ಪ್ರತಿಭಟನಾ ನಿರತ ರೈತರು ಗೂಂಡಾಗಳು ಹೇಳಿಕೆ: ಸಚಿವೆ ಮೀನಾಕ್ಷಿ ಲೇಖಿ ಕ್ಷಮೆ ಯಾಚನೆ
ನವದೆಹಲಿ, ಜುಲೈ 23: ಪ್ರತಿಭಟನಾ ನಿರತ ರೈತರನ್ನು ಗೂಂಡಾಗಳು ಎಂದು ಕರೆದಿದ್ದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಇದೀಗ ರೈತರ ಬಳಿ ಕ್ಷಮೆ ಯಾಚಿಸಿದ್ದಾರೆ.
ಜಂತರ್ ಮಂಥರ್ ನಲ್ಲಿ ಮಾಧ್ಯಮ ಸಿಬ್ಬಂದಿ ಮೇಲೆ ದಾಳಿ ಆರೋಪ ಕುರಿತಂತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮೀನಾಕ್ಷಿ ಲೇಖಿ ಈ ರೀತಿಯ ಹೇಳಿಕೆ ನೀಡಿದ್ದರು. ಪ್ರತಿಪಕ್ಷಗಳು ಇಂತಹ ಚಟುವಟಿಕೆಗಳನ್ನು ಪ್ರಚೋದಿಸುತ್ತಿವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವರು ಆರೋಪಿಸಿದ್ದರು.
ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ, ಗೂಂಡಾಗಳು, ಇವುಗಳು ಅಪರಾಧ ಚಟುವಟಿಕೆಗಳಾಗಿವೆ, ಜನವರಿ 26 ರಂದು ಸಂಭವಿಸಿದ ಘಟನೆಗಳು ಕೂಡಾ ನಾಚಿಕೆಗೇಡಿನ ಅಪರಾಧ ಚಟುವಟಿಕೆಗಳಾಗಿವೆ. ಇಂತಹ ಚಟುವಟಿಕೆಗಳನ್ನು ಪ್ರತಿಪಕ್ಷಗಳು ಪ್ರಚೋದಿಸುತ್ತಿವೆ ಎಂದು ಹೇಳಿದ್ದರು.

ಮೀನಾಕ್ಷಿ ಲೇಖಿ ವಿರುದ್ಧ ವಾಗ್ದಾಳಿ ನಡೆಸಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ರೈತರು ಅನ್ನದಾತರು, ಅವರನ್ನು ಗೂಂಡಾಗಳು ಅಂತ ಹೆಸರಿನಿಂದ ಕರೆದಿರುವುದು ಸರಿಯಾಗಿಲ್ಲ. ನಾವು ರೈತರು, ಗೂಂಡಾಗಳಲ್ಲ, ರೈತರು ನೆಲದ ಅನ್ನದಾತರು ಎಂದಿದ್ದರು.
ಮೀನಾಕ್ಷಿ ಲೇಖಿ ನೀಡಿರುವ ಹೇಳಿಕೆ ದೇಶದ 80 ಕೋಟಿ ರೈತರಿಗೆ ಅಪಮಾನ ಮಾಡಿದೆ. ನಾವು ಗೂಂಡಾಗಳಾದರೆ, ನಾವು ಬೆಳೆದ ಆಹಾರ ಧಾನ್ಯ ತಿನ್ನುವುದನ್ನು ಮೀನಾಕ್ಷಿ ಲೇಖಿ ನಿಲ್ಲಿಸಬೇಕು. ಅವರಿಗೆ ನಾಚಿಕೆಯಾಗಬೇಕು, ಆಕೆಯ ಹೇಳಿಕೆ ಖಂಡಿಸಿ ರೈತರ ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ರೈತ ಮುಖಂಡ ಶಿವ ಕುಮಾರ್ ತಿಳಿಸಿದರು. ಇದೀಗ ಅವರ ಹೇಳಿಕೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕ್ಷಮೆ ಕೇಳಿದ್ದಾರೆ.












Click it and Unblock the Notifications