ಮಕ್ಕಳ ಹಕ್ಕು ಆಯೋಗದಿಂದ ಪ್ರಿಯಾಂಕಾ ಗಾಂಧಿಗೆ ನೊಟೀಸ್
ನವದೆಹಲಿ, ಮೇ 02: ಪ್ರಿಯಾಂಕಾ ಗಾಂಧಿ ಮುಂದೆ ಮಕ್ಕಳು 'ಚೌಕೀಧಾರ್ ಚೋರ್ ಹೇ' ಘೋಷಣೆ ಕೂಗುತ್ತಿದ್ದ ವಿಡಿಯೋ ವೈರಲ್ ಆದ ನಂತರ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗವು ಪ್ರಿಯಾಂಕಾ ಗಾಂಧಿಗೆ ನೊಟೀಸ್ ಜಾರಿ ಮಾಡಿದೆ.
ಪ್ರಿಯಾಂಕಾ ಗಾಂಧಿ ಅವರು ಅಮೇಥಿಯಲ್ಲಿ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾಗ ಅಲ್ಲಿನ ಮಕ್ಕಳು ಪ್ರಿಯಾಂಕಾ ಗಾಂಧಿ ಎದುರು 'ಚೌಕೀಧಾರ್ ಚೋರ್ ಹೇ' ಘೋಷಣೆಗಳನ್ನು ಕೂಗಿದ್ದಾರೆ, ಆ ನಂತರ ಕೆಟ್ಟ ಪದವನ್ನೂ ಬಳಸಿದ್ದಾರೆ, ಆದರೆ ಆಗ ಪ್ರಿಯಾಂಕಾ ಗಾಂಧಿ ಮತ್ತು ಕೆಲವು ಮುಖಂಡರು ಮಕ್ಕಳನ್ನು ತಡೆದಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರ ಈ ವಿಡಿಯೋ ಭಾರಿ ವೈರಲ್ ಆಗಿತ್ತು, ಈ ವಿಡಿಯೋದ ಕೊನೆಯ ಭಾಗವನ್ನು ಎಡಿಟ್ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಿಯಾಂಕಾ ಗಾಂಧಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಗುಮಾನಿಯಿಂದ ಈಗ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗವು ಪ್ರಿಯಾಂಕಾ ಗಾಂಧಿ ಅವರಿಗೆ ನೊಟೀಸ್ ನೀಡಿದ್ದು, ಪ್ರಚಾರ ನಡೆದ ಸ್ಥಳ, ಆ ಮಕ್ಕಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಕೋರಿದೆ.
ಮಕ್ಕಳನ್ನು ಆ ಸ್ಥಳಕ್ಕೆ ಕರೆದುಕೊಂಡು ಬಂದದ್ದು ಹೇಗೆ, ಅವರನ್ನು ಬಲವಂತದಿಂದ ಕರೆತರಲಾಗಿದೆಯೇ ಎಂಬಿತ್ಯಾದಿ ಮಾಹಿತಿ ಬಗ್ಗೆ ಮೂರು ದಿನಗಳ ಒಳಗಾಗಿ ಮಾಹಿತಿ ನೀಡುವಂತೆ ಆಯೋಗವು ಹೇಳಿದೆ.
ಪ್ರಿಯಾಂಕಾ ಗಾಂಧಿ ಅವರ ವೈರಲ್ ಆಗಿರುವ ವಿಡಿಯೋ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗವು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದೆ.












Click it and Unblock the Notifications