾಣಿ ಎಂದು ಯಾವ ಹಣ್ಣನ್ನು ಕರೆಯಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ.
ಎಲ್ಲಾ ಹಣ್ಣುಗಳಂತೆಯೇ ಪ್ರಕೃತಿಯ ಮತ್ತೊಂದು ಅದ್ಭುತ ಸೃಷ್ಟಿ ಈ 'ಮ್ಯಾಂಗೋಸ್ಟೀನ್' (Mangosteen).ಮಾವಿನ ಹಣ್ಣಿನ ಚರ್ಚೆಯ ನಡುವೆ ಮರೆಯಾಗಿರುವ ಈ ಮ್ಯಾಂಗೋಸ್ಟೀನ್, ಹಣ್ಣು ಪ್ರಿಯರ ಪಾಲಿನ ಅತ್ಯಮೂಲ್ಯ ನಿಧಿಯಾಗಿದೆ. ಇದೇ ಹಣ್ಣು ಜಗತ್ತಿನಾದ್ಯಂತ 'ಹಣ್ಣುಗಳ ರಾಣಿ' ಎನ್ನುವ ಗೌರವಕ್ಕೆ ಪಾತ್ರವಾಗಿದೆ.

ಹೇಗಿರುತ್ತೆ ಈ 'ರಾಣಿ'?
ಮ್ಯಾಂಗೋಸ್ಟೀನ್ ಹಣ್ಣಿನ ಹೊರಭಾಗವು ಕಡು ನೇರಳೆ ಬಣ್ಣದ ಗಟ್ಟಿ ಸಿಪ್ಪೆಯನ್ನು ಹೊಂದಿರುತ್ತದೆ. ಅದರ ಒಳಗಡೆ ಬಿಳಿ ಬಣ್ಣದ ಅತ್ಯಂತ ಮೃದುವಾದ ಹಾಗೂ ರಸಭರಿತವಾದ ತೊಳೆಗಳಿರುತ್ತವೆ. ಇದು ನೋಡುವುದಕ್ಕೂ ಸುಂದರವಾಗಿದ್ದು ತಿನ್ನುವುದಕ್ಕಂತೂ ಸಖತ್ ರುಚಿ. ಈ ಕಾರಣದಿಂದಲೇ ಜಾಗತಿಕ ಮಟ್ಟದಲ್ಲಿ ಪ್ರೀಮಿಯಂ ಹಣ್ಣುಗಳ ಸಾಲಿಗೆ ಈ ಹಣ್ಣನ್ನು ಸೇರಿಸಲಾಗಿದೆ. ಇದು ಕೇವಲ ಸಿಹಿಯಷ್ಟೇ ಅಲ್ಲದೆ, ಹುಳಿ ಮಿಶ್ರಿತ ಸಿಹಿಯ ಅದ್ಭುತ ರುಚಿಯನ್ನು ಹೊಂದಿರುತ್ತದೆ. ಹಲವು ಉಷ್ಣವಲಯದ ಹಣ್ಣುಗಳ ಮಿಶ್ರಣದಂತೆ ಇದರ ರುಚಿ ಎಂದು ವಿವರಿಸುವವರೂ ಇದ್ದಾರೆ.
ಇದೀಗ ಮ್ಯಾಂಗೋಸ್ಟೀನ್ ಸೀಸನ್. ಹಾಗಾಗಿ ಹಣ್ಣಿನ ಅಂಗಡಿಗಳಲ್ಲಿ, ಮಾರುಕಟ್ಟೆಗಳಲ್ಲಿ ಈ ಹಣ್ಣು ಯಥೇಚ್ಛವಾಗಿ ಕಾಣ ಸಿಗುತ್ತದೆ. ಹಣ್ಣುಗಳ ರಾಜನಿಗೆ ಹೋಲಿಸಿದರೆ ರಾಣಿ ಸ್ವಲ್ಪ ದುಬಾರಿ. ಆದರೆ ಒಮ್ಮೆ ತಿಂದವರು ಮತ್ತೆ ತಿನ್ನುವಷ್ಟು ರುಚಿ. ಥೈಲ್ಯಾಂಡ್, ಮಲೇಷ್ಯಾ ಮತ್ತು ಸಿಂಗಾಪುರದಂತಹ ಆಗ್ನೇಯ ಏಷ್ಯಾದ ಭಾಗಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ಸಿಹಿ ಮತ್ತು ಹುಳಿ ಮಿಶ್ರಿತ ಹಣ್ಣು ಥೈಲ್ಯಾಂಡ್‌ನ ರಾಷ್ಟ್ರೀಯ ಹಣ್ಣು ಕೂಡಾ ಹೌದು. ಈ ಹಣ್ಣು, ಕೇವಲ ರುಚಿಯಷ್ಟೇ ಅಲ್ಲದೆ ಆರೋಗ್ಯದ ಗಣಿಯಾಗಿದೆ.
