Union budget 2021: ಮೊದಲ ಬಾರಿ ಕಾಗದರಹಿತ ಬಜೆಟ್; ಬಹೀ ಖಾತಾದಿಂದ ಟ್ಯಾಬ್‌ನತ್ತ...
ನವದೆಹಲಿ, ಫೆಬ್ರವರಿ 01: ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿ ಕಾಗರರಹಿತ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ಬಜೆಟ್ ಸಂಪೂರ್ಣ ಕಾಗದರಹಿತ ಆಗಿರಲಿದೆ.
2019ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಬ್ರಿಟಿಷರ ಕಾಲದಿಂದ ಅನುಸರಿಸಿಕೊಂಡು ಬಂದಿದ್ದ ಬ್ರೀಫ್ ಕೇಸ್ ಸಂಪ್ರದಾಯ ಮುರಿಯುವ ಮೂಲಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಮೊಟ್ಟ ಮೊದಲ ಬಾರಿಗೆ ಬಜೆಟ್ ದಾಖಲೆಗಳನ್ನು ಬ್ರೀಫ್ ಕೇಸ್ ಬದಲು ಕೆಂಪು ವಸ್ತ್ರದಲ್ಲಿ ತಂದಿದ್ದರು. ಇದೀಗ ಮೊದಲ ಬಾರಿ ಕಾಗದರಹಿತ ಬಜೆಟ್ ಮಂಡನೆಯಾಗಲಿದ್ದು, ನಿರ್ಮಲಾ ಸೀತಾರಾಮನ್ ಟ್ಯಾಬ್ ಬಳಸಿಕೊಂಡು ಬಜೆಟ್ ಮಂಡನೆ ಮಾಡಲಿದ್ದಾರೆ. ಬಹೀ ಖಾತಾ ಎಂದು ಕರೆಸಿಕೊಳ್ಳುತ್ತಿದ್ದ ಕೆಂಪು ವಸ್ತ್ರದ ಬದಲು ಈ ಬಾರಿ ಟ್ಯಾಬ್ ಸಹಾಯದಿಂದ ಬಜೆಟ್ ಪ್ರಸ್ತುತಪಡಿಸಲಿರುವರು.
ಪ್ರತಿ ವರ್ಷವೂ ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿತ್ತು. ಈ ಮುದ್ರಣ ಪ್ರಕ್ರಿಯೆ ಹಲವು ನೌಕರರನ್ನು ಒಳಗೊಂಡಿದ್ದು, ಬಜೆಟ್ ಗೂ ಹದಿನೈದು ದಿನಗಳ ಮುಂಚೆ ಮುದ್ರಣ ಕಾರ್ಯ ಆರಂಭಗೊಳ್ಳುತ್ತಿತ್ತು. ಈ ಕಾಗದಗಳನ್ನು ಸೀಲ್ ಮಾಡಿ, ಬಜೆಟ್ ದಿನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕಿನ ಕಾರಣದಿಂದಾಗಿ ಸರ್ಕಾರ ಬಜೆಟ್ ಕಾಗದಗಳನ್ನು ಮುದ್ರಿಸದಿರುವ ನಿರ್ಧಾರ ತೆಗೆದುಕೊಂಡಿದೆ.

ಕಾಗದದ ಬದಲು ಸಾಫ್ಟ್ ಪ್ರತಿಗಳನ್ನು ನೀಡಲಾಗುತ್ತಿದೆ. ಫೆಬ್ರುವರಿ 1ರ ಬೆಳಿಗ್ಗೆ 11ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಬಜೆಟ್ ಅಧಿವೇಶನವು ಜನವರಿ 29ರಿಂದ ಆರಂಭಗೊಂಡು ಏಪ್ರಿಲ್ 8ರವರೆಗೂ ನಡೆಯಲಿದೆ. ಎರಡು ಭಾಗಗಳಲ್ಲಿ ಅಧಿವೇಶನ ನಡೆಯಲಿದ್ದು, ಮೊದಲು ಜನವರಿ 29ರಿಂದ ಫೆಬ್ರುವರಿ 15ರವರೆಗೆ ಹಾಗೂ ಮಾರ್ಚ್ 8ರಿಂದ ಏಪ್ರಿಲ್ 8ರವರೆಗೂ ಎರಡನೇ ಅಧಿವೇಶನ ನಡೆಯಲಿದೆ.












Click it and Unblock the Notifications