ತಾಯಿಯ ಚಿತ್ರ ನೋಡಿ ಕದ್ದ ಪರ್ಸ್ ಹಿಂತಿರುಗಿಸಿದ ಕಳ್ಳ!
ನವದೆಹಲಿ, ಸೆ. 18: ಮೊಹಮ್ಮದ್ ಅಸ್ಲಾಂ ಎಂಬುವವರಿಗೆ ತಾವು ಕಳೆದುಕೊಂಡಿದ್ದ ಪರ್ಸ್ ಕೊರಿಯರ್ ಮೂಲಕ ಬಂದಾಗ ನಂಬಲು ಸಾಧ್ಯವಾಗಲಿಲ್ಲ. ಪೊಲೀಸರಿಗೆ ದೂರು ನೀಡಿದರೂ ಸಿಗದ ಪರ್ಸ್, ಮನೆಗೆ ಬಂದಿದ್ದು ಹೇಗೆ? ಏಕೆ? ಎಂಬುದರ ಬಗ್ಗೆ ತಿಳಿದು ಇನ್ನಷ್ಟು ಅಚ್ಚರಿಗೊಳಗಾಗಿದ್ದಾರೆ.
ಜುಲೈ 25ರಂದು ಪತ್ನಿಯ ಚಿಕಿತ್ಸೆಗಾಗಿ ದೆಹಲಿಗೆ ಮೊಹಮ್ಮದ್ ಅಸ್ಲಾಂ ಹೋಗಿದ್ದರು, ಈ ಸಂದರ್ಭದಲ್ಲಿ ಮಟ್ಕೇವಾಲಿ ಗಲ್ಲಿಯಲ್ಲಿ ತಮ್ಮ ಪರ್ಸ್ ಕಳೆದುಕೊಂಡಿದ್ದರು. ಈ ಬಗ್ಗೆ ಸರ್ದಾರ್ ಬಜಾರ್ ಪೊಲೀಸರಿಗೆ ಈ ಬಗ್ಗೆ ದೂರನ್ನೂ ನೀಡಿದ್ದರು. ಪರ್ಸ್ ನಲ್ಲಿ 1,200 ರೂಪಾಯಿ ನಗದು, ಪಾನ್‌ಕಾರ್ಡ್, ಡ್ರೈವಿಂಗ್ ಲೈಸನ್ಸ್, ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳಿತ್ತು.

ನಂತರ ಮಧ್ಯಪ್ರದೇಶದಲ್ಲಿರುವ ತಮ್ಮ ಊರಿಗೆ ಮೊಹಮ್ಮದ್ ತೆರಳಿದರು. ಆದರೆ, ಆ ಪರ್ಸ್ ಕದ್ದಿದ್ದ ಜೇಬುಗಳ್ಳನೊಬ್ಬ 1,200 ರೂ. ನಗದು ಹೊರತುಪಡಿಸಿ ಮಿಕ್ಕ ಎಲ್ಲಾ ದಾಖಲೆಗಳನ್ನು ಇಟ್ಟು ಪರ್ಸ್ ಕೊರಿಯರ್ ಮಾಡಿದ್ದಾನೆ. ಜತೆಗೆ ಪ್ರತ್ಯೇಕ ಚೀಟಿಯಲ್ಲಿ ತನ್ನ ದೂರವಾಣಿ ಸಂಖ್ಯೆಯನ್ನೂ ಕಳುಹಿಸಿದ್ದಾನೆ.
ಈ ಪ್ರಾಮಾಣಿಕತೆ ಮೆರೆದ ದೆಹಲಿಯ ಜೇಬುಗಳ್ಳನ ಬಗ್ಗೆ ತಿಳಿಯಲು ಮೊಹಮ್ಮದ್ ಅವರು ಆತನ ನಂಬರ್ ಗೆ ಕರೆ ಮಾಡಿದ್ದಾರೆ. 'ಹಣದ ಅಗತ್ಯ ಇದ್ದ ಕಾರಣ 1,200 ರೂ. ಇಟ್ಟುಕೊಂಡು, ಉಳಿದೆಲ್ಲವನ್ನೂ ವಾಪಸ್ ಮಾಡಿದ್ದೇನೆ. "ನಿಮ್ಮ ತಾಯಿಯ ಫೋಟೊ ಪರ್ಸ್ ನಲ್ಲಿತ್ತು. ನಾನು ಕೂಡಾ ತಾಯಿಯನ್ನು ಪ್ರೀತಿಸುತ್ತೇನೆ. ಆದ್ದರಿಂದ ಪರ್ಸ್ ಮರಳಿಸಿದ್ದೇನೆ" ಎಂದು ಉತ್ತರಿಸಿದ್ದಾನೆ.












Click it and Unblock the Notifications