ಆರೋಗ್ಯದ ಗಣಿ ಈ ಮ್ಯಾಂಗೋಸ್ಟೀನ್:
ಈ ಹಣ್ಣು ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕ್ಯಾಲೊರಿ ಮತ್ತು ಕೊಬ್ಬಿನಂಶ ತೀರಾ ಕಡಿಮೆ ಇರುತ್ತದೆ.
ರುಚಿ ಮತ್ತು ಪೌಷ್ಟಿಕಾಂಶಗಳ ಈ ಅಪರೂಪದ ಸಂಗಮವೇ ಮ್ಯಾಂಗೋಸ್ಟೀನ್‌ಗೆ 'ಹಣ್ಣುಗಳ ರಾಣಿ' ಎಂಬ ಬಿರುದನ್ನು ತಂದುಕೊಟ್ಟಿದೆ. ಜಗತ್ತಿನಾದ್ಯಂತ ಹಣ್ಣು ಪ್ರಿಯರಿಗೆ ಇದು ಕೇವಲ ಒಂದು ಹಣ್ಣಲ್ಲ, ಬದಲಿಗೆ ಅತ್ಯಂತ ರುಚಿಕರ ಹಾಗೂ ಪೌಷ್ಟಿಕ ಆಹಾರವಾಗಿದೆ.
ಆಂಟಿ-ಆಕ್ಸಿಡೆಂಟ್‌ಗಳ ಮಹಾಪೂರ:
ಮ್ಯಾಂಗೋಸ್ಟೀನ್ ಹಣ್ಣಿನಲ್ಲಿ 'ಕ್ಸಾಂಥೋನ್ಸ್' ಎಂಬ ಶಕ್ತಿಶಾಲಿ ನೈಸರ್ಗಿಕ ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇದು ದೇಹದಲ್ಲಿನ ಫ್ರೀ ರಾಡಿಕಲ್‌ಗಳನ್ನು ನಾಶಪಡಿಸುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಸಾಮಾನ್ಯ ಶೀತ, ಜ್ವರದಿಂದ ಹಿಡಿದು ಕ್ಯಾನ್ಸರ್ ಮತ್ತು ಹೃದಯರೋಗಗಳ ಅಪಾಯವನ್ನು ಇದು ತಡೆಯುತ್ತದೆ ಎನ್ನಲಾಗಿದೆ.
ರೋಗನಿರೋಧಕ ಶಕ್ತಿ ಹೆಚ್ಚಳ:
ಇದರಲ್ಲಿರುವ ಕ್ಸಾಂಥೋನ್ಸ್ ಮತ್ತು ವಿಟಮಿನ್ 'ಸಿ' ದೇಹದ ರೋಗನಿರೋಧಕ ಶಕ್ತಿಯನ್ನು ದುಪ್ಪಟ್ಟುಗೊಳಿಸುತ್ತದೆ. ವಿಟಮಿನ್ ಸಿ ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ನೀಡುತ್ತದೆ.
