ವಿದೇಶಿಯರಿಗೆ ದೆಹಲಿ ಅತ್ಯಂತ ದುಬಾರಿ ನಗರ
ನವದೆಹಲಿ, ಸೆ.14: ವಿದೇಶಿಯರ ಪಾಲಿಗೆ ಭಾರತೀಯ ನಗರಗಳ ಪೈಕಿ ದೆಹಲಿ ಅತ್ಯಂತ ದುಬಾರಿ ನಗರ ಎನಿಸಿದೆ.
ಜಾಗತಿಕ ದುಬಾರಿ ನಗರಗಳ ಪಟ್ಟಿಯಲ್ಲಿ 174ನೇ ಸ್ಥಾನದಲ್ಲಿದೆ ಎಂದು ಇಸಿಎ ಇಂಟರ್‌ನ್ಯಾಶನಲ್ ಸಿದ್ಧಪಡಿಸಿದ 'ಜೀವನ ವೆಚ್ಚ' ಸಮೀಕ್ಷೆಯ ವರದಿಯಿಂದ ತಿಳಿದು ಬಂದಿದೆ.
ಒಂದು ವರ್ಷದ ಹಿಂದಿನ ಸ್ಥಿತಿಗೆ ಹೋಲಿಸಿದರೆ ನಿಧಾನ ಗತಿಯಲ್ಲಿ ಬೆಲೆಗಳು ಏರಿದರೂ, ಭಾರತೀಯ ನಗರಗಳು ವಿದೇಶೀಯರ ದುಬಾರಿ ನಗರಗಳ ಪಟ್ಟಿಯಲ್ಲಿ ಮೇಲಕ್ಕೇರಿವೆ. ಜಾಗತಿಕ ಮಟ್ಟದಲ್ಲಿ ಕಳೆದ ವರ್ಷ 208ನೇ ಸ್ಥಾನದಲ್ಲಿದ್ದ ದೆಹಲಿ ಈ ವರ್ಷ 174ನೇ ಸ್ಥಾನಕ್ಕೆ ಏರಿದೆ. ಕಳೆದ ವರ್ಷ ಜಾಗತಿಕ ಪಟ್ಟಿಯಲ್ಲಿ 225ನೇ ಸ್ಥಾನದಲ್ಲಿದ್ದ ಮುಂಬೈ ಈ ಬಾರಿ 197ನೇ ಸ್ಥಾನಕ್ಕೇರಿದೆ.
ಜಾಗತಿಕ ಪಟ್ಟಿಯಲ್ಲಿ ಪುಣೆ 209, ಚೆನ್ನೈ 214, ಬೆಂಗಳೂರು 220, ಕೋಲ್ಕತ 226 ಮತ್ತು ಹೈದರಾಬಾದ್ 227ನೇ ಸ್ಥಾನಗಳಲ್ಲಿವೆ.

ಇಸಿಎಯ ಶಾಪಿಂಗ್ ಬಾಸ್ಕೆಟ್‌ನಲ್ಲಿ ವಸ್ತುಗಳ ಬೆಲೆಗಳು, ಮುಖ್ಯವಾಗಿ ಆಹಾರ ಮತ್ತು ವಾಹನಗಳ ಬೆಲೆಗಳು ಕಳೆದ ವರ್ಷಕ್ಕಿಂತ ಹೆಚ್ಚು ನಿಧಾನವಾಗಿ ಏರಿಕೆಯಾಗಿರುವುದನ್ನು ಈ ವರ್ಷ ನಾವು ನೋಡಿದ್ದೇವೆ. ಸುಮಾರು 440 ನಗರಗಳ ಬಗ್ಗೆ ಸಮೀಕ್ಷೆ ನಡೆಸಿ ಈ ವರದಿ ನೀಡಲಾಗುತ್ತಿದೆ ಎಂದು ಇಸಿಎ ಇಂಟರ್‌ನ್ಯಾಶನಲ್ ರೀಜನಲ್-ಏಶ್ಯ ನಿರ್ದೇಶಕ ಲೀ ಕ್ವಾನೆ ಹೇಳಿದರು.
ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಪೈಕಿ ಶಾಂಘೈ ನಗರ ಅತ್ಯಂತ ದುಬಾರಿ ಎನಿಸಿದೆ.ಶಾಂಘೈ 8ನೇ ಸ್ಥಾನದಲ್ಲಿದ್ದರೆ, ಬೀಜಿಂಗ್ 9ನೇ ಸ್ಥಾನ ಹಾಗೂ ಸಿಯೋಲ್ 10ನೇ ಸ್ಥಾನದಲ್ಲಿದೆ. ದಕ್ಷಿಣ ಸುಡಾನ್ ನ ನಗರ ಜೂಬಾ ಅತ್ಯಂತ ದುಬಾರಿ ನಗರವಾಗಿದ್ದು, ನಂತರದ ಸ್ಥಾನದಲ್ಲಿ ಲುವಾಂಡಾ ಹಾಗೂ ಜ್ಯೂರಿಚ್ ಇದೆ. (ಪಿಟಿಐ)












Click it and Unblock the Notifications