ಮುಟ್ಟಿನ ಸಮಸ್ಯೆಗೆ ಉತ್ತಮ ಪರಿಹಾರ:
ಮಹಿಳೆಯರಲ್ಲಿ ಕಾಡುವ ಅನಿಯಮಿತ ಮುಟ್ಟಿನ ಸಮಸ್ಯೆಗೆ ಮ್ಯಾಂಗೋಸ್ಟೀನ್ ಅತ್ಯುತ್ತಮ ಔಷಧಿ ಎಂದು ಹೇಳಲಾಗುತ್ತದೆ. ಇಂಡೋನೇಷ್ಯಾದಲ್ಲಿ ಸಾಂಪ್ರದಾಯಿಕವಾಗಿ ಇದರ ಬೇರುಗಳನ್ನು ಮುಟ್ಟಿನ ಚಕ್ರವನ್ನು ನಿಯಂತ್ರಿಸಲು ಬಳಸಲಾಗುತ್ತದೆ.
ರಕ್ತದೊತ್ತಡ ನಿಯಂತ್ರಣ ಮತ್ತು ಹೃದಯದ ಆರೋಗ್ಯ:
ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಹಣ್ಣು ಸಂಜೀವಿನಿಯಾಗಿದೆ. ಇದರಲ್ಲಿರುವ ಪೊಟ್ಯಾಸಿಯಮ್, ತಾಮ್ರ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತವೆ. ವಿಶೇಷವಾಗಿ ಪೊಟ್ಯಾಸಿಯಮ್ ದೇಹದಲ್ಲಿನ ಹೆಚ್ಚುವರಿ ಉಪ್ಪಿನ ದುಷ್ಪರಿಣಾಮವನ್ನು ಕಡಿಮೆ ಮಾಡಿ, ಹೃದಯಾಘಾತದ ಅಪಾಯವನ್ನು ತಪ್ಪಿಸುತ್ತದೆ.
ಕಾಂತಿಯುತ ಚರ್ಮಕ್ಕೆ ಸಹಕಾರಿ:
ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಈ ಹಣ್ಣು ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಮೊಡವೆಗಳನ್ನು ನಿಯಂತ್ರಿಸುವಲ್ಲಿ ಹಾಗೂ ವಯಸ್ಸಾದಂತೆ ಮುಖದ ಮೇಲಾಗುವ ಸುಕ್ಕುಗಳನ್ನು ತಡೆಯುವಲ್ಲಿ ಇದರಲ್ಲಿರುವ 'ಕ್ಯಾಟೆಚಿನ್' ಎಂಬ ಆಂಟಿ-ಆಕ್ಸಿಡೆಂಟ್ ಅದ್ಭುತವಾಗಿ ಕೆಲಸ ಮಾಡುತ್ತದೆ.
ಜೀರ್ಣಕ್ರಿಯೆ ಸಮಸ್ಯೆಗೆ ಮುಕ್ತಿ:
ಅಧಿಕ ನಾರಿನಂಶ ಹೊಂದಿರುವ ಮ್ಯಾಂಗೋಸ್ಟೀನ್ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಇದರ ಸಿಪ್ಪೆಯನ್ನು ಸಾಂಪ್ರದಾಯಿಕವಾಗಿ ಅತಿಸಾರ ಮತ್ತು ಭೇದಿ ರೋಗದ ಚಿಕಿತ್ಸೆಗೆ ಬಳಸಲಾಗುತ್ತದೆ. ಇದು ಕರುಳಿನ ಆರೋಗ್ಯಕ್ಕೆ ಪೂರಕವಾದ ಪ್ರೊಬಯೋಟಿಕ್ ಅಂಶವನ್ನು ಹೆಚ್ಚಿಸುತ್ತದೆ.
ತೂಕ ಇಳಿಕೆಗೆ ಸಹಕಾರಿ:
ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಹಣ್ಣು. 100 ಗ್ರಾಂ ಮ್ಯಾಂಗೋಸ್ಟೀನ್‌ನಲ್ಲಿ ಕೇವಲ 63 ಕ್ಯಾಲೋರಿಗಳಿರುತ್ತವೆ. ಇದರಲ್ಲಿ ಯಾವುದೇ ಸ್ಯಾಚುರೇಟೆಡ್ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇರುವುದಿಲ್ಲ. ನಾರಿನಂಶ ಹೆಚ್ಚಿರುವುದರಿಂದ ಇದು ